ಆಧುನಿಕ ಭಾರತದ ಇತಿಹಾಸ ಕಥನದಲ್ಲಿ ದಲಿತ ಚಳವಳಿಯ ವಿಶ್ಲೇಷಣೆ


ಆಧುನಿಕ ಭಾರತದ ಇತಿಹಾಸ ಕಥನದಲ್ಲಿ ದಲಿತ ಚಳವಳಿಯ ವಿಶ್ಲೇಷಣೆ(ಭಾಗ-1)

ಮಂಗಳವಾರ – ಜುಲೈ -06-2010

ಆಧುನಿಕ ಭಾರತದ ಇತಿಹಾಸ ಮರುನಿರೂಪಣೆಯ ಪ್ರಕ್ರಿಯೆಯಲ್ಲಿ ದಲಿತ ಚಳವಳಿಗೆ ಇತಿಹಾಸಕಾರರಿಂದ ಸಿಗಬೇಕಾದ ಗೌರವ ದೊರೆಯದಿರುವುದು ವಿಷಾದನೀಯ. ದಲಿತರನ್ನು ತೀರ ಇತ್ತೀಚಿನವರೆಗೂ ತಮ್ಮದೇ ಇತಿಹಾಸವಿರದ ಸಮುದಾಯವೆಂದು ಗ್ರಹಿಸಲಾಗಿದೆ ಮತ್ತು ಅವರ ಹೋರಾಟವನ್ನು ಕಡೆಗಣಿಸಲಾಗಿದೆ. ಈ ದೇಶದ ಇತಿಹಾಸದಲ್ಲಿ ದಲಿತರನ್ನು ಕೇವಲ objectಗಳನ್ನಾಗಿ ಪರಿಗಣಿಸಲಾಗಿದೆ ವಿನ: subjectಗಳನ್ನಾಗಿ ಅಲ್ಲ.

ಬ್ರಿಟಿಷ್ ಇತಿಹಾಸಕಾರರಾದ ಥಾಮ್ಸನ್ ಮತ್ತು ಗ್ಯಾರೆಟ್ ಅವರ ಸಂಪಾದಕತ್ವದಲ್ಲಿ ಪ್ರಕಟವಾದ ‘‘ರೈಸ್ ಆಯಂಡ್ ಫುಲ್‌ಫಿಲ್ ಮೆಂಟ್ ಆಫ್ ಬ್ರಿಟಿಷ್ ರೂಲ್ ಇನ್ ಇಂಡಿಯಾ’’  ಎಂಬ ಗ್ರಂಥದಲ್ಲಿ ದಲಿತ ಚಳವಳಿಯ ಕುರಿತು ಕೆಲವು ಮಾಹಿತಿ ನೀಡುತ್ತಾರೆ.

ಆದರೂ ಅದನ್ನು ಅವರು ವಿಶ್ಲೇಷಿಸುವುದಿಲ್ಲ. ವಿನ್ಸೆಂಟ್ ಸ್ಮಿತ್ ಅವರ ‘‘ಆಕ್ಸ್‌ಫರ್ಡ್ ಹಿಸ್ಟರಿ ಆಫ್ ಇಂಡಿಯಾ’’ ಮತ್ತು ಪಿ.ಇ. ರಾಬರ್ಟ್ಸ್ ಅವರ ‘‘ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ ಅಂಡರ್ ದಿ ಕಂಪೆನಿ ಆಯಂಡ್ ದಿ ಕ್ರೌನ್’’ ಎಂಬ ಎರಡು ಪುಸ್ತಕಗಳನ್ನು ಪುನರ್‌ಪರಿಶೀಲನೆ ಮಾಡುವಾಗ ಪರ್ಸವಲ್ ಸ್ಪಿಯರ್‌ರವರು ಗಾಂಧೀಜಿಯವರ ಹೋರಾಟದ ಕುರಿತು ಚರ್ಚಿಸುತ್ತಾ, ಗಾಂಧಿ ದುರ್ಬಲ ವರ್ಗದವರ ಏಳಿಗೆಗಾಗಿ ನಡೆಸಿದ ಚಳವಳಿಯ ಮುಖಂಡರಾಗಿದ್ದರು ಎಂದು ಬಣ್ಣಿಸುತ್ತಾರೆ.

ಆದರೆ, ಅಂಬೇಡ್ಕರ್ ಒಬ್ಬರು ಅಸಾ ಮಾನ್ಯ, ಧೈರ್ಯವಂತ ದಲಿತ ಸಮು ದಾಯದ ಮುಖಂಡನೆಂದು ಪರ್ಸಿವಲ್ ಸ್ಪಿಯರ್ ಒಪ್ಪಿಕೊಳ್ಳುವುದಿಲ್ಲ. ಆಧುನಿಕ ಭಾರತದ ಕುರಿತು ಬರೆದ ಆರಂಭಿಕ ಬ್ರಿಟಿಷ್ ಇತಿಹಾಸಕಾರರಲ್ಲಿ ಎಲ್.ಎಸ್.ಎಸ್. ಓಮಲ್ಲೆಯವರು ದಲಿತ ಚಳವಳಿಯ ಕುರಿತು ಪ್ರತ್ಯೇಕವಾಗಿ ಚರ್ಚಿಸುತ್ತಾರೆ.

ಈ ಚಳವಳಿಯು ಅಸ್ಪೃಶರ ಏಳಿಗೆಗಾಗಿ ದಲಿತೇತರ ಮುಖಂಡರು ನಡೆಸಿದ ಚಳವಳಿ ಎಂದೇ ಗುರುತಿಸುತ್ತಾರೆ. ಇತ್ತೀಚೆಗಿನ ಬರಹ ಗಾರ್ತಿ ಜೂಡಿತ್ ಬ್ರೌನ್ ಅವರು ದಲಿತರ ಸ್ಥಿತಿಗತಿಗಳನ್ನು ಕುರಿತು ಸ್ವಲ್ಪ ಮಟ್ಟಿಗೆ ಚರ್ಚಿಸು ತ್ತಾರಾದರೂ ದಲಿತರೇ ತಮ್ಮ ಸಮಸ್ಯೆಗಳನ್ನು ನಿರ್ಮೂಲನಗೊಳಿಸಲು ನಡೆಸಿದ ಸಂಘಟಿತ ಹೋರಾಟವನ್ನು ಪರಿಗಣಿಸಲು ಅವರು ಯಶಸ್ವಿಯಾಗಿರಲಿಲ್ಲ.

ಭಾರತೀಯ ಇತಿಹಾಸಕಾರರೂ ಕೂಡ ದಲಿತ ಚಳವಳಿಯ ಬಗ್ಗೆ ಬೆಳಕು ಚೆಲ್ಲಲು ಹೆಚ್ಚಿನ ಪ್ರಯತ್ನವನ್ನೇನೂ ಮಾಡಿರುವುದು ಕಂಡುಬರುವುದಿಲ್ಲ. ಅವರು ದಲಿತರ ಕುರಿತು ಬರೆದಿರುವುದು ಸಾಮಾಜಿಕ ಸುಧಾರಣೆಯನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಮಾತ್ರ. ಅದರಲ್ಲೂ ಅವರನ್ನು, ಅವರ ಸಂಘಟಿತ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದನ್ನು ಗುರುತಿಸಲಿಲ್ಲ. ಬದಲಾಗಿ, ನಿಷ್ಕ್ರಿಯರಾಗಿ ಬಲಿಗೊಳಗಾದವರು, ಕೇವಲ ಸವಲತ್ತುಗಳ ಅನುಭೋಗಕ್ಕಾಗಿ ಮಾತ್ರ ಅವರು ಈ ಸಮಾಜದಲ್ಲಿ ಹುಟ್ಟಿದವರು ಎಂದು ಚಿತ್ರಿಸಲಾಗಿದೆ.

ರಾಷ್ಟ್ರವಾದಿ ಇತಿಹಾಸಕಾರ ಆರ್.ಸಿ. ಮಜುಂದಾರ್‌ರವರು ದಲಿತ ಚಳವಳಿಯ ಕುರಿತು ಕೇವಲ ಒಂದೇ ಒಂದು ಪಾರವನ್ನು ಮೀಸಲಿಟ್ಟಿದ್ದರು. ಅಲ್ಲದೆ, ಮೇಲ್ವರ್ಗದವರಡಿಯಲ್ಲಿ ಜೀತದಾಳಾಗಿ, ಅವರ ಚಾಕರಿ ಮಾಡಲು ಮಾತ್ರ ಅರ್ಹರೆಂಬ ದಾಟಿಯಲ್ಲಿ ದಲಿತರನ್ನು ಗುರುತಿಸುತ್ತಾರೆ. ಆರ್. ಆರ್. ಸೇತಿಯವರು ದಲಿತರನ್ನು ಕುರಿತು ಪ್ರಸ್ತಾಪಿಸುವುದು 1932ರ ಕಮ್ಯೂನಲ್ ಅವಾರ್ಡ್ ವಿಷಯವನ್ನು ವಿವರಿಸುವ ಸಂದರ್ಭದಲ್ಲಿ ಮತ್ತು ಸಾಮಾಜಿಕ ಉದ್ಧಾರಕ್ಕಾಗಿ ನಡೆಸಿದ ಯೋಜನೆಯಡಿಯಲ್ಲಿ ಸವಲತ್ತುಗಳನ್ನು ಪಡೆಯಲು ಅರ್ಹರಾದ objectಗಳೆಂದು ಬಣ್ಣಿಸುತ್ತಾರೆ.

ಆರ್.ಸಿ. ಮಜುಂದಾರ್‌ರವರು ಇನ್ನೊಂದು ಕೃತಿಯಲ್ಲಿ ಅಂಬೇಡ್ಕರ್ ಮತ್ತು ದಲಿತರನ್ನು ಕುರಿತು ಪ್ರಸ್ತಾಪಿಸಿದರೂ ಕೂಡ, ದಲಿತರು 1930 ಮತ್ತು 40ರ ದಶಕಗಳಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕಾಗಿ ನಡೆಸಿದ ಚಳವಳಿಯಲ್ಲಿ ತಮ್ಮ ಸ್ವಾರ್ಥ ರಾಜಕೀಯ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ರಾಜಕೀಯ ಮಾಡಲೋಸ್ಕರ ಭಾಗವಹಿಸಿದವರೆಂದು ತಿಳಿಸುತ್ತಾರೆ. ಇದೇ ಇತಿಹಾಸಕಾರ ಗಾಂಧೀಜಿಯವರನ್ನು ಈ ದೇಶ ಕಂಡ ಅಪರೂಪದ ಸಮಾಜ ಸುಧಾರಕರೆಂದು ವೈಭವೀಕರಿಸಿದ್ದು ಅಲ್ಲದೆ, ಕಾಂಗ್ರೆಸ್ ಪಕ್ಷವೇ ದಲಿತರ ಉದ್ಧಾರಕ್ಕಾಗಿ ನಿರಂತರ ಹೋರಾಟ ನಡೆಸಿದ ಸಂಘಟನೆ ಎಂದು ಅಭಿಪ್ರಾಯಪಡುತ್ತಾರೆ.

ಜೊತೆಗೆ, ಅಂಬೇಡ್ಕರ್‌ವರನ್ನು ಕೇವಲ ಭಾರತೀಯ ಜಾತಿ ವ್ಯವಸ್ಥೆಯ ವಿಮರ್ಶಕ, ಟೀಕಾಕಾರ ಎಂದು ಚಿತ್ರಿಸುತ್ತಾರೆ. ಈ ನಡುವೆ ಬಿಪನ್ ಚಂದ್ರರವರು ದಿ ಸ್ಟ್ರಗಲ್ ಎಗೈಂಸ್ಟ್ ಕಾಸ್ಟ್   ಎಂಬ ಅಧ್ಯಾಯದಲ್ಲಿ ದಲಿತ ಚಳ ವಳಿಯ ಕುರಿತು ಸ್ವಲ್ಪ ವಿವರಣೆ ನೀಡುತ್ತಾರೆ. ಹಿಂದಿನ ಇತಿಹಾಸಕಾರರಿಗಿಂತ ಬಿಪನ್ ಚಂದ್ರ ರವರು ಸ್ವಲ್ಪ ವಾಸಿ ಎನ್ನಬಹುದು, ಏಕೆಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ದಲಿತರು ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂಬುದನ್ನು ಅವರು ಗೌರವಿಸುತ್ತಾರೆ. ಆದಾಗ್ಯೂ, ಬಿಪನ್ ಅವರು ತಮ್ಮ ಇನ್ನೊಂದು ಪುಸ್ತಕದಲ್ಲಿ ಗಾಂಧೀಜಿಯ ವರ ‘‘ಹರಿಜನ್ ಅಪ್‌ಲಿಫ್ಟ್ ಮೂವ್ ಮೆಂಟ್’’ನ್ನು ಮಾತ್ರ ಚರ್ಚಿಸುತ್ತಾರೆ. ಕೊನೆ ಯದಾಗಿ, ಸುಮಿತ್ ಸರ್ಕಾರ್‌ರವರು ಮಹಾರ್ ಚಳವಳಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರೂ ಕೂಡ, ಅದನ್ನು ಅವರು 1930ರ ದಶಕದಲ್ಲಿ ಗಾಂಧೀಜಿಯವರು ಹರಿಜನ್ ಪತ್ರಿಕೆಯ ಪ್ರಚಾರವನ್ನು ಉದ್ದೇಶಿಸಿ ಬರೆಯುವ ಸಂದರ್ಭದಲ್ಲಿ ಮಾತ್ರ.

ಈ ಮೇಲಿನ ಇತಿಹಾಸಕಥನವನ್ನು ಸೂಕ್ಷ್ಮ ವಾಗಿ ಗಮನಿಸಿದಾಗ ಒಂದು ಮುಖ್ಯ ಅಂಶ ಬೆಳಕಿಗೆ ಬರುತ್ತದೆ. ಅದೇನೆಂದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ದಲಿತ ಚಳವಳಿ ಅಂತ ಒಂದು ಹೋರಾಟ ಸೈದ್ಧಾಂತಿಕ ನೆಲೆಯಲ್ಲಿ ನಡೆದೇ ಇರಲಿಲ್ಲ ಎಂದು ಮೇಲೆ ಪ್ರಸ್ತಾಪಿಸಿದ ಇತಿಹಾಸಕಾರರು ಮನಗಂಡಿದ್ದಾರೆ ಮತ್ತು ಅಂತಹ ಮನೋಭಾವನೆ ಬರುವಂತೆ ಆಧುನಿಕ ಭಾರತದ ಇತಿಹಾಸವನ್ನು ರಚಿಸಿದ್ದಾರೆ.

ಈ ಎಲ್ಲಾ ಇತಿಹಾಸಕಾರರು ದಲಿತರು ಉದ್ಧಾರ ಆಗುವ ಒಂದು ಸಮುದಾಯವೇ ಅಲ್ಲ ಎಂದು ತಿಳಿದಿದ್ದಾರೆ. ಒಂದು ವೇಳೆ ಅವರು ಸ್ವತಂತ್ರ ಬದುಕನ್ನು ನಡೆಸಲು ಶಕ್ತಿ ಪಡೆದುದು ಹೌದಾ ದರೆ, ಅದು ಸಾಮಾಜಿಕ ಕಳಕಳಿ ಹೊಂದಿದ್ದ ಮೇಲ್ಜಾತಿಯ ಮುಖಂಡರು ತೋರಿದ ಅನು ಕಂಪ ಮತ್ತು ಅವರು ದಲಿತ ಪರ ನಡೆಸಿದ ಹೋರಾಟದ ಫಲಶ್ರುತಿಯೆಂದು ಸಮರ್ಥಿಸು ತ್ತಾರೆ. ಇಂತಹ ದೃಷ್ಟಿಕೋನವು ಎಲಿಟಿಸ್ಟ್ ಆಗಿರುವುದಲ್ಲದೆ ಒಂದು ಮನೋಧರ್ಮದ ಅಡಿಯಲ್ಲಿ ಹುಟ್ಟಿಕೊಂಡ ಇತಿಹಾಸರಚನಾ ಮಾದರಿಯಾಗಿದೆ.

1969ರಲ್ಲಿ ಇಲಾನೀರ್ ಝೇಲಿಯಟ್ ಅವರ ಪಿ.ಎಚ್.ಡಿ. ಮಹಾಪ್ರಬಂಧದ ಚಿಂತನೆಯನ್ನೊಳಗೊಂಡ ಸಂಶೋಧನಾ ಕೃತಿಯ ಪ್ರಕಟಣೆಯೊಂದಿಗೆ ದಲಿತ ಚಳವಳಿಯನ್ನು ಉದ್ದೇಶಿಸಿ ಅನೇಕ ಗ್ರಂಥಗಳು ಪ್ರಕಟಣೆಯಾಗಲು ಆರಂಭವಾಯಿತು. ಈ ಗ್ರಂಥಗಳಿಂದ ದಲಿತ ಚಳವಳಿಯ ಕುರಿತು ಇರುವ ಪೂರ್ವಗ್ರಹ ಪೀಡಿತ ಗ್ರಹಿಕೆಗಳು ಬದಿಗೊತ್ತಲ್ಪಟ್ಟು ಪ್ರಮುಖ ವಾದ ಒಂದು ವಿಚಾರವನ್ನು ಸಾರ್ವತ್ರಿಕವಾಗಿ ಬಹಿರಂಗಪಡಿಸುತ್ತವೆ.

ಅಂದರೆ, ಭಾರತದಲ್ಲಿ 1919ರ ಸಂವಿಧಾನ ಅನು ಷ್ಠಾನಕ್ಕೆ ಬರುವ ಮೊದಲೇ ದಲಿತ ಚಳವಳಿ ಸಕ್ರಿಯವಾಗಿ ಸ್ವಾತಂತ್ರ್ಯ ಚಳವಳಿಯ ಜೊತೆಗೆ ಬೆಳೆದಿದೆ ಎಂಬುದಕ್ಕೆ ಅನೇಕ ಪುರಾವೆಗಳನ್ನು ಮತ್ತು ಸಮರ್ಥನೆಗಳನ್ನು 1969ರ ನಂತರ ಪ್ರಕಟವಾದ ಕೃತಿಗಳು ನೀಡುತ್ತವೆ. ಈ ಚಳವಳಿ ಆ ಕಾಲಕ್ಕೆ ಬಲಿಷ್ಠವಾಗಿ ಬೆಳೆದಿರುವುದಲ್ಲದೆ, 1920ರ ಮತ್ತು 30ರ ದಶಕಗಳಲ್ಲಿ ದೇಶದ ಇತಿಹಾಸದಲ್ಲಿ ರಾಜಕೀಯವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು ಎಂಬುದನ್ನು ಸಾದರಪಡಿಸುತ್ತವೆ.

ಮುಸ್ಲಿಂ ಲೀಗ್ ಅಥವಾ ಹಿಂದೂ ಮಹಾಸಭಾದಂತಹ ಸಂಘಟನೆಗಳನ್ನು ಗಮನಿಸಿದರೆ ದಲಿತರಿಗೆ ಅಷ್ಟೊಂದು ಪ್ರಬಲ ಸಂಘಟನೆಗಳು ಸ್ವತಂತ್ರ ವಾಗಿ ಬೆಳೆಯದೇ ಇದ್ದಿರಬಹುದು. ಆದರೆ, ಗ್ರಾಮೀಣ ಮಟ್ಟದಲ್ಲಿ ಬಹಳಷ್ಟು ಸಂಘಟನೆ ಗಳು ದಲಿತರ ಪರವಾಗಿ ಕೆಲಸ ಮಾಡಲು ಕಾರ್ಯಪ್ರವೃತ್ತವಾಗಿದ್ದವು. ಅವರಲ್ಲೂ ಗೌರವಾ ನ್ವಿತ ಮುಖಂಡರೂ ಇದ್ದರು ಎಂಬುದಕ್ಕೆ ಬಿ. ಆರ್. ಅಂಬೇಡ್ಕರ್‌ರವರೇ ಸಾಕ್ಷಿ.

ಇವರೂ ಕೂಡ ದಲಿತರಿಗೋಸ್ಕರ ರಾಜಕೀಯ ರಂಗ ದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳುವ ಆಶಯದೊಂದಿಗೆ ಕಾನೂನುಬದ್ಧವಾದ ಬೇಡಿಕೆ ಗಳನ್ನು ರೂಪಿಸಿಕೊಂಡಿದ್ದರು. ಈ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ರಾಜಕೀಯ ಪ್ರಾತಿನಿಧ್ಯ ಪಡೆದು ಸಮಾನತೆ, ನ್ಯಾಯಕ್ಕಾಗಿ ಮತ್ತು ಸ್ವಾವಲಂಬನೆಗಾಗಿ ಹೋರಾಟ ನಡೆಸಲು ತಯಾರಿ ನಡೆಸಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಈ ಎಲ್ಲಾ ಬೇಡಿಕೆಗಳು 1950ರಲ್ಲಿ ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಅಳವಡಿಸಲಾಗಿರು ವುದು ಮಹತ್ತರವಾಗಿದೆ.

-ಡಾ. ಬಾರ್ಕೂರು ಉದಯ

http://beta.varthabharathi.net/Writer/15564/

ಆಧುನಿಕ ಭಾರತದ ಇತಿಹಾಸ ಕಥನದಲ್ಲಿ ದಲಿತ ಚಳವಳಿಯ ವಿಶ್ಲೇಷಣೆ (ಭಾಗ-2)

ಬುಧವಾರ – ಜುಲೈ -07-2010

1992ರಲ್ಲಿ ಝೇಲಿಯಟ್‌ರವರೇ ಈ ಎಲ್ಲಾ ಲೇಖನಗಳನ್ನು ಒಂದುಗೂಡಿಸಿ ಪುಸ್ತಕ ರೂಪ ದಲ್ಲಿ ಪ್ರಕಟಿಸಿದ್ದರು. ಝೇಲಿಯಟ್‌ರವರ ಒಟ್ಟಾರೆ ಆಶಯವೇನೆಂದರೆ ದಲಿತರ ಹೋರಾಟವು ಆರಂಭದಲ್ಲಿ ಮಹಾರಾಷ್ಟ್ರದ ಮಹಾರ್ ಸಮುದಾಯವನ್ನು ಕೇಂದ್ರೀಕರಿಸಿ 1890ರಲ್ಲಿ ಹುಟ್ಟಿಕೊಂಡು, ಆ ನಂತರದ ದಿನಗಳಲ್ಲಿ ಅದೊಂದು ರಾಜಕೀಯ ಶಕ್ತಿಯಾಗಿ ಅಂಬೇಡ್ಕರ್ ನೇತೃತ್ವದಲ್ಲಿ ಇಡೀ ದೇಶದಲ್ಲಿ ದಲಿತ ವರ್ಗದ ಧ್ವನಿಯಾಗಿ ಬೆಳೆದಿರುವ ಸತ್ಯ ಘಟನೆಯನ್ನು ಇತಿಹಾಸ ಪುಟಕ್ಕೆ ಸೇರಿಸುವ ಪ್ರಯತ್ನವಾಗಿದೆ. ಈ ಪುಸ್ತಕದ ಕೊನೆಯಲ್ಲಿ ಉಪ ಸಂಹಾರ ಶೀರ್ಷಿಕೆಯಡಿಯಲ್ಲಿ ಅಂಬೇಡ್ಕರ್ ಮರಣಾನಂತರ ದಲಿತ ಚಳವಳಿಯ ಬೆಳವಣಿಗೆ ಮತ್ತು ಅದರ ಪ್ರಸ್ತುತತೆಯನ್ನು ಚರ್ಚಿಸಲಾಗಿದೆ.

ಅಂಬೇಡ್ಕರ್ ದಲಿತರನ್ನು ದ್ದೇಶಿಸಿ ಆರಂಭಿಸಿದ ಹೋರಾಟದಲ್ಲಿ ಕೂಡ ಆ ಸಮುದಾಯದ ಏಳಿಗೆಗಾಗಿ ಆಧುನಿಕ ಮಾರ್ಗಗಳನ್ನು ಅನುಸರಿಸಿ ದ್ದರು. ದಿನ ಪತ್ರಿಕೆ, ಸಮ್ಮೇಳನ, ದುರ್ಬಲ ವರ್ಗದವರು ಕಟ್ಟಿದ ಸಂಸ್ಥೆಗಳು ಮತ್ತು ರಾಜ ಕೀಯ ಪಕ್ಷ ಇತ್ಯಾದಿ ಮಾಧ್ಯಮಗಳನ್ನು ಅವ ಲಂಬಿಸಿ ಕೊಂಡು ಅಂಬೇಡ್ಕರ್‌ರವರು ದಲಿತರ ಸಮಸ್ಯೆಗಳನ್ನು ವಿವರಿಸಿ ಪರಿಹಾರಗಳನ್ನು ಕಂಡು ಕೊಳ್ಳುವ ನಿಟ್ಟಿನಲ್ಲಿ ಮಾಡಿರುವ ಪ್ರಯತ್ನಗಳಿಗೆ ಅನೇಕ ದಾಖಲೆಗಳಿವೆ.

ಮಹಾರ್ ಸಮುದಾಯದೊಳಗಿನ ರಾಜಕೀಯ ಪ್ರಜ್ಞೆಯ ವಿಕಾಸವನ್ನು ಚರ್ಚಿಸುತ್ತಾ, ಅದು ಮುಂದೆ ರಾಷ್ಟ್ರೀಯ ಆಂದೋಲನದ ಸಂದರ್ಭದಲ್ಲಿ ಮಹಾರ್ ಸಮುದಾಯ ಒಂದು ಶಕ್ತಿಯಾಗಿ ಪರಿವರ್ತನೆಗೊಳ್ಳುವ ಹಂತವನ್ನು ಇಲಾನೀರ್ ವಿವರಿಸುತ್ತಾರೆ. ಅಂಬೇಡ್ಕರ್‌ರವರನ್ನು ಮಹಾರ್ ಜನಸಮುದಾಯದ ಮುಖಂಡರನ್ನಾಗಿ ಗುರುತಿಸುವುದಲ್ಲದೆ, ಈ ದೇಶದ ದಲಿತ ಹಾಗೂ ದುರ್ಬಲ ವರ್ಗದವರ ಪ್ರತಿನಿಧಿ ಎಂದು ಈ ಕೃತಿಯಲ್ಲಿ ಚಿತ್ರಿಸಲಾಗಿದೆ.

ಹಾಗೇನೆ, ಮಹಾರ್ ಚಳವಳಿ ಮತ್ತು ಇಡೀ ದೇಶದಲ್ಲಿ ನಡೆಯುತ್ತಿದ್ದ ದಲಿತ ಚಳವಳಿಗೆ ಅಂಬೇಡ್ಕರ್ ಒಂದು ಕೊಂಡಿಯಾಗಿ ಕಾರ್ಯ ನಿರ್ವಹಿಸಿದರು ಎಂದು ಹೇಳಿದರೆ ತಪ್ಪಾಗಲಾರದು ಎಂದು ಇಲಾನೀರ್ ಅಭಿಪ್ರಾಯ ಪಡುತ್ತಾರೆ. ಲಭ್ಯವಿರುವ ಎಲ್ಲಾ ಆಧಾರಗಳನ್ನು ಉಪಯೋಗಿಸಿಕೊಂಡು ಅಂಬೇಡ್ಕರ್ ರವರ ನೇತೃತ್ವದಲ್ಲಿ ಬೆಳೆದ ದಲಿತ ಚಳವಳಿಯನ್ನು, ಅದರ ತತ್ವಗಳನ್ನು, ಪ್ರಚಾರ ಮಾಧ್ಯಮಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಅಂದಿನ ಕಾಂಗ್ರೆಸ್ ಪಕ್ಷ ಪಾಲಿಸಿದಂತೆ ಅಂಬೇಡ್ಕರ್ ದಲಿತರನ್ನುದ್ದೇಶಿಸಿ ಆರಂಭಿಸಿದ ಹೋರಾಟದಲ್ಲಿ ಕೂಡ ಆ ಸಮುದಾಯದ ಏಳಿಗೆಗಾಗಿ ಆಧುನಿಕ ಮಾರ್ಗಗಳನ್ನು ಅನುಸರಿಸಿದ್ದರು.

ದಿನ ಪತ್ರಿಕೆ, ಸಮ್ಮೇಳನ, ದುರ್ಬಲ ವರ್ಗದವರು ಕಟ್ಟಿದ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷ ಇತ್ಯಾದಿ ಮಾಧ್ಯಮಗಳನ್ನು ಅವಲಂಬಿಸಿ ಕೊಂಡು ಅಂಬೇಡ್ಕರ್‌ರವರು ದಲಿತರ ಸಮಸ್ಯೆ ಗಳನ್ನು ವಿವರಿಸಿ ಪರಿಹಾರಗಳನ್ನು ಕಂಡು ಕೊಳ್ಳುವ ನಿಟ್ಟಿನಲ್ಲಿ ಮಾಡಿರುವ ಪ್ರಯತ್ನಗಳಿಗೆ ಅನೇಕ ದಾಖಲೆಗಳಿವೆ. 1935ನೆ ವರ್ಷ ದಲಿತರ ವಿಚಾರವಾಗಿ ಅಂಬೇಡ್ಕರ್ ಎತ್ತಿರುವ ಧ್ವನಿಗೆ ಹೊಸ ತಿರುವು ಬಂತು. ಏಕೆಂದರೆ ಅದೇ ವರ್ಷ ಅವರು ದೇವಾಲಯ ಪ್ರವೇಶವನ್ನು ಬಹಿಷ್ಕರಿಸಿದರು, ಹಿಂದೂ ಧರ್ಮವನ್ನು ಸಾರ್ವತ್ರಿಕವಾಗಿ ಹಾಗೂ ನೇರವಾಗಿ ಖಂಡಿಸಿದರು. ಅಲ್ಲದೆ, ರಾಜಕೀಯ ರಂಗದಲ್ಲಿ ತಾವು ದಕ್ಕಿಸಿಕೊಂಡ ಅಧಿಕಾರವನ್ನು ಮತ್ತು ತನ್ನದೇ ರಾಜಕೀಯ ಪಕ್ಷವನ್ನು ಬಳಸಿಕೊಂಡು ದಲಿತರ ಆಸಕ್ತಿಗಳನ್ನು ರಕ್ಷಿಸಲು ಅಂದಿನಿಂದಲೇ ಪಣ ತೊಟ್ಟರು.

ಈ ದೃಷ್ಟಿಯಲ್ಲಿ ಅವಲೋಕನ ಮಾಡಿದರೆ ಇಲಾ ನೀರ್‌ರವರ ಅಧ್ಯಯನದ ಮಹಾರ್ ಚಳ ವಳಿಯ ವಿಶ್ಲೇಷಣೆ ದಲಿತರ ರಾಜಕೀಯ ಹೋರಾಟವನ್ನು ಇತಿಹಾಸಕ್ಕೆ ಸೇರಿಸಿದ ಅತ್ಯಂತ ಪ್ರಮುಖ ದಾಖಲೆಯಾಗಿ ಪರಿವರ್ತನೆ ಗೊಳ್ಳುತ್ತದೆ.
1979ರಲ್ಲಿ ಪ್ರಕಟವಾದ ಜೆ. ಆರ್. ಕಾಂಬ್ಳೆ ಯವರ ‘ರೈಸ್ ಎಂಡ್ ಎವ್ಯಾಕನಿಂಗ್ ಆಫ್ ಡಿಪ್ರೆಸ್‌ಡ್ ಕ್ಲಾಸಸ್ ಇನ್ ಇಂಡಿಯಾ’ ಅರ್ಥಪೂರ್ಣವಾದ ಸಂಶೋಧನಾ ಕೃತಿ. ದಲಿತರು, ದುರ್ಬಲ ವರ್ಗದವರನ್ನು ಉದ್ದೇಶಿಸಿ ಮಾಡಿದ ವಿಶಿಷ್ಟವಾದ ಇತಿಹಾಸ ರಚನೆಯಾಗಿದೆ.

ದುರ್ಬಲ ವರ್ಗದವರು ಶತಮಾನಗಳಿಂದಲೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮೇಲ್ವರ್ಗದವರ ದಬ್ಬಾಳಿಕೆ, ಶೋಷಣೆ ಮತ್ತು ತುಳಿತಕ್ಕೆ ಒಳಗಾದ ಐತಿಹಾಸಿಕ ಸತ್ಯಗಳನ್ನು ಕಾಂಬ್ಳೆಯವರು ತಮ್ಮ ಕೃತಿಯಲ್ಲಿ ಚಿತ್ರಿಸುತ್ತಾರೆ. ಅಲ್ಲದೆ, ಸ್ವಾತಂತ್ರ್ಯ ಹೋರಾಟದ ಜೊತೆಗೆ ಈ ವರ್ಗಗಳು ನಡೆಸಿದ ಹೋರಾಟ ಅವರ ಬದುಕಲ್ಲಿ ಪರಿವರ್ತನೆ ತರಲು ಮಾಡಿರುವ ಶ್ರಮವೆಂದು ವಿವರಿಸುತ್ತಾರೆ. ಈ ಬಗೆಯ ವಿಶ್ಲೇಷಣೆಯು ಆಧುನಿಕ ಭಾರತದ ಇತಿಹಾಸದ ಅವಿಭಾಜ್ಯ ಅಂಗವಾಗಿ ದಲಿತ ಮತ್ತು ದುರ್ಬಲ ವರ್ಗದ ಚಳವಳಿಯ ಚರಿತ್ರೆಯನ್ನು ಪರಿಶೀಲಿಸಲಾಗಿದೆ.

ಕಾಂಬ್ಳೆಯವರೆ ಹೇಳುವಂತೆ ಬ್ರಿಟಿಷ್ ವಸಾಹತುಶಾಹಿ ಆಡಳಿತ ದುರ್ಬಲ ವರ್ಗದವರಲ್ಲಿ ರಾಜಕೀಯ ಜಾಗೃತಿ ಮೂಡಿಸಲು ಅವಕಾಶವನ್ನು ಸೃಷ್ಟಿಸಿತು. ನಂತರ ಸಾಮಾಜಿಕ ಸುಧಾರಣಾ ಚಳವಳಿಯಿಂದ ಹಿಂದೂ ಧರ್ಮಕ್ಕೆ ಸೇರಿದವರ ದೃಷ್ಟಿಕೋನವನ್ನು ಬದಲಾಯಿಸಿದ್ದೂ ಅಲ್ಲದೆ, ದಲಿತ/ದುರ್ಬಲರು ಪ್ರಜ್ಞಾವಂತ ಪ್ರಜೆಯಾಗಿ ಜಾಗೃತರಾಗುವ ಸಂದರ್ಭವನ್ನು ವಿಶೇಷವಾಗಿ ಒತ್ತುಕೊಟ್ಟಿರುವುದು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಈ ಕೃತಿಯ ಬಹುತೇಕ ಭಾಗವನ್ನು 1917ರ ಮಾಂಟೆಗೊ ಘೋಷಣೆ ಮತ್ತು 1932ರ ಪೂನಾ ಒಪ್ಪಂದದ ನಡುವಿನ ವರ್ಷಗಳಲ್ಲಿ ದಲಿತರು/ದುರ್ಬಲ ವರ್ಗದವರು ಶಾಸಕಾಂಗದಲ್ಲಿ ರಾಜಕೀಯ ಪ್ರಾತಿನಿಧ್ಯ ಪಡೆಯಲು ನಡೆಸಿದ ಹೋರಾಟದ ವಿವಿಧ ಹಂತಗಳನ್ನು ವಿವರಿಸಲು ಮೀಸಲಿಡಲಾಗಿದೆ.

ಅಲ್ಲದೆ, ರಾಷ್ಟ್ರಮಟ್ಟದಲ್ಲಿ ಸಂವಿಧಾನಾತ್ಮಕ ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ನಡೆಸಿದ ಪ್ರಯತ್ನಗಳನ್ನು ವಿವರಿಸಲಾಗಿದೆ. ಹಾಗೇನೆ, ದಲಿತರ ಹೋರಾಟಕ್ಕೆ ಅಂಬೇಡ್ಕರ್ ಮತ್ತು ಗಾಂಧೀಜಿ ಕೊಡುಗೆಗಳನ್ನು ಕಾಂಬ್ಳೆಯವರು ಚರ್ಚಿಸುತ್ತಾರೆ. ಜೊತೆಗೆ, ಸ್ವಾತಂತ್ರ ನಂತರದ ದಿನಗಳಲ್ಲಿ ರಚನೆಯಾದ ಸರಕಾರಗಳು ದಲಿತರು ಮತ್ತು ದುರ್ಬಲ ವರ್ಗದವರ ವಿಮೋಚನೆಗೆ ಅನುಷ್ಠಾನಗೊಳಿಸಿದ ಯೋಜನೆಗಳನ್ನು ಕೂಡ ವಿವರಿಸುತ್ತಾರೆ. ಕಾಂಬ್ಳೆಯವರು ಒಬ್ಬ ರಾಷ್ಟ್ರವಾದಿ ಬರಹಗಾರರಂತೆ ಪರಿಚಯಿಸಿಕೊಂಡು ದಲಿತರ ವಿಮೋಚನೆಯು ನಿರಂತರವಾಗಿ ಮುಂದುವರಿಯಬೇಕಾದ ಯೋಜನೆಯಾಗಿರಬೇಕು ಎಂದು ಸಮರ್ಥಿಸುತ್ತಾರೆ.

ಹಾಗೇನೆ, ದಲಿತರ ಕುರಿತು ಉದಾರ ಮನೋಭಾವನೆ ಇರುವ ಜನರು ಆ ಬಗೆಯ ಕಾರ್ಯಯೋಜನೆಗಳನ್ನು ಬೆಂಬಲಿಸಬೇಕೆಂದು ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ ದೀನ ದಲಿತರ ವಿಮೋಚನೆ ಎಂದರೆ ಜಾತಿ ಆಧಾರಿತ ವ್ಯವಸ್ಥೆಯ ನಿರ್ಮೂಲನೆ ಮತ್ತು ಅವರ ರಾಜಕೀಯ ಭದ್ರತೆಗೆ ಒಂದು ಅಡಿಪಾಯವಾಗಿದೆ. ಈವರೆಗಿನ ವಿಮೋಚನಾ ಯೋಜನೆಗಳು ಅಪೂರ್ಣವಾದವುಗಳಾಗಿದ್ದು, ಈ ನಿಟ್ಟಿನಲ್ಲಿ ದುರ್ಬಲ ವರ್ಗದವರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ತರಲು ಇಂತಹ ಯೋಜನೆಗಳು ಮತ್ತು ಹೋರಾಟಗಳು ನಿರಂತರವಾಗಿ ನಡೆಯುತ್ತಲೇ ಇರಬೇಕು ಎಂದು ಕಾಂಬ್ಳೆಯವರು ಗ್ರಹಿಸುತ್ತಾರೆ.

ಒಂದು ನೆಲೆಯಲ್ಲಿ ನೋಡುವುದಾದರೆ, 1970ರ ದಶಕದವರೆಗೂ ಆಧುನಿಕ ಭಾರತದ ಇತಿಹಾಸ ರಚನೆ ಮಾಡುವ ಇತಿಹಾಸಕಾರರು ದಲಿತ ಚಳವಳಿಯನ್ನು ಉದ್ದೇಶಿಸಿ ವಿಶೇಷವಾದ ಅಧ್ಯಯನ ಮಾಡಿದ ಪ್ರಯತ್ನಗಳು ವಿರಳವೆಂದೇ ಹೇಳಬಹುದು. ಹಾಗಂತ ಹೇಳಿ ಇಲಾನೀರ್‌ರವರ ಅಧ್ಯಯನ ಅಥವಾ ಕಾಂಬ್ಳೆಯವರ ಅಧ್ಯಯನಗಳನ್ನು ಅವಲಂಬಿಸಿಕೊಂಡೇ ದಲಿತ ಚಳವಳಿಯನ್ನು ವಿಶ್ಲೇಷಿಸಿ ಒಂದು ಬಗೆಯ ತೀರ್ಮಾನ ತೆಗೆದುಕೊಳ್ಳುವುದು ತಪ್ಪಾಗುತ್ತದೆ.

1980ರ ಮಧ್ಯಭಾಗದಿಂದ ಅಕಾಡಮಿಕ್ ವಲಯದಲ್ಲಿ ದಲಿತ ಚಳವಳಿ ಕುರಿತು ಸ್ವಲ್ಪಆಸಕ್ತಿ ವ್ಯಕ್ತವಾಗಿರುವುದು ಸಮಾಧಾನಕರ ಸಂಗತಿ. ಉದಾಹರಣೆಗೆ, 1982ರಲ್ಲಿ ಇಲಾನೀರ್ ಝೇಲಿಯಟ್‌ರವರ ಅಧ್ಯಯನವನ್ನು ಹೋಲುವಂತಹ ಅಧ್ಯಯನವನ್ನು ಯುರ್ಗನ್ಸ್‌ಮೇಯರ್ ಅವರು ಅಧರ್ಮ ಮೂವ್‌ಮೆಂಟ್ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸುತ್ತಾರೆ. 1920ರಲ್ಲಿ ಉಗಮವಾದ ಈ ಚಳವಳಿ 1946ರವರೆಗೂ ಮುಂದುವರಿದು, ಆ ನಂತರ ಸ್ವಲ್ಪ ಹಿನ್ನಡೆಯನ್ನು ಕಂಡಿತ್ತಾದರೂ 1970ರ ದಶಕದಲ್ಲಿ ಪುನ: ಮರು ಜನ್ಮವನ್ನು ಪಡೆಯಿತು.

ಈ ಅಧ್ಯಯನದಲ್ಲಿ ಯುರ್ಗನ್ಸ್‌ಮೇಯರ್‌ರವರ ಉದ್ದೇಶ ಒಂದು ನಿರ್ದಿಷ್ಟ ಚಳವಳಿಯ ಕುರಿತು ಆಗಿರದೆ, ಸಾಮಾಜಿಕ ಬದಲಾವಣೆಯನ್ನು ಕಂಡುಕೊಳ್ಳಲು ಕೆಳವರ್ಗದವರು ನಡೆಸಿದ ಹೋರಾಟದಲ್ಲಿ ಧರ್ಮದ ಪ್ರಾಮುಖ್ಯತೆಯನ್ನು ಚರ್ಚಿಸುವುದು. ಹಾಗಾಗಿ, ಅವರು ತಮ್ಮ ಗ್ರಂಥದ ಒಂದು ಭಾಗದಲ್ಲಿ ಕೆಳವರ್ಗದವರ ಮುಂದಾಲೋಚನೆಯ ಪೈಪೋಟಿ ಬಗ್ಗೆ ಚರ್ಚಿಸುತ್ತಾರೆ. ಉದಾಹರಣೆಗೆ, ಅಂಬೇಡ್ಕರ್‌ವಾದಿಗಳು, ವಾಲ್ಮೀಕಿಗಳು, ಕ್ರೈಸ್ತರು, ಮಾರ್ಕ್ಸ್‌ವಾದಿಗಳು ಮತ್ತು ರಾಧಾಸೋಯಾಮಿಗಳು. ಇನ್ನೂ ಮೂರು ಅಧ್ಯಯನಗಳು ಪ್ರಕಟಗೊಂಡವು. ಇವುಗಳು ದಲಿತ ಚಳವಳಿಯ ಬಗ್ಗೆ ನಡೆಸಿದ ಅಧ್ಯಯನದ ಸಮರ್ಥ ಚಿತ್ರಣವನ್ನು ನೀಡುತ್ತವೆ.

ಎಸ್.ಕೆ.ಗುಪ್ತ ಅವರ ಶೆಡ್ಯೂಲ್ಡ್ ಕಾಸ್ಟ್ಸ್ ಇನ್ ಮಾಡರ್ನ್ ಇಂಡಿಯನ್ ಪಾಲಿಟಿಕ್ಸ್: ದೈಯರ್ ಎಮರ್ಜನ್ಸ್ ಯಾಸೇ ಎ ಪಾಲಿಟಿಕಲ್ ಪವರ್ ಎಂಬ ಕೃತಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನಸಮೂಹದ ಬಹುರೂಪಿ ಹೋರಾಟದ ಸ್ವರೂಪವನ್ನು ಚಿತ್ರಿಸಲಾಗಿದೆ. ಭಾರತದ ರಾಜಕೀಯ ರಚನೆಯಲ್ಲಿ ಈ ಸಮೂಹ ಒಂದು ಮುಖ್ಯ ಅಂಗವಾಗಿ ಬೆಳೆದು ಬಂದು, ಅವರ ರಾಜಕೀಯ ಪರಿವರ್ತನೆಯನ್ನು ಕುರಿತು ಕುತೂಹಲಕಾರಿ ಚರ್ಚೆ ಈ ಗ್ರಂಥದಲ್ಲಿದೆ. ಗುಪ್ತ ಅವರ ಪ್ರಕಾರ ಈ ಸಮುದಾಯದಲ್ಲಿ ಆದ ರಾಜಕೀಯ ಪರಿವರ್ತನಾ ಪ್ರಕ್ರಿಯೆ 19ನೆ ಶತಮಾನದ ಕೊನೆಯ ಭಾಗ ಮತ್ತು 1935ರ ನಡುವೆ ನಡೆಯಿತು ಎಂದು ಹಂತ ಹಂತವಾಗಿ ವಿವರಿಸಲಾಗಿದೆ.

1935ರ ಗವರ್ನ್‌ಮೆಂಟ್ ಆಫ್ ಇಂಡಿಯಾ ಕಾಯ್ದೆ ದಲಿತರ ವಿಚಾರವಾಗಿ ಸ್ವತಂತ್ರ ಭಾರತದಲ್ಲಿ ರಚಿಸಲ್ಪಟ್ಟ ಸಂವಿಧಾನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈ ಪರಿವರ್ತನೆ ಮೂರು ಹಂತಗಳಲ್ಲಿ ನಡೆಯಿತು.

1.ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಆಸಕ್ತಿಯನ್ನು 1916ರ ಹೊತ್ತಿಗೆ ಬೆಳೆಸಿಕೊಂಡಿತು.

2.1927ರ ಹೊತ್ತಿಗೆ ದಲಿತರು ತಮ್ಮ ರಾಜಕೀಯ ಅಸ್ಮಿತೆಯನ್ನು ಗುರುತಿಸಿಕೊಂಡರು.

3. 1935ರ ಕಾಯ್ದೆ ಮೂಲಕ ರಾಜಕೀಯ ಅಸ್ತಿತ್ವವನ್ನು ಪಡೆದುಕೊಂಡರು.

ಈ ಎಲ್ಲಾ ಹಂತಗಳಲ್ಲಿ ದಲಿತ ಸಂಘಟನೆಗಳು ರಾಜಕೀಯ ರಂಗದಲ್ಲಿ ತಮ್ಮ ಇರುವಿಕೆಯನ್ನು ಸ್ಥಾಪಿಸಲು ನಡೆಸಿದ ಸಂಘಟಿತ ಹೋರಾಟದ ಉದ್ದೇಶ ಮತ್ತು ಕಾರ್ಯತಂತ್ರದ ನಿರೂಪಣೆಯನ್ನು ಕುರಿತು ಚರ್ಚಿಸಿದ್ದಾರೆ. ಇವುಗಳಲ್ಲದೆ, ಇನ್ನೊಂದು ಮುಖ್ಯ ವಿಷಯ ಈ ಅಧ್ಯಯನದಲ್ಲಿ ಕಂಡು ಬರುವುದು. — ದಲಿತರು ರಾಜಕೀಯದಲ್ಲಿ ಹೆಚ್ಚು ಆಸಕ್ತಿ ತೋರಿಸಲು ಸಾಮಾಜಿಕ ಸುಧಾರಕರ ಯೋಜನೆಗಳು ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ಸಮರ್ಥಿಸಲಾಗಿದೆ.

ಬದಲಾಗಿ . . . Political awakening among the depressed classes in the real sense of the term, and their introduction into the national political arena were a part of the process of their increasing importance for the various religious communities and groups that were vying with one another for increasing their strength on the one hand, and tending to decrease that of opponents on the other, in the game of ‘politics of numbers’.

-ಬಾರ್ಕೂರು ಉದಯ

ಆಧುನಿಕ ಭಾರತದ ಇತಿಹಾಸ ಕಥನದಲ್ಲಿ ದಲಿತ ಚಳವಳಿಯ ವಿಶ್ಲೇಷಣೆ (ಭಾಗ-3)

ಗುರುವಾರ – ಜುಲೈ -08-2010

ಮೇಲೆ ಚರ್ಚಿಸಿದ ಮೂರು ಪ್ರಮುಖ ಅಧ್ಯಯನಗಳ ಪ್ರಕಟಣೆಗಳಿಂದಾಗಿ ಆಧುನಿಕ ಭಾರತದ ರಾಜಕೀಯ ಇತಿಹಾಸದಲ್ಲಿ ದಲಿತರನ್ನು ಒಂದು ಸಮುದಾಯವನ್ನಾಗಿ ಗುರುತಿಸ ಲಾಗಿದೆ ಮತ್ತು ಅವರ ರಾಜಕೀಯ ಹೋರಾ ಟವು ಭಾರತದ ರಾಷ್ಟ್ರೀಯ ಹೋರಾಟದ ಜೊತೆಗೆ ಬಹಳ ಪ್ರಬಲವಾಗಿ ಬೆಳೆದಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಆದರೆ, ಸ್ವಾತಂತ್ರ್ಯ ನಂತರದ ದಲಿತ ಚಳವಳಿಯ ಸಮೃದ್ಧ ಅಧ್ಯಯನ ಇನ್ನಷ್ಟೇ ನಡೆಯಬೇಕಿದೆ. ಬಾರ್ಕೂರು ಉದಯ


ಎರಡನೆಯ ಪುಸ್ತಕ 1986ರಲ್ಲಿ ಪ್ರಕಟವಾದ ಅತುಲ್ ಚಂದ್ರ ಪ್ರಧಾನರವರದ್ದು – ‘ದಿ ಎಮರ್ಜನ್ಸ್ ಆಫ್ ದಿ ಡಿಪ್ರೆಸ್ಡ್ ಕ್ಲಾಸಸ್’. ಗುಪ್ತರವರ ಅಧ್ಯಯನದಂತೆ ಈ ಪುಸ್ತಕ ದಲಿತ ಮತ್ತು ದುರ್ಬಲ ವರ್ಗದವರನ್ನು ಉದ್ದೇಶಿಸಿದಾ ದರೂ ಕೂಡ, ಬಳಸಿದ ವಿಶ್ಲೇಷಣಾ ಮಾರ್ಗ ಗಳು ಭಿನ್ನವಾಗಿವೆ. ಒಂದನೆಯದಾಗಿ, ಪ್ರಧಾ ನ್‌ರವರ ಕಾಲ ಸೂಚಿ ಬೇರೆಯೇ ಆಗಿದೆ. ಅವರ ಪ್ರಕಾರ 1917ರವರೆಗಿನ ಎಲ್ಲಾ ಹೋರಾಟಗಳು ದಲಿತರು ಹಮ್ಮಿಕೊಂಡ ಮುಂದಿನ ರಾಷ್ಟ್ರ ಮಟ್ಟದ ಹೋರಾಟಕ್ಕೆ ಪೂರ್ವ ತಯಾರಿ ಮತ್ತು ಹಿನ್ನೆಲೆಯಾಗಿ ಪರಿಗಣಿಸ ಲಾಗಿದೆ ಮತ್ತು ಆ ಬೆಳವಣಿಗೆಯನ್ನು ಬಹಳ ಸಂಕ್ಷಿಪ್ತವಾಗಿ ವಿವರಿಸುತ್ತಾ ಈ ಚರ್ಚೆಯನ್ನು ನಂತರ 1935ರಿಂದ 1947ರವರೆಗೂ ವೃದ್ಧಿಸು ತ್ತಾರೆ.

ಎರಡನೆಯದಾಗಿ ದುರ್ಬಲ ವರ್ಗ ದವರು ಸಾಮಾಜಿಕವಾಗಿ ಹಾಗೂ ರಾಜಕೀಯ ವಾಗಿ ಸದೃಢಗೊಳ್ಳಲು ಬ್ರಿಟಿಷ್ ಪ್ರೇರಿತ ಧೋರಣೆಗಳು, ಚಿಂತನೆಗಳು, ಸುಧಾರಣೆಗಳು ಯಾವುದೇ ಪ್ರಭಾವ ಬೀರಿಲ್ಲವೆಂದು ವಾದಿಸು ತ್ತಾರೆ. ಜೊತೆಗೆ ದುರ್ಬಲ ವರ್ಗ ಒಂದು ಶಕ್ತಿಯಾಗಿ ರಾಜಕೀಯವಾಗಿ ಬೆಳೆಯಲು ಮೂರು ಪ್ರಮುಖ ಗುಂಪುಗಳು ಕೆಲಸ ಮಾಡಿದ್ದು, ಅವುಗಳು 1. ಬ್ರಿಟಿಷ್ ಕಾನೂನು ರಚಕರು, 2. ಗಾಂಧೀಜಿ, ಅವರ ಹಿಂದೆ ಇದ್ದ ಕಾಂಗ್ರೆಸ್ ಪಕ್ಷ, ಹಿಂದೂ ಮಹಾಸಭಾ ಹಾಗೂ ಇನ್ನುಳಿದ ಹಿಂದೂ ಧರ್ಮದ ಪ್ರತಿನಿಧಿ ಎಂದು ನಟಿಸುವ ಸಂಘಟನೆಗಳು.

3. ದುರ್ಬಲ ವರ್ಗ ಸಮೂಹ, ಅವರ ಮುಖಂಡರು ಹಾಗೂ ಅವರ ಸಂಘಟನೆಗಳು. ಪ್ರಧಾನ್‌ರವರು ಕೊನೆಯದನ್ನು ಎರಡು ವರ್ಗವನ್ನಾಗಿ ವಿಭಜಿಸುತ್ತಾರೆ. – ಪ್ರತ್ಯೇಕತಾವಾದಿಗಳು : ಅಂಬೇಡ್ಕರ್ ಮತ್ತು ಆರ್. ಶ್ರೀನಿವಾಸನ್; ಮತ್ತು ರಾಷ್ಟ್ರೀಯವಾದಿಗಳು : ಜಗಜೀವನ್ ರಾಮ್ ಇತ್ಯಾದಿ. ಮೊದಲನೆಯ ಗುಂಪು ದುರ್ಬಲ ವರ್ಗದವರಿಗೂ ಪ್ರತ್ಯೇಕ ಐಡೆಂ ಟಿಟಿ ಮತ್ತು ಪ್ರಾತಿನಿಧ್ಯವನ್ನು ಪಡೆಯುವ ಹಕ್ಕಿದ್ದು, ಈ ಸಮೂಹ ಪ್ರಮುಖವಾದ ಅಲ್ಪಸಂಖ್ಯಾತ ಸಮೂಹವೆಂದು ಗುರುತಿಸಿ ಕೊಳ್ಳಲು ಪ್ರಯತ್ನಿಸಿತು. ಆದರೆ, ಎರಡನೇ ಗುಂಪು ಗ್ರಹಿಸುವುದೇನೆಂದರೆ, ದುರ್ಬಲ ವರ್ಗವೂ ಕೂಡ ಹಿಂದೂ ಸಮಾಜದ ಅವಿಭಾಜ್ಯ ಅಂಗವೆಂದು ಪ್ರತಿಪಾದಿಸುತ್ತಾ ಈ ದಲಿತ / ದುರ್ಬಲ ವರ್ಗದವರ ಆಸಕ್ತಿ ಗಳನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಜೊತೆಗೆ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿತು.

ಐಡೆಂಟಿಟಿ ಮತ್ತು ಪ್ರಾತಿನಿಧ್ಯ ವಿಚಾರವಾಗಿ ಪ್ರಧಾನ್‌ರ ಗ್ರಹಿಕೆ. ರಾಷ್ಟ್ರೀಯವಾದಿ ಗಳ ನಿಲುವಿಗೆ ಹೆಚ್ಚು ಹತ್ತಿರವಾಗಿತ್ತೆ ವಿನ: ಪ್ರತ್ಯೇಕತಾವಾದಿಗಳ ಪರವಾಗಿ ಅಲ್ಲ. ಪ್ರಧಾನ ರವರು ಗ್ರಹಿಸುವುದು ರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ದುರ್ಬಲ ವರ್ಗದವರ ಉಗಮ ಒಂದು ವಿಶಿಷ್ಟ ಸಮಸ್ಯೆಯಾಗಿ ಬೆಳೆಯುತ್ತದೆ. ಅದನ್ನು ಅಷ್ಟು ಸುಲಭದಲ್ಲಿ ಬಗೆಹರಿಸಲು ಸಾಧ್ಯವಾಗುವುದಿಲ್ಲ. ತಮ್ಮ ಅಧ್ಯಯನದ ಉಪಸಂಹಾರದಲ್ಲಿ 1939- 47ರ ನಡುವಿನ ಸ್ವಾತಂತ್ರ್ಯ ಹೋರಾಟದ ಇತಿಹಾಸ ವನ್ನು ಚರ್ಚಿಸುತ್ತಾ ಕೆಳಸ್ತರದವರ ಹೋರಾಟದ ಚಿತ್ರಣಕ್ಕೆ ಒಂದು ಹೊಸ ಮುನ್ನುಡಿಯನ್ನು ಬರೆಯುತ್ತಾರೆ.
ಮೂರನೆಯ ಅಧ್ಯಯನ ತ್ರಿಲೋಕ್‌ನಾಥರ ಪಾಲಿಟಿಕ್ಸ್ ಆಫ್ ದಿ ಡಿಪ್ರೆಸ್ಡ್ ಕ್ಲಾಸಸ್ ಎಂಬ ಕೃತಿ 1987ರಲ್ಲಿ ಪ್ರಕಟವಾಯಿತು. ದುರ್ಬಲ ವರ್ಗದವರು ಅನುಭವಿಸಿದ ಸಾಮಾಜಿಕ- ರಾಜಕೀಯ ಸ್ಥಿತಿಗತಿಗಳು ವಿಶೇಷವಾಗಿ ಅವರ ಉದ್ಧಾರಕ್ಕೆ ಪೂರಕವಾದ ಸುಧಾರಣಾ ನೀತಿ ಗಳನ್ನು ರೂಪಿಸಲು ಪ್ರಚೋದನೆ ನೀಡಿದವು ಎಂದು ತ್ರಿಲೋಕ್‌ನಾಥರು ಅಭಿಪ್ರಾಯಪಡು ತ್ತಾರೆ. ಹಾಗೇನೆ, ಅದೇ ಕಾರಣಗಳಿಗಾಗಿ ದುರ್ಬಲ ವರ್ಗದವರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶಗಳನ್ನು ಬಳಸಿಕೊಂಡರು ಎಂದು ಸಮರ್ಥಿಸಲಾಯಿತು.

19ನೆ ಶತಮಾನದ ಕೊನೆಯ ಕಾಲಘಟ್ಟ ಮತ್ತು 20ನೇ ಶತಮಾನದ ಆರಂಭದ ದಿನಗಳಲ್ಲಿ ಈ ವರ್ಗದ ಜನರು ನಡೆಸಿದ ಹೋರಾಟವನ್ನು ಹಿನ್ನೆಲೆಯಾಗಿ ಚರ್ಚಿಸಿದ್ದರಾದರೂ, ಪ್ರದಾನ್ ರವರು 1927ರಿಂದ 1937ರ ವರೆಗಿನ ದುರ್ಬಲ ವರ್ಗದವರ ಹೋರಾಟದ ಸ್ವರೂಪವನ್ನು ಚರ್ಚಿಸಲು ಹೆಚ್ಚು ಒತ್ತು ಕೊಡುತ್ತಾರೆ. ಅಲ್ಲದೆ, ಅಧಿಕಾರಕ್ಕಾಗಿ ನಡೆಸಿದ ಮತೀಯ ಹೋರಾಟ ಮತ್ತು 1909ರ ಸಂವಿಧಾನವು ದುರ್ಬಲ ವರ್ಗದವರಿಗೆ ಧೈರ್ಯದಿಂದ ರಾಜಕೀಯ ಪ್ರವೇಶ ಮಾಡಲು ಅವಕಾಶವನ್ನು ಕಲ್ಪಿಸಿತು ಎಂದು ವಿಶ್ಲೇಷಿಸು ತ್ತಾರೆ.

ಹಾಗೇನೆ, ಗುಪ್ತ ಮತ್ತು ಪ್ರಧಾನರಂತೆ ತ್ರಿಲೋಕನಾಥರು ರಾಷ್ಟ್ರಮಟ್ಟದಲ್ಲಾದ ರಾಜ ಕೀಯ ಬದಲಾವಣೆಗೆ ಹೆಚ್ಚು ಒತ್ತುಕೊಟ್ಟರು. ಈ ಬಗೆಯ ಬೆಳವಣಿಗೆ ದಲಿತರಿಗೆ ಬಹಳ ಮುಖ್ಯವಾದ ಅವಕಾಶ ನೀಡಿತು. ಜೊತೆಗೆ, ಅವರು ಕೇಂದ್ರದಲ್ಲಿ ಸುಧಾರಣಾ ನೀತಿಗಳನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ದಲಿತರು ನಡೆಸಿದ ರಾಜಕೀಯ ಚಟುವಟಿಕೆ ಗಳನ್ನು ಕುರಿತು ಹೆಚ್ಚು ಮಾಹಿತಿಯನ್ನು ನೀಡು ತ್ತಾರೆ. ಆದರೂ ಅವರ ಅಧ್ಯಯನವು ಬಹಳ ಸಂಕ್ಷಿಪ್ತವಾದುದು. 1927 -37ರ ನಡುವಿನ ರಾಜಕೀಯ ಘಟನೆಗಳಿಗೆ ಸೀಮಿತ ಗೊಳಿಸಿದ ಅವರ ವಿಶ್ಲೇಷಣೆಯು ಸಂವಿಧಾನಕ್ಕಾಗಿ ನಡೆದ ಹೋರಾಟ ಭಾರತ ಸರಕಾರ ಕಾಯಿದೆಯ ವರೆಗೆ ವಿಸ್ತರಿಸುವ ಬದಲು ಪೂನಾ ಪ್ಯಾಕ್ಟ್ ವರೆಗೆ ಕೊನೆಗೊಳ್ಳುತ್ತದೆ.

ಪ್ರತ್ಯೇಕವಾಗಿ ದೇವಾಲಯ ಪ್ರವೇಶ ಮತ್ತು ಮತಾಂತರದ ಕುರಿತು ಸ್ವಲ್ಪಮಾಹಿತಿಯನ್ನು ಕೂಡ ನೀಡು ತ್ತಾರೆ. ಈ ವಿಚಾರವನ್ನು ಪ್ರಧಾನ ಅವರು ಸ್ವಲ್ಪ ಚರ್ಚಿಸುತ್ತಾರೆ, ಆದರೆ ಗುಪ್ತ ಅವರು ಸಂಪೂ ರ್ಣವಾಗಿ ನಿರ್ಲಕ್ಷಿಸಿದ್ದಾರೆ. ಜೊತೆಗೆ ಪ್ರಧಾನ ರವರಂತೆ ತ್ರಿಲೋಕ್‌ನಾಥರು ದಲಿತ ನಾಯ ಕರ ಮತ್ತು ಸಂಘಟನೆಗಳ ನಡುವಿನ ಭಿನ್ನಾಭಿ ಪ್ರಾಯಗಳನ್ನು ಹೆಚ್ಚು ವಿವರಿಸುತ್ತಾರೆ ಮತ್ತು ಪ್ರತ್ಯೇಕವಾದ ಅಧ್ಯಾಯದಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರರ ಕೊಡುಗೆಗಳನ್ನು ತೌಲನಿಕವಾಗಿ ನೋಡುತ್ತಾರೆ.

ಮೇಲೆ ಚರ್ಚಿಸಿದ ಮೂರು ಪ್ರಮುಖ ಅಧ್ಯಯನಗಳ ಪ್ರಕಟಣೆಗಳಿಂದಾಗಿ ಆಧುನಿಕ ಭಾರತದ ರಾಜಕೀಯ ಇತಿಹಾಸದಲ್ಲಿ ದಲಿ ತರನ್ನು ಒಂದು ಸಮುದಾಯವನ್ನಾಗಿ ಗುರುತಿಸ ಲಾಗಿದೆ ಮತ್ತು ಅವರ ರಾಜಕೀಯ ಹೋರಾ ಟವು ಭಾರತದ ರಾಷ್ಟ್ರೀಯ ಹೋರಾಟದ ಜೊತೆಗೆ ಬಹಳ ಪ್ರಬಲವಾಗಿ ಬೆಳೆದಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಆದರೆ, ಸ್ವಾತಂತ್ರ್ಯ ನಂತರದ ದಲಿತ ಚಳವಳಿಯ ಸಮೃದ್ಧ ಅಧ್ಯಯನ ಇನ್ನಷ್ಟೇ ನಡೆಯಬೇಕಿದೆ. ಇದಕ್ಕೆ ಪೂರಕವಾಗಿ ಪ್ರಾದೇಶಿಕ ಮಟ್ಟದಲ್ಲಿ ಮೀಸಲಾತಿ, ಸಾಮಾಜಿಕ ಬದಲಾವಣೆ, ಇಲೈಟ್ಸ್ ರಾಜಕೀಯ ಕುರಿತು ಸಣ್ಣ ಮಟ್ಟದ ಅಧ್ಯಯನಗಳು ನಡೆದಿವೆ.

ಇವುಗಳನ್ನು ಕಡೆಗಣಿಸುವಂತಿಲ್ಲ. ಬಾರ್ಬರ ಜೋಷಿಯವರ ಕೃತಿ ಇಂತಹ ಅಧ್ಯಯನಕ್ಕೆ ಒಂದು ಸ್ಥೂಲ ಪರಿಚಯ ನೀಡುತ್ತದೆ. 1990ರ ದಶಕದಲ್ಲಿ ಆಧುನಿಕ ದಲಿತ ಚಳವಳಿಯ ಇತಿಹಾಸಕ್ಕೆ ಸಂಬಂಧಿಸಿ ಪ್ರಕಟವಾದ ಅಧ್ಯಯನಗಳ ಸಂಖ್ಯೆ ಬಹಳ ಕಡಿಮೆ. ಆದಾಗ್ಯೂ ಒಂದು ವಿಷಯ ಸುಸ್ಪಷ್ಟ. ಅದೇನೆಂದರೆ, ದಲಿತ ಚಳವಳಿಯ ಗ್ರಹಿಕೆ ಮತ್ತು ವಸ್ತುವಿನ ಅಧ್ಯಯನದ ದೃಷ್ಟಿಯಲ್ಲಿ ಒಂದು ಹೊಸ ಆಯಾಮ ಪಡೆದಿರುವುದು ಸತ್ಯ ಸಂಗತಿ. ಉದಾಹರಣೆಗೆ, ಜಾನ್ ವೆಬ್‌ಸ್ಟರ್‌ರವರು ನಡೆಸಿರುವ ಪ್ರಯತ್ನ ಮೂರು ಬಗೆಯ ಆಲೋಚನೆಯನ್ನು ಪ್ರಸ್ತುತಪಡಿಸುತ್ತದೆ.

ಒಂದನೆಯದಾಗಿ, ಅವರ ಅಧ್ಯಯನದಲ್ಲಿ ಕ್ರೈಸ್ತ ದಲಿತರನ್ನು ದಲಿತರೆಂದೆ ಪ್ರತಿಬಿಂಬಿಸಿ ಆ ಸಮು ದಾಯದ ಇತಿಹಾಸವನ್ನು ದಲಿತರ ಇತಿ ಹಾಸದೊಂದಿಗೆ ಗುರುತಿಸುವ ಪ್ರಯತ್ನ ವಾಗಿದೆ. ಇದು ಕೇವಲ ತೋರಿಕೆಗೆ ಮಾತ್ರವಲ್ಲವೆಂದು ಅವರು ತಮ್ಮ ಅಧ್ಯ ಯನದಲ್ಲಿ ದೃಢೀಕರಿಸುತ್ತಾರೆ. ಅದರ ಫಲಿತಾಂಶವಾಗಿ ಇತಿಹಾಸ ರಚನೆಯಲ್ಲಿ ಸಂಕೀರ್ಣತೆ ಕಂಡುಕೊಳ್ಳಲಾಗಿದೆ. ಎರಡನೆಯದಾಗಿ, ವೆಬ್‌ಸ್ಟರ್‌ರವರು ಕ್ರೈಸ್ತ ದಲಿತರ ಇತಿಹಾಸವನ್ನು ಆಧುನಿಕ ದಲಿತ ಚಳವಳಿಯ ಇತಿಹಾಸದ ಅವಿಭಾಜ್ಯ ಅಂಗವೆಂದೇ ಪ್ರತಿಬಿಂಬಿಸಿದ್ದಾರೆ.

ಆರಂ ಭದಲ್ಲಿ ಪ್ರಸ್ತಾಪಿಸಿದ ಲೇಖಕರಾದ ಇಲಾ ನೀರ್ ಮತ್ತು ಯುರ್ಗನ್ಸ್ ಮೇಯರ್ ತಮ್ಮ ಅಧ್ಯಯನದಲ್ಲಿ ಚಳವಳಿ ಪರಿಕಲ್ಪನೆ ಯನ್ನು ಬಳಸಿಕೊಳ್ಳುತ್ತಾರೆ. ಇಲಾನೀರ್ ಅವರು ಈ ಕಲ್ಪನೆಯನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಾರೆ. ಯುರ್ಗನ್ಸ್ ಮೇಯರ್ ಅವರು ಅಸ್ಪೃಶತೆಯನ್ನು ವಿರೋಧಿಸಲು ದಲಿತ ಸಮುದಾಯ ಸಂಘಟಿಸಿದ ವಿಭಿನ್ನ ಪ್ರಯತ್ನಗಳನ್ನು ಒಂದು ಸಾಮಾನ್ಯ ವಿಷಯವಾಗಿ ಪರಿಗಣಿಸುತ್ತಾರೆ. ಅವರ ಹಾಗೆ ವೆಬ್‌ಸ್ಟರ್ ಕೂಡ ದಲಿತರನ್ನು ಅವರ ಇತಿಹಾಸದಲ್ಲಿ ಅವರೇ ಮುಖ್ಯ ಪಾತ್ರ ಧಾರಿಗಳೆಂದು ಚಿತ್ರಿಸುತ್ತಾರೆ.

ಅಲ್ಲದೆ, ಮಹಾರ್ ಮತ್ತು ಅಧರ್ಮ ಚಳವಳಿಗಳು ಸೈದ್ಧಾಂತಿಕವಾಗಿ ಪರಸ್ಪರ ಒಂದಕ್ಕೊಂದು ಸಾಮ್ಯತೆಗಳನ್ನು ವ್ಯಕ್ತ ಪಡಿಸುತ್ತವೆ. ಕೊನೆಯದಾಗಿ, ವೆಬ್‌ಸ್ಟರ್ ರವರು ಸ್ವಾತಂತ್ರ್ಯೋತ್ತರ ಕಾಲಘಟ್ಟದ ದಲಿತ ಚಳವಳಿಯನ್ನು ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನ ಮಾಡುತ್ತಾರೆ.ಎರಡು ಮುಖ್ಯ ಅಧ್ಯಯನಗಳಿಂದ ಆದ ಅಸಮಾಧಾನವನ್ನು ಹೇಳಬೇಕಾಗುತ್ತದೆ. ಒಂದು, ಪಿ.ಇ. ಮೋಹನ್‌ರವರ ಕೃತಿ. ಇದು ನಿಜಕ್ಕೂ ಇತಿಹಾಸಕ್ಕೆ ಸಂಬಂಧಿಸಿದ್ದೆ ಅಲ್ಲ ಎಂಬ ಭಾವನೆ ಓದಿದವರಿಗೆ ಬರುತ್ತದೆ. ಏಕೆಂದರೆ, ಈ ಕೃತಿಯ ಮೊದಲ 5 ಅಧ್ಯಾಯ ಗಳು ಪರಿಶಿಷ್ಟ ಜಾತಿಯವರ ಏಳಿಗೆಗಾಗಿ ವಿವಿಧ ಸಂಘಟನೆಗಳು, ಏಜೆನ್ಸಿಗಳು ಮತ್ತು ವ್ಯಕ್ತಿಗಳ ಕಾರ್ಯ ವೈಖರಿಯ ಕುರಿತು ಮಾಹಿತಿ ನೀಡುತ್ತವೆ.

ಇನ್ನುಳಿದ ನಾಲ್ಕು ಅಧ್ಯಾಯಗಳಲ್ಲಿ ಈ ಸಂಘಟನೆಗಳು ಮತ್ತು ವ್ಯಕ್ತಿಗಳ ಪರಿಶ್ರಮದಿಂದ ದಲಿತರು ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ನಾಗರಿಕ ರಂಗಗಳಲ್ಲಿ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ನಡೆಸಿದ ಶ್ರಮ ಮತ್ತು ಅದರ ಪರಿಣಾಮಗಳನ್ನು ಚರ್ಚಿಸಲಾಗಿದೆ. ಈ ಚರ್ಚೆಯ ನಡುವೆ ತಪ್ಪಿಹೋಗಿರುವುದು ಈ ನಾಲ್ಕು ರಂಗಗಳಲ್ಲಿ ಪಾತ್ರಧಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರ ನಡುವಿನ ಸಂಬಂಧಗಳು.

ಇನ್ನೊಂದು ಅಸಮಾಧಾನ ಸಬಾಲ್ಬರ್ನ್ ಸ್ಟಡೀಸ್ ಸಂಪುಟಗಳು. ಭಾರತೀಯ ಸಮಾಜದಲ್ಲಿ ನಿಜ ಅರ್ಥದಲ್ಲಿ ದಲಿತರು ಕೆಳಸ್ತರಕ್ಕೆ ಸೇರಬೇಕಾದವರು. ಈ ಅಧ್ಯಯನದಿಂದ ದಲಿತ ಹೋರಾಟ ಮತ್ತು ದಲಿತರ ಇತಿಹಾಸದ ಕುರಿತು ನಮ್ಮ ಗ್ರಹಿಕೆಯ ಮೇಲೆ ಹೆಚ್ಚು ಪರಿಣಾಮ ಬೀರಬೇಕಿತ್ತು. ಆದರೆ ಇಡೀ ಸಂಪುಟಗಳಲ್ಲಿ ದಲಿತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಅವರನ್ನು ಬಲಿಯಾದವರು ಎಂದೇ ಚಿತ್ರಿಸಲಾಗಿರುವುದು ವಿಷಾದನೀಯ. ಕೇವಲ ಗಲಭೆ ಎಬ್ಬಿಸಲು ಮಾತ್ರ ಅವರು ಶಕ್ತರು. ತಮಗೂ ಇತಿಹಾಸವಿದೆ ಎಂದು ಗ್ರಹಿಸಲು ಅವರಿಗೆ ಭೌತಿಕವಾಗಿಶಕ್ತಿಯಿಲ್ಲವೆಂದೇ ಕೆಳಸ್ತರ ಇತಿಹಾಸಕಥನ ಬಿಂಬಿಸುತ್ತದೆ. ಅಲ್ಲದೆ, ವರ್ಗಗಳ ವರ್ಗೀಕರಣಕ್ಕೆ ಮಾತ್ರ. ಗುರುತಿಸಿ ಅವರನ್ನು ಒಂದು ಜಾತಿ ಎಂದಷ್ಟೇ ಹೇಳಲಾಗಿದೆ.

ಜಯಶ್ರೀ ಗೋಕಲೆಯವರ ಇತ್ತೀಚೆಗಿನ ಕೃತಿ ಮಾತ್ರ ಮಹಾರ್ ಚಳವಳಿಗೆ ಸಂಬಂಧಿಸಿದ ಒಂದು ಅಮೂಲ್ಯವಾದ ಗ್ರಂಥ ಎಂದು ಹೇಳಬೇಕಾಗುತ್ತದೆ. ಅವರಿಗೆ ಮಹಾರ್ ಸಮುದಾಯವು ಅಧ್ಯಯನದ ಕೇಂದ್ರ ವಸ್ತು. ಅವರೇ ಹೇಳುವಂತೆ ಹಿಂದೂ ಸಮಾಜದಲ್ಲಿ ದುರ್ಬಲರಾಗಿ ಅತ್ಯಂತ ಕೆಳಸ್ಥಾನವನ್ನು ಅಲಂಕರಿಸಿದ ಮಹಾರ್ ಸಮುದಾಯವನ್ನು ಹೆಚ್ಚಾಗಿ ಅಸ್ಪೃಶರೆಂದು ಗುರುತಿಸಿತು. ಆದರೆ 1890ರ ದಶಕದಲ್ಲಿ ಅವರು  ರಾಜಕೀಯವಾಗಿ ಜಾಗೃತರಾಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿ ಸ್ವಾಯತ್ತ ರಾಜಕೀಯ ಚಳವಳಿಯನ್ನು ಆರಂಭಿಸಿ ತಮ್ಮ ಏಳಿಗೆಗೆ ಮತ್ತು ಪರಿವರ್ತನೆಗೆ ಪ್ರಯತ್ನಿಸಿದರು. ಆ ಚಳವಳಿ ಹಲವು ಹಂತಗಳಲ್ಲಿ ಯಶಸ್ಸನ್ನು ಕಂಡುಕೊಳ್ಳುತ್ತದೆ. ಮೊದಲನೇ ಕಾಲಘಟ್ಟ 1890ರಿಂದ 1930ರವರೆಗೆ.

ಈ ಸಮಯದಲ್ಲಿ ಸ್ವತಂತ್ರವಾಗಿ ಹಿಂದೂ ಸಾಮಾಜಿಕ ಮತ್ತು ಮತೀಯ ರಚನಾ ವ್ಯವಸ್ಥೆಯೊಳಗೆ ತಮ್ಮ ಸಾಮಾಜಿಕ ಸ್ಥಿತಿಗತಿಗಳಲ್ಲಿ ಪರಿವರ್ತನೆ ಕಂಡುಕೊಳ್ಳಲು ಗಮನ ಹರಿಸಲಾಯಿತು. ಎರಡನೆ ಕಾಲಘಟ್ಟ ಪ್ರಥಮ ದುಂಡು ಮೇಜಿನ ಸಮ್ಮೇಳನದಿಂದ ಆರಂಭವಾಗಿ 1950ರವರೆಗೆ ಮುಂದುವರಿಯುತ್ತದೆ. ಈ ಸಮಯದಲ್ಲಿ ಮಹಾರ್ ಜನ ಸಮೂಹ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಇರುವಿಕೆಯನ್ನು ತೋರ್ಪಡಿಸಲು ಪ್ರಯತ್ನಿಸಿತು.

1952ರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸೋಲು ಮತ್ತು ತದನಂತರ ಬೌದ್ಧ ಧರ್ಮಕ್ಕೆ ಬೃಹತ್ ಪ್ರಮಾಣದಲ್ಲಿ ಆದ ಮತಾಂತರವು ಮೂರನೆ ಹಂತಕ್ಕೆ ಪ್ರವೇಶ ಪಡೆಯುತ್ತದೆ. ಈ ಹಂತದಲ್ಲಿ ಮಹಾರ್ ಸಮುದಾಯ ಹೊಸ ಐಡೆಂಟಿಟಿಯನ್ನೇ ಸ್ಥಾಪಿಸಿಕೊಂಡಿತು. 1970ರ ದಶಕದಲ್ಲಿ ದಲಿತ ಪ್ಯಾಂಥರ್ಸ್ ಮತ್ತು ಅವರದೆ ಸಾಹಿತ್ಯ ರಚನೆಯು ಮಹಾರ್‌ರಲ್ಲಿ ಚಳವಳಿಯ ರಾಜಕೀಯ ಮತ್ತು ಸಾಂಸ್ಕೃತಿಕ ಓರಿಯಂಟೇಶನ್‌ನಲ್ಲಿ ಹೊಸ ಬದಲಾವಣೆಯನ್ನು ಕಂಡುಕೊಂಡಿದೆ ಎಂದು ಗೋಖಲೆಯವರು ವಿವರಿಸುತ್ತಾರೆ.

Advertisements

3 Responses to ಆಧುನಿಕ ಭಾರತದ ಇತಿಹಾಸ ಕಥನದಲ್ಲಿ ದಲಿತ ಚಳವಳಿಯ ವಿಶ್ಲೇಷಣೆ

 1. DR INDRESH M says:

  ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ನನ್ನದೊಂದು ಪುಸ್ತಕ ಪ್ರಕಟಿಸಲು ನಿಮ್ಮ ಕೆಲವು ಲೇಖನಗಳನ್ನು ಕಳುಹಿಸಿಕೊಡಿ. ನನ್ನ ಮೇಲ್ ಅಡ್ರಸ್ drindreshm@gmail.com ದಯವಿಟ್ಟು ರಿಪ್ಲೆ ಮಾಡಿ

  • DR INDRESH M says:

   ನಿಮ್ಮ ನಾಲ್ಕೂ ಲೇಕನಗಳನ್ನು ನಾನು ನೋಡಿದ್ದೇನೆ.ಆಧುನಿಕ ಭಾರತದ ಇತಿಹಾಸದಲ್ಲಿ ದಲಿತ ಚಳುವಳಿ ಹೇಗೆ ಬೆಳೆದು ಬಂದಿತು ಎಂಬುದರ ಬಗ್ಗೆ ಉದಾಹರಣೆಗಳ ಸಮೇತ ಹೇಳಿದ್ದೀರಿ. ನಿಮಗೆ ಅಭಿನಂದನೆಗಳು

 2. Eulalia says:

  I think this is among the most vital info for me. And
  i’m glad reading your article. But should remark on few general things, The site style is
  perfect, the articles is really nice : D. Good job, cheers

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: