ಚಾರಿತ್ರಿಕ ಸಂದರ್ಭದ ಸತ್ಯಗಳು: ಬರಗೂರು


ಬರಗೂರು ರಾಮಚಂದ್ರಪ್ಪ
ಬದಲಾವಣೆಯೆನ್ನುವುದು ನಿರಂತರ ಪ್ರಕ್ರಿಯೆ. ಒಂದು ಕಾಲದ ವಿಚಾರಧಾರೆಯನ್ನು ಇನ್ನೊಂದು ಕಾಲದ ಅಗತ್ಯಕ್ಕನುಗುಣವಾಗಿ ಹೇಗೆ ಅನ್ವಯಿಸಿಕೊಳ್ಳಬೇಕಾಗುತ್ತದೆ ಎಂಬ ಪ್ರಶ್ನೆಯೂ ಈ ಪ್ರಕ್ರಿಯೆಯ ಭಾಗವಾಗಿರುತ್ತದೆ.

‘ಬಸವಣ್ಣನವರ ಕಾಲದಲ್ಲಿ ಎಲ್ಲವೂ ಆಗಿತ್ತೆ?’ ಎಂಬ ನನ್ನ ಪ್ರಶ್ನಾರ್ಥಕ ಲೇಖನಕ್ಕೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ನನ್ನ ಲೇಖನದ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆಯನ್ನು ಸಾಧ್ಯ ಮಾಡಿದ ‘ಪ್ರಜಾವಾಣಿ’ಗೆ ನನ್ನ ಅಭಿನಂದನೆಗಳು. ಜೊತೆಗೆ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.ನಾನು ಈ ಪ್ರಶ್ನೆಯನ್ನು ಆವೇಶ ಅಥವಾ ಆತುರದಲ್ಲಿ ಎತ್ತಿರಲಿಲ್ಲ. ಈ ಪ್ರಶ್ನೆ ನನ್ನನ್ನು ಹಿಂದಿನಿಂದಲೂ ಕಾಡುತ್ತಾ ಬಂದಿದೆ. 1976 ರಲ್ಲೇ ಬೆಂಗಳೂರು ವಿ.ವಿ.ಯ ‘ಸಾಧನೆ’ ತ್ರೈಮಾಸಿಕದಲ್ಲಿ (ಸಂ: ಡಾ. ಜಿ.ಎಸ್. ಶಿವರುದ್ರಪ್ಪನವರು) ವಚನ ಚಳವಳಿಯ ಸ್ವರೂಪದ ಬಗ್ಗೆ ನನ್ನ ನೋಟವನ್ನು ಸಂಕ್ಷಿಪ್ತವಾಗಿ ದಾಖಲಿಸಿದ್ದೆ. ಆನಂತರ 1994, 2004, 2008 ಮತ್ತು ಈಗಿನ ಲೇಖನಗಳಲ್ಲಿ ಪ್ರಸ್ತಾಪಿಸಿದ್ದೇನೆ. ಎಲ್ಲ ಲೇಖನಗಳಲ್ಲೂ ಒಂದೇ ವಿಷಯ ಇರದಿದ್ದರೂ ವಚನ ಚಳವಳಿಯ ಸ್ವರೂಪದ ವಿವಿಧ ವಿಶ್ಲೇಷಣೆಯಿದೆ.

ಆಗ ಕೇಳಿಬರದ ಪ್ರತಿರೋಧ ಈಗ ಬರುತ್ತಿರುವುದಕ್ಕೆ ಬದಲಾದ ರಾಜಕೀಯ ಸನ್ನಿವೇಶ ಮತ್ತು ಸಾಮಾಜಿಕ ಮನೋಧರ್ಮದ ಕಾರಣವಿರಬಹುದು; ನೈಜ ಭಿನ್ನಮತದ ಕಾರಣವೂ ಇರಬಹುದು; ಅಪಾರ್ಥವೂ ಕಾರಣವಾಗಿರಬಹುದು.  ಅರವಿಂದ ಜತ್ತಿಯವರು ‘ಬಸವಣ್ಣನವರ ಹಾಗೂ ಅವರ ವಿಚಾರಧಾರೆಯ ಬಗ್ಗೆ ಹಸಿ ಹಸಿಯಾದ ಹುಸಿಯೆಷ್ಟು’ ಎಂದು ನಾನು ಕೇಳಿದ್ದೇನೆಂದು ತಿಳಿದಿರುವುದರಲ್ಲೇ ಈ ಅಪಾರ್ಥದ ಅಂಶವಿದೆ. ನಾನು ಬಸವಣ್ಣನವರ ಹಾಗೂ ವಚನ ಚಳವಳಿಯ ವಿಚಾರಧಾರೆಯನ್ನು ಹಸಿಹಸಿ ಎಂದೆಲ್ಲ ಕರೆದಿಲ್ಲ. ಈ ವಿಚಾರಧಾರೆಯನ್ನು ಅಗತ್ಯಕ್ಕಿಂತ ಹೆಚ್ಚು ವೈಭವೀಕರಣಗೊಳಿಸುವ ವಿಶ್ಲೇಷಣೆ(?)ಗೆ ಈ ಮಾತುಗಳನ್ನು ಹೇಳಿದ್ದೇನೆ. ನನ್ನ ಲೇಖನದಲ್ಲಿ ಇದು ಸ್ಪಷ್ಟವಾಗಿದೆ. ‘ಲಿಂಗತತ್ವದ ಹಿನ್ನೆಲೆಯ ಸಾಮಾಜಿಕ ನ್ಯಾಯದ ಸಂಪೂರ್ಣ ಅರಿವು’ ನನಗಾಗಿಲ್ಲವೆಂದು ವಾದಿಸುವ ಜತ್ತಿಯವರು ಸಾಮಾಜಿಕ ನ್ಯಾಯಕ್ಕೆ ಆಗ ಲಿಂಗತತ್ವದ ಹಿನ್ನೆಲೆಯಿತ್ತು, ಈಗಿನ ಸಾಮಾಜಿಕ ನ್ಯಾಯದ ಕಲ್ಪನೆಗೆ ಇಲ್ಲ ಎಂಬುದನ್ನು ಅರ್ಥಮಾಡಿಕೊಂಡರೆ ಎರಡು ವಿಭಿನ್ನ ಚಾರಿತ್ರಿಕ ಸಂದರ್ಭಗಳ ಸ್ವರೂಪ ವಿಭಿನ್ನ ಎಂದು ತಾನಾಗಿಯೇ ಮನವರಿಕೆಯಾಗುತ್ತದೆ.

ನಾನು ಹೇಳುತ್ತಿರುವುದು ಸಹ ಚಾರಿತ್ರಿಕ ಸಂದರ್ಭಗಳ ಪ್ರಮುಖ ಪಾತ್ರವನ್ನು ಕುರಿತು ಎಂಬ ಅಂಶವನ್ನು ಕೆಲವರು ಗಮನಿಸದೇ ಇರುವುದು ಅಥವಾ ಗಮನಿಸಿಯೂ ಸುಮ್ಮನಾಗಿರುವುದು ಅವರವರ ಆಲೋಚನಾ ವಿಧಾನವನ್ನು ನಿಯಂತ್ರಿಸಿದೆ. ಗಾಂಧಿ, ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್, ಬಸವಣ್ಣ-ಇವರೆಲ್ಲರಲ್ಲೂ ‘ಮನುಷ್ಯ ಪ್ರೀತಿಯ ಸಮಾನ ಅಂಶವಿದೆಯಾದರೂ ಚಿಂತನಾ ಮಾದರಿ ಮತ್ತು ಕಾರ್ಯಕ್ಷೇತ್ರಗಳಲ್ಲಿ ಸಾಕಷ್ಟು ಅಂತರವೂ ಇದೆ’ ಎಂಬುದು ನನ್ನ ವಿಚಾರ. ಇದು ವಿವಾದದ ಅಂಶವೆಂದು ನನಗನ್ನಿಸುವುದಿಲ್ಲ. ಯಾಕೆಂದರೆ ಬಸವಣ್ಣನವರ ಮತ್ತು ವಚನ ಚಳವಳಿಯ ಸಾಧನೆಯನ್ನು ನನ್ನ ಲೇಖನದಲ್ಲಿ ಎಲ್ಲೂ ಗೌಣಗೊಳಿಸಿಲ್ಲ. ವಿರೋಧವನ್ನೂ ವ್ಯಕ್ತಪಡಿಸಿಲ್ಲ. ವಿಶ್ಲೇಷಣೆಯನ್ನೇ ವಿರೋಧ ಎಂದುಕೊಂಡರೆ ಅದಕ್ಕೆ ಔಷಧಿಯಿಲ್ಲ.

ಜಗತ್ತಿನ ಎಲ್ಲಾ ಮಹಾನ್ ಚೇತನಗಳೂ ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಕ್ರಿಯಾಶೀಲವಾಗಿರುತ್ತವೆ. ಹೀಗಾಗಿ ಅಂದಂದಿನ ಚಾರಿತ್ರಿಕ ಸಂದರ್ಭಗಳು ಮತ್ತು ವ್ಯಕ್ತಿ ವಿಚಾರಗಳು ಕೆಲವು ಆದ್ಯತೆಗಳನ್ನು ನಿರ್ಮಿಸುತ್ತವೆ. ಉಳಿದ ವಿಷಯಗಳನ್ನು ಒಳಗೊಂಡಿದ್ದರೂ ವ್ಯಕ್ತಿವಿಚಾರ ಮತ್ತು ಚಾರಿತ್ರಿಕ ಸಂದರ್ಭಕ್ಕನು ಗುಣವಾಗಿ ಮುಂಚೂಣಿಗೆ ಬರುವ ಆದ್ಯತೆಗಳು ಬೆಸೆದುಕೊಂಡು ಪ್ರಗತಿಪರ ಕ್ರಿಯಾಶೀಲತೆಯಿಂದ ಚರಿತ್ರೆಗೆ ಚಲನಶೀಲತೆಯನ್ನು ತರುತ್ತವೆ. ಆದ್ದರಿಂದ ಏಕಕಾಲದಲ್ಲಿ ಏಕವ್ಯಕ್ತಿ ಅಥವಾ ಏಕ ಸಂದರ್ಭವೇ ಎಲ್ಲವನ್ನೂ ಮಾಡಿ ಪೂರೈಸಲು ಸಾಧ್ಯವಾಗುವುದಿಲ್ಲ.

ಬದಲಾವಣೆಯೆನ್ನುವುದು ನಿರಂತರ ಪ್ರಕ್ರಿಯೆ. ಒಂದು ಕಾಲದ ವಿಚಾರಧಾರೆಯನ್ನು ಇನ್ನೊಂದು ಕಾಲದ ಅಗತ್ಯಕ್ಕನುಗುಣವಾಗಿ ಹೇಗೆ ಅನ್ವಯಿಸಿಕೊಳ್ಳಬೇಕಾಗುತ್ತದೆ ಎಂಬ ಪ್ರಶ್ನೆಯೂ ಈ ಪ್ರಕ್ರಿಯೆಯ ಭಾಗವಾಗಿರುತ್ತದೆ. ಕಾರ್ಲ್‌ಮಾರ್ಕ್ಸ್ ಅವರ ವಿಚಾರಧಾರೆಯ ಪ್ರತಿ ಸಾಲನ್ನೂ ಹಾಗೇ ಅನ್ವಯಿಸಿಕೊಳ್ಳಲಾಯಿತೆ? ಲೆನಿನ್, ಮಾವೊ ಅವರು ತಮ್ಮ ದೇಶ-ಕಾಲಗಳ ಸಂದರ್ಭಕ್ಕನುಗುಣವಾಗಿ ಅನುಷ್ಠಾನ ಮಾಡಲಿಲ್ಲವೆ? ಭಾರತೀಯ ಕಮ್ಯುನಿಸ್ಟರು ತಮ್ಮದೇ ದಾರಿ ಕಂಡುಕೊಂಡಿಲ್ಲವೆ? ಹಾಗೆಯೇ ಎಲ್ಲರ ವಿಚಾರಧಾರೆಗಳು. ಬಸವಣ್ಣನವರ ವಿಚಾರದಲ್ಲೂ ಈ ಅಂಶ ಪ್ರಸ್ತುತ. ಹಾಗಂತ ಬಸವಣ್ಣನವರ ಹಾಗೂ ವಚನ ಚಳವಳಿಯ ಚಾರಿತ್ರಿಕ ಮಹತ್ವವನ್ನು ಕಿಂಚಿತ್ತೂ ಕಡಿಮೆ ಮಾಡಬೇಕಿಲ್ಲ.
ಚಾರಿತ್ರಿಕ ಮಹತ್ವ ಮತ್ತು ಸಮಕಾಲೀನ ಸಂದರ್ಭಗಳ ಸಂಬಂಧದಲ್ಲಿ ಎಲ್ಲರ ವಿಚಾರಗಳ ವ್ಯಾಪ್ತಿ, ಶಕ್ತಿ, ಇತಿಮಿತಿಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಗೌರವ ತೋರಿಸಬೇಕೆಂಬುದಷ್ಟೇ ನನ್ನ ವಿಚಾರ. ಈ ಹಿನ್ನೆಲೆಯಲ್ಲಿ ಬಂಡಾಯ ಸಾಹಿತ್ಯ ಚಳವಳಿಗೆ ಪರಂಪರೆಯ ಪ್ರಜ್ಞೆ ಬೇಕೆಂದು ಪ್ರತಿಪಾದಿಸುತ್ತ ಬಂದ ನಾನು. ವಚನ ಚಳವಳಿಗೆ ಮಹತ್ವ ನೀಡುತ್ತ ಬಂದಿದ್ದೇನೆಯೇ ಹೊರತು ಅರವಿಂದ ಜತ್ತಿಯವರು ಹೇಳಿದಂತೆ ಬಂಡಾಯ ಸಾಹಿತ್ಯ ಚಳವಳಿಗೆ ಅದೇ ಮೂಲವೆಂದು ಹೇಳಿಲ್ಲ.

ವಚನ ಚಳುವಳಿಯನ್ನು (ನನ್ನಂತೆಯೇ) ಶಿವಕೇಂದ್ರಿತ ಚಳವಳಿ ಎಂಬ ಅಂಶವನ್ನು ಒಪ್ಪಿರುವ ಸಾಣೆಹಳ್ಳಿ ಸ್ವಾಮೀಜಿಯವರು ‘ಶರಣರ ವಿಚಾರಗಳನ್ನು ಸರಿಯಾಗಿ ಅರಿತು ಆಚರಣೆಗೆ ತರದಿದ್ದರೆ ಅದು ಅವರ ಅನುಯಾಯಿಗಳ ತಪ್ಪೇ ಹೊರತು ಬಸವಣ್ಣನವರದಲ್ಲ’ ಎಂಬ ಮಾತನ್ನು ನಾನೂ ಒಪ್ಪುತ್ತೇನೆ. ಶಿವಕೇಂದ್ರಿತವಾದದ್ದನ್ನು ಅಪಾರ್ಥ ಮಾಡಿಕೊಳ್ಳಬೇಕಾಗಿಲ್ಲ ಎಂಬ ಅವರ ಮಾತನ್ನೂ ಒಪ್ಪುತ್ತೇನೆ. ನಾನು ಅಪಾರ್ಥ ಮಾಡಿಕೊಂಡಿಲ್ಲ ‘ಅರ್ಥಮಾಡಿಕೊಂಡಿದ್ದೇನೆ’ ಆದರೆ ‘ಮೇಲ್ವರ್ಗದವರನ್ನು ಬಸವಣ್ಣನವರಂತೆ ಅಂಬೇಡ್ಕರ್ ಕೂಡ ಪ್ರತಿಭಟಿಸಲು ಸಾಧ್ಯವಾಗಲಿಲ್ಲ’ ಎಂಬ ಅವರ ಮಾತನ್ನು ಒಪ್ಪುವುದು ಕಷ್ಟ. ಅಂಬೇಡ್ಕರ್ ಅವರ ಹೋರಾಟದ ಆದ್ಯತೆ ಇದ್ದದ್ದೇ ಮೇಲ್ವರ್ಗಗಳ ಸಾಮಾಜಿಕ ಸರ್ವಾಧಿಕಾರದ ವಿರುದ್ಧ ಎಂಬ ಅಂಶ ಸೂರ್ಯ ಸ್ಪಷ್ಟವಾಗಿದೆ. ಸಂಗಮೇಶ ಬಿರಾದಾರ ಅವರಂತೂ ಇನ್ನೂ ಮುಂದೆ ಹೋಗಿ ಅಂಬೇಡ್ಕರ್ ಅವರ ಹೋರಾಟ ಫಲಕಾರಿಯಾಗಲಿಲ್ಲವೆಂದು ವ್ಯಾಖ್ಯಾನಿಸಿ ‘ಅವರನ್ನು ನಂಬಿದವರನ್ನು ಅವರು ದಡ ಸೇರಿಸಲಿಲ್ಲ’ ಎಂದು ಆಕ್ಷೇಪಿಸುತ್ತಾರೆ. ಬಸವಣ್ಣನವರನ್ನು ಹೊಗಳುವ ಕಾರಣಕ್ಕಾಗಿ ಅಂಬೇಡ್ಕರ್ ಅವರನ್ನು ಅಪವ್ಯಾಖ್ಯಾನಕ್ಕೆ ಒಳಪಡಿಸಬೇಕಾಗಿಲ್ಲ. ಅಂಬೇಡ್ಕರ್ ಬೌದ್ಧಧರ್ಮ ಸ್ವೀಕರಿಸಿದ್ದು ಹಿಂದೂ ಧರ್ಮಕ್ಕೆ ತೋರಿದ ಪ್ರತಿರೋಧದ ಫಲವೇ ಹೊರತು ತಮ್ಮ ಹೋರಾಟ ಫಲಕಾರಿಯಾಗಲಿಲ್ಲ ಎಂದಲ್ಲ. ನಂಬಿದವರನ್ನು ದಡ ಸೇರಿಸಿದ್ದೇ ಅಂಬೇಡ್ಕರ್ ಸಾಧನೆ ಎಂಬುದಕ್ಕೆ ಸಂವಿಧಾನಾತ್ಮಕ ಮೀಸಲಾತಿಯೇ ಸಾಕ್ಷಿ. ಇನ್ನು ನಾನು ಗಾಂಧಿ, ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್ ಅವರನ್ನು ಎಲ್ಲ ವಿಚಾರಗಳ ಅಧ್ವರ್ಯರೆಂದು ಬಿಂಬಿಸಲು ಪ್ರಯತ್ನಿಸಿದ್ದೇನೆಂದು ‘ಸಂಶೋಧಿಸಿರುವ’ ಸಂಗಮೇಶರು ಇಂಥ ವಿಚಾರಗಳು ‘ಈ ಮೂವರ ಪೇಟೆಂಟ್‌ಗಳೇ?’ ಎಂದು ಪ್ರಶ್ನಿಸುವ ಮೂಲಕ ಬಸವಣ್ಣನವರಿಗೆ ಪೇಟೆಂಟ್ ಕೊಡಿಸಲು ಪ್ರಯತ್ನಿಸಿದ್ದಾರೆ. ಪಾಪ! ಬಸವಣ್ಣನವರಿಗೆ ಅದರ ಅಗತ್ಯವಿರಲಿಲ್ಲವೆಂದು ಇಂಥವರೆಲ್ಲರೂ ಅರ್ಥಮಾಡಿಕೊಳ್ಳಬೇಕು. ಬಸವಣ್ಣನವರಿಗೇ ಸ್ವತಃ ಶಕ್ತಿಯಿರುವಾಗ ಅನ್ಯರನ್ನು ಹಳಿದು ಅವರನ್ನು ಉಳಿಸಬೇಕಾಗಿಲ್ಲ. ಬಸವಪ್ರಭು ಪಾಟೀಲರಂತೆ ಬಸವಣ್ಣನವರ ವೈದಿಕ ವಿರೋಧಿ ಹೋರಾಟವು ಗಾಂಧೀಜಿಯವರ ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತ ದೊಡ್ಡದೆಂದು ವೈಭವೀಕರಿಸಬೇಕಾಗಿಯೂ ಇಲ್ಲ. ಎರಡು ಹೋರಾಟಗಳ ಸಂದರ್ಭ ಮತ್ತು ಸ್ವರೂಪವೇ ಬೇರೆ. ಆದರೆ ಎರಡೂ ದೊಡ್ಡ ಹೋರಾಟಗಳು. ಈ ಸತ್ಯವನ್ನು ಒಪ್ಪಿಕೊಳ್ಳುವ ಬದಲು ಸಾರ್ವಕಾಲಿಕ ಮತ್ತು ಸರ್ವಶ್ರೇಷ್ಠತೆಯ ಕೀರ್ತಿ ಒಬ್ಬರಿಗೆ ಮಾತ್ರವೇ ಸಲ್ಲಬೇಕೆಂಬ ಆಂತರ್ಯ ಅನುಚಿತವೆಂದೇ ನಾನು ಭಾವಿಸುತ್ತೇನೆ. ಈ ‘ಆಂತರ್ಯ’ ನನ್ನ ವಿಚಾರಧಾರೆಯನ್ನು ಒಪ್ಪದ ಎಲ್ಲ ಲೇಖನಗಳಲ್ಲೂ ಇದೆ. ಇದೇ ನಿಜವಾದ ಸಮಸ್ಯೆ.
ಬಿ.ಎಲ್. ವೇಣು ಅವರು ಸಹ ಬಸವಣ್ಣನವರ ಪರ ವಕಾಲತ್ತು ವಹಿಸಿದಂತೆ ಮಾತಾಡಿದ್ದಾರೆ. ಅವರೇ ಹೇಳಿದಂತೆ ನನಗೆ ‘ವಚನಕಾರರನ್ನು ಅಗೌರವಿಸುವ ವಿಚಾರ’ ಇಲ್ಲ. ಜೊತೆಗೆ ‘ಯಾರ ಕಾಲದಲ್ಲೇ ಆಗಲಿ ಎಲ್ಲವೂ ಆಗಿಬಿಡುವ ಸಾಧ್ಯತೆಗಳು ವಿರಳ’ ಎಂದು ಅವರೇ ಹೇಳಿದ್ದಾರೆ. ನಾನು ಹೇಳುತ್ತಿರುವುದೂ ಅದನ್ನೇ. ಬಸವಣ್ಣನವರ ಮತ್ತು ವಚನ ಚಳವಳಿಯ ವಿಚಾರಗಳನ್ನು ಚಾರಿತ್ರಿಕ ಸಂದರ್ಭದಲ್ಲಿ ಗೌರವಿಸುತ್ತ ಸಮಕಾಲೀನ ಸಂದರ್ಭದ ವಿವೇಕದಿಂದ ವಿಶ್ಲೇಷಿಸುವುದು ನನ್ನ ಪ್ರಯತ್ನ. ಇದನ್ನು ಸರಿಯಾಗಿ ಗ್ರಹಿಸಿದಂತೆ ಕಾಣುವ ವೇಣು ಉಳಿದ ಬಂಡಾಯಗಾರರೆಲ್ಲ ಬಸವಣ್ಣನವರ ನಕಲುಗಳಷ್ಟೇ ಎಂಬ ತೀರ್ಪು ನೀಡಿ ‘ಬಸವಣ್ಣನವರೆಂದೂ ಈಗಿನ ಬಂಡಾಯಗಾರರಂತೆ ಅವಕಾಶವಾದಿಯಾಗಲಿಲ್ಲ’ ಎಂಬ ಅಗತ್ಯವಿಲ್ಲದ ಮಾತಾಡುತ್ತಾರೆ. ಇದು ಅವರ ಸ್ವವಿಮರ್ಶೆಯಾದರೆ ತುಂಬಾ ಸಂತೋಷ. ಈ ವಿಚಾರ ಹೋಗಲಿ ಎಂದರೆ ‘ಕಾಯಕ ಸಂಸ್ಕೃತಿ’ಗೂ ಕಾರ್ಲ್‌ಮಾರ್ಕ್ಸ್ ಮತ್ತು ಸಮಾಜವಾದಕ್ಕೂ ಸಮೀಕರಣ ಮಾಡಿ ಹಾದಿ ತಪ್ಪುತ್ತಾರೆ!
‘ಕಾಯಕವೇ ಕೈಲಾಸ’ ಎಂಬ ಪದಗುಚ್ಚ ಮತ್ತು ಪರಿಕಲ್ಪನೆಯನ್ನು ಆಯ್ದಕ್ಕಿ ಮಾರಯ್ಯನವರು ತಮ್ಮ ವಚನದಲ್ಲಿ ಹೇಳಿದ್ದಾರೆ (ನನಗೆ ತಿಳಿದಂತೆ ಬಸವಣ್ಣನವರ ವಚನಗಳಲ್ಲಿ ಇದು ಇಲ್ಲ). ‘ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು/ ಲಿಂಗ ಪೂಜೆಯಾದಡೂ ಮರೆಯಬೇಕು/ ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು/ ಕಾಯಕವೇ ಕೈಲಾಸವಾದ ಕಾರಣ/ ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು!’ ಇದು ಆಯ್ದಕ್ಕಿ ಮಾರಯ್ಯನವರ ಕಾಯಕವೇ ಕೈಲಾಸವೆಂಬ ನಿಷ್ಠೆಯ ವಚನ ನಿಜ; ಕಾಯಕವೇ ಕೈಲಾಸವೆಂದು ಭಾವಿಸುವ ಮೂಲಕ ಕಾಯಕಕ್ಕೆ ಗೌರವ ದೊರಕಿಸಿದ್ದು ಒಂದು ಚಾರಿತ್ರಿಕ ಸಂಗತಿ. ಅದರ ಮಹತ್ವವನ್ನು ಒಪ್ಪುತ್ತಲೇ ಬಿ. ಕೃಷ್ಣಮೂರ್ತಿಯವರು ಹೇಳುವಂತೆ ಅಂದಿನ ಮತ್ತು ಇಂದಿನ ಆಳುವ ವರ್ಗಗಳು ‘ಕಾಯಕ ಒಬ್ಬರದು ಕೈಲಾಸ ಮತ್ತೊಬ್ಬರದು ಎನ್ನುವ ಸಾಮಾಜಿಕ- ಆರ್ಥಿಕ ಅಸಮಾನತೆಯನ್ನು ಸಾಧಿಸಿದ್ದಾರೆ’ ಎಂಬಂಶವನ್ನು ಕಡೆಗಣಿಸಲಾಗದು.

ಇನ್ನೊಂದು ಅಂಶವನ್ನೂ ಇಲ್ಲಿ ಗಮನಿಸಬೇಕು, ಸಾಂಪ್ರದಾಯಿಕ ಕುಲಮೂಲ ಪದ್ಧತಿಯನ್ನು ಆಧರಿಸಿದ ಬಸವಣ್ಣನವರ ಕಾಲದ ‘ಕಾಯಕ ಸಂಸ್ಕೃತಿ’ಗೂ ಕೈಗಾರಿಕೀಕರಣದ ಮೂಲಕ ಕುಲಮೂಲವನ್ನು ಮೀರಿದ ಕಾರ್ಲ್‌ಮಾರ್ಕ್ಸ್ ಕಾಲದ ‘ಕಾರ್ಮಿಕ ಸಂಸ್ಕೃತಿ’ಗೂ ವ್ಯತ್ಯಾಸವಿದೆ. ಎರಡೂ ಶ್ರಮಸಂಸ್ಕೃತಿಯೇ ಆಗಿದ್ದರೂ ಶ್ರಮದ ಮೂಲ ಮತ್ತು ಸ್ವರೂಪದಲ್ಲಿ ಅಂತರವಿದೆ. ಕುಲ ಮತ್ತು ಕಸುಬು ಎರಡೂ ಒಂದಾಗಿರುವ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಕಾಯಕ ನಿಷ್ಠೆಯು ಕುಲವನ್ನೂ ಒಳಗೊಳ್ಳುತ್ತದೆ. ಆದರೆ ಕೈಗಾರಿಕೀಕರಣದಿಂದ ಕುಲಮೂಲ ಕಾಯಕವನ್ನು ಮೀರಿ ಸಾಮೂಹಿಕ ಉತ್ಪಾದನೆಯ ಕಾರ್ಖಾನೆಗಳು ಬಂದವು; ಕಾರ್ಮಿಕ ಸಂಸ್ಕೃತಿಯನ್ನು ಬೆಳೆಸಿದವು. ಸಮಾಜವಾದದ ಪರಿಕಲ್ಪನೆಗೆ ಈ ಚಾರಿತ್ರಿಕ ಸಂದರ್ಭ ಒತ್ತಾಸೆಯಾಯಿತು. ಸಮಾಜವಾದದೊಳಗೆ ಇರುವ ಕಾಯಕ ಗೌರವದ ಮೌಲ್ಯ ಹನ್ನೆರಡನೇ ಶತಮಾನದಲ್ಲಿ ಇತ್ತು. ಆದರೆ ಅದಷ್ಟೇ ಇಂದಿನ ಸಮಾಜವಾದದ ಪರಿಕಲ್ಪನೆಯಲ್ಲ. ಇಂದು ಕುಲಮೂಲ ಕಾಯಕ ಸಂಸ್ಕೃತಿ ಮತ್ತು ಕಾರ್ಮಿಕ ಸಂಸ್ಕೃತಿಗಳೆರಡೂ ಜೀವಂತವಾಗಿರುವ ವೈರುಧ್ಯದ ‘ಶ್ರಮ ಸಂಸ್ಕೃತಿ’ಯಲ್ಲಿ ನಾವು ಬದುಕುತ್ತಿದ್ದೇವೆ. ಸ್ಥಿತ್ಯಂತರದ ಪ್ರಕ್ರಿಯೆಯಲ್ಲಿದ್ದೇವೆ. ಇದನ್ನು ಅರ್ಥ ಮಾಡಿಕೊಂಡರೆ ವಿವಿಧ ಚಾರಿತ್ರಿಕ ಸಂದರ್ಭಗಳ ವಾಸ್ತವದ ಅರಿವು ತಾನಾಗಿಯೇ ಆಗುತ್ತದೆ. ಆಗ ‘ಬಸವಣ್ಣನವರನ್ನು ರಕ್ಷಿಸಲು’ ಇವರ್ಯಾರ ನೆರವೂ ಬೇಕಾಗುವುದಿಲ್ಲ.
ಅದೇನೇ ಇರಲಿ; ನನ್ನ ಲೇಖನದ ನೆಪದಲ್ಲಿ ಸಾಕಷ್ಟು ಚರ್ಚೆಯಾಗಿದೆ. ವಿರೋಧದ ಪ್ರತಿಕ್ರಿಯೆಗಳ ಜೊತೆಗೆ ವಿಶ್ಲೇಷಣೆಯ ಪ್ರತಿಕ್ರಿಯೆಗಳೂ ಬಂದಿವೆ. ನನ್ನ ಈ ಲೇಖನದಲ್ಲಿ ಉಲ್ಲೇಖಿಸಿದವರಲ್ಲದೆ, ಆತ್ಮಾವಲೋಕನದ ನೆಲೆಯಲ್ಲಿ ಕೆಲವು ಗಟ್ಟಿ ಅಂಶಗಳನ್ನು ಹೇಳಿದ ಮಹೇಶ್ ತಿಪ್ಪಶೆಟ್ಟಿ, ದಲಿತ ಶರಣರಿಗೆ ಬಹುವಚನ ಬಳಸಿ ಎಂದ ಮ.ನ. ಜವರಯ್ಯ, ಚಾರಿತ್ರಿಕ ಬೆಳವಣಿಗೆಗಳ ಮಹತ್ವವನ್ನು ವಿಶ್ಲೇಷಿಸಿದ ಬಿ. ಕೃಷ್ಣಮೂರ್ತಿ, ಬಿಜ್ಜಳನ ರಾಜಕೀಯ ಸಂದರ್ಭ ಮತ್ತು 20ನೇ ಶತಮಾನದ ಸಂದರ್ಭಗಳ ಅಂತರ ಹೇಳಿದ ರಂಗರಾಜ ವನದುರ್ಗ, ಸಮಯೋಚಿತ ಚಿಂತನೆ ಎಂದ ಸತ್ಯಾನಂದ ಪಾತ್ರೋಟ, ಅರ್ಥಪೂರ್ಣ ನಿಲುವು’ ಎಂದ ಲಕ್ಷ್ಮೀನಾರಾಯಣ, ಮತ್ತು ಮೌಖಿಕವಾಗಿ ಬೆಂಬಲಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತ ಕೊನೆಯಲ್ಲಿ ಒಂದು ಮಾತು ಹೇಳಬಯಸುತ್ತೇನೆ:

‘ಪ್ರಜಾವಾಣಿ’ಯ ನನ್ನ ಮೂಲ ಲೇಖನವನ್ನೂ ಒಳಗೊಂಡಂತೆ ಯಾವ ಲೇಖನಗಳಲ್ಲೂ ಬಸವಣ್ಣ ಮತ್ತು ವಚನ ಚಳವಳಿಯ ಚಾರಿತ್ರಿಕ ಮಹತ್ವವನ್ನು ಗೌಣಗೊಳಿಸದೆ ನಾನು ಮಾಡಿದ ವಿಶ್ಲೇಷಣೆಯು ನಿಜವಾದ ಬಸವಾನುಯಾಯಿಗಳನ್ನೂ ಒಳಗೊಂಡಂತೆ ಜಾತಿ ಮೂಲ ಮೀರಿದ ಎಲ್ಲ ಮನುಷ್ಯ ಮನಸ್ಸುಗಳಿಗೆ ಅರ್ಥವಾಗುತ್ತದೆಯೆಂದು ನಂಬುತ್ತೇನೆ; ಚಾರಿತ್ರಿಕ ಸಂದರ್ಭದ ಸತ್ಯಗಳನ್ನಾಧರಿಸಿದ ನನ್ನ ಮೂಲ ವಿಚಾರಧಾರೆಯನ್ನು ಮತ್ತಷ್ಟು ಪಕ್ವಗೊಳಿಸಿದ ಇಡೀ ಚರ್ಚೆಗೆ ಮತ್ತೊಮ್ಮೆ ಅಭಿನಂದಿಸುತ್ತೇನೆ.
-ಬರಗೂರು ರಾಮಚಂದ್ರಪ್ಪ
(ಬಸವಣ್ಣನವರ ಕಾಲದಲ್ಲಿ ಎಲ್ಲವೂ ಆಗಿತ್ತೇ? ಎಂಬ ಲೇಖನಕ್ಕೆ ಸಂಬಂಧಿಸಿದ ಚರ್ಚೆ  ಇಲ್ಲಿಗೆ ಮುಕ್ತಾಯವಾಯಿತು.)

prajavani

http://prajavani.net/Content/Jul112010/sunday20100710193913.asp?section=updatenews

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: