ಕೇಸರಿ ಭಯೋತ್ಪಾದನಾ ಜಾಲ ಸ್ಫೋಟಿಸಿದಾಗ…


ಮಂಗಳವಾರ – ಜುಲೈ -13-2010

ಅ ಪೂರ್ಣ ವಿಚಾರಗಳೇನಿದ್ದರೂ ಅಜ್ಮೀರ್‌ನ ಖ್ವಾಜ ಮುಈನುದ್ದೀನ್ ಜಿಸ್ತಿ ದರ್ಗಾದಲ್ಲಿ ಪೂರ್ಣಗೊಳ್ಳುತ್ತವೆ ಎಂಬ ಮಾತು ಚಾಲ್ತಿಯಲ್ಲಿದೆ. ಅದೇ ರೀತಿ ಅಪೂರ್ಣ ತನಿಖೆಯೊಂದು ಅಂತ್ಯ ಕಾಣುವ ಹಂತದಲ್ಲಿದೆ. ಶತಮಾನಗಳಷ್ಟು ಹಳೆಯದಾದ ಅಜ್ಮೀರ್ ದರ್ಗಾದಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬಾಂಬ್ ಸ್ಫೋಟ ನಡೆದು ಎರಡೂವರೆ ವರ್ಷಗಳು ಕಳೆದ ಬಳಿಕ ದೇವೇಂದ್ರ ಗುಪ್ತ, ವಿಷ್ಣು ಪ್ರಸಾದ್ ಮತ್ತು ಚಂದ್ರಶೇಖರ್ ಪತಿದಾರ್ ಎಂಬ ಮೂವರು ಆರೋಪಿಗಳನ್ನು ರಾಜಸ್ಥಾನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಅಜ್ಮೀರ್ ಶರೀಫ್ ಸ್ಫೋಟ ಅಕ್ಟೋಬರ್ 11, 2007 3 ಸಾವು

ಮಾಲೆಗಾಂವ್ ಸ್ಫೋಟ ಸೆಪ್ಟಂಬರ್ 8, 2006

ಮಕ್ಕಾ ಮಸೀದಿ ಸ್ಫೋಟ ಮೇ 18, 2007 14 ಸಾವು

ಮಾಲೆಗಾಂವ್ ಸ್ಫೋಟ ॥ ಸೆಪ್ಟಂಬರ್ 29, 2008 7 ಸಾವು

2007ರ ಅಕ್ಟೋಬರ್‌ನಲ್ಲಿ ಮೂವರು ಸಾವನ್ನಪ್ಪಿರುವ ಸ್ಫೋಟಕ್ಕೆ ಆರೆಸ್ಸೆಸ್ ಕಾರ್ಯಕರ್ತ ದೇವೇಂದ್ರ ಗುಪ್ತ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಖರೀದಿಸಿದ್ದನೆಂದು ಶಂಕಿಸಲಾಗಿದೆ. ಕಳೆದ ಎಪ್ರಿಲ್ 30ರಂದು ಆರೋಪಿಗಳನ್ನು ಬಂಧಿಸುವವರೆಗೂ, ಅಜ್ಮೀರ್ ಸ್ಫೋಟವನ್ನು ಜಿಹಾದಿ ಭಯೋತ್ಪಾದಕರು ನಡೆಸಿದ್ದಾರೆ ಎಂದು ಮಾಧ್ಯಮದ ಬಹುದೊಡ್ಡ ಭಾಗವು ಕತೆಕಟ್ಟಿ ಪ್ರಚಾರ ಮಾಡಿಕೊಂಡಿತ್ತು.

ಜಿಹಾದಿಗಳು ಮುಸ್ಲಿಮರನ್ನೇ ಗುರಿಯಾಗಿಸುವರೇ? ಎಂಬುದು ವಿವಾದಾತ್ಮಕ ಪ್ರಶ್ನೆಯಾಗಿದೆ. ಲಾಹೋರ್‌ನ ಡಾಟಾ ಗಂಜ್‌ನಲ್ಲಿ ಈ ರೀತಿ ಶವಗಳುರುಳಿದ್ದರೆ ಅಂತಹ ಪ್ರಶ್ನೆಗೆ ಇಂತಹ ವಿವಾದಾತ್ಮಕ ಉತ್ತರ ನೀಡಬಹುದಿತ್ತು. ಆದರೆ ಭಾರತದಲ್ಲಿ ಸಕಾರಾತ್ಮಕ ತನಿಖೆಯ ದೃಷ್ಟಿಯಿಂದಲೂ ಇಂತಹ ಪ್ರಶ್ನೆಗಳಿಗೆ ಬೆಲೆ ಸಿಗುವುದಿಲ್ಲ. ತಕ್ಷಣವೇ ಸಂಶಯದ ದೃಷ್ಟಿ ದೃಢವಾಗಿರುತ್ತದೆ ಮತ್ತು ಸಹಜವಾಗಿ ಅದು ‘ಇಸ್ಲಾಮಿಕ್ ಭಯೋತ್ಪಾದಕ’ರತ್ತ ತೆರಳುತ್ತದೆ.

ತನಿಖೆಯ ಹಂತ ವಿಸ್ತಾರವಾದಂತೆ, ತನಿಖೆಯ ವಿವಿಧ ಘಟ್ಟಗಳಲ್ಲಿ ಸಮುದಾಯದ ಯುವಕರನ್ನು ಬಂಧಿಸಲಾಗಿತ್ತು. ಕೇಸರಿ ಭಯೋತ್ಪಾದಕ ಗುಪ್ತ ಮತ್ತು ಆತನ ಸಹಚರರತ್ತ ತನಿಖಾ ದೃಷ್ಟಿ ಹರಿಯುವವರೆಗೂ ಇಂತಹ ಯತ್ನಗಳು ಮುಂದುವರಿದಿದ್ದವು.

‘‘ನಾವು ಆ ಧರ್ಮದ (ಹಿಂದೂತ್ವ) ಕೆಲವು ಜನರನ್ನು ಬಂಧಿಸಿದ್ದೇವೆ ಮತ್ತು ನಾವು ಸರಿಯಾದ ಮಾರ್ಗದಲ್ಲಿದ್ದೇವೆ ಎನ್ನುವುದು ನಮ್ಮ ದೃಢ ನಂಬಿಕೆಯಾಗಿದೆ’’ ಎಂದು ರಾಜಸ್ಥಾನ ಭಯೋತ್ಪಾದನೆ ನಿಗ್ರದ ದಳದ ಮುಖ್ಯಸ್ಥ ಕಪಿಲ್ ಗರ್ಗ್ ಹೇಳಿದ್ದಾರೆ.

ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆಯ ವಿಷಯದಲ್ಲೂ ತನಿಖೆಯು ಸರಿಯಾದ ಪಥದಲ್ಲಿ ಸಾಗಿದೆ ಎಂದು ಸಿಬಿಐ ಪ್ರತಿಪಾದಿಸಿದೆ. ಸುಮಾರು 14 ಮಂದಿ ಬಲಿಯಾಗಿ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಮಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೂ ಕೇಸರಿ ಭಯೋತ್ಪಾದನೆ ಸಂಘಟನೆಗೆ ಸೇರಿದ ನಾಲ್ವರು ಭಯೋತ್ಪಾದಕರನ್ನು ಕಳೆದ ಮೇನಲ್ಲಿ ಬಂಧಿಸಲಾಗಿದೆ. ಘಟನೆ ನಡೆದ ವೇಳೆ, ಆ ಸ್ಫೋಟವನ್ನು ಹರ್ಕತುಲ್ ಜಿಹಾದೆ ಇಸ್ಲಾಮಿ (ಹುಜಿ) ಸಂಘಟನೆಯು ನಡೆಸಿದೆ ಎಂದು ಹೈದರಾಬಾದ್ ಪೊಲೀಸರು ಪ್ರತಿಪಾದಿಸಿದ್ದರು.

ತಮ್ಮ ವಾದವನ್ನು ಸಮರ್ಥಿಸಲು ಪೊಲೀಸರು 26 ಮಂದಿ ಮುಸ್ಲಿಮ್ ಯುವಕರನ್ನು ಬಂಧಿಸಿ, ತನಿಖೆಗೊಳಪಡಿಸಿದ್ದರು. ತಪ್ಪೊಪ್ಪಿಕೊಳ್ಳುವಂತೆ ಅವರನ್ನು ಬಲವಂತ ಪಡಿಸಲಾಗಿತ್ತು ಮತ್ತು ಸುಮಾರು 6 ತಿಂಗಳುಗಳ ಕಾಲ ಜೈಲಿನಲ್ಲಿರಿಸಲಾಗಿತ್ತು.

ಆದರೆ ಹೈದರಾಬಾದ್ ಮಕ್ಕಾ ಮಸೀದಿ ಸ್ಫೋಟದ ಈ ಕತೆಗೂ ಸಿಬಿಐಗೆ ದೊರೆತ ಸಾಕ್ಷಕ್ಕೂ ಯಾವುದೇ ಸಾಮ್ಯತೆಯಿರಲಿಲ್ಲ. ಸ್ಫೋಟಕ್ಕೆ ಬಳಸಲಾದ ಸಿಮ್ ಕಾರ್ಡ್, ಮೊಬೈಲ್ ಫೋನ್ ಮತ್ತು ಲೋಹದ ಟ್ಯೂಬ್‌ನಲ್ಲಿ ಅಳವಡಿಸಲಾಗಿದ್ದ ಸ್ಫೋಟಕಗಳು ಅಜ್ಮೀರ್ ಸ್ಫೋಟದಲ್ಲಿ ಬಳಸಲಾಗಿದ್ದ ವಸ್ತುಗಳಿಗೂ ಸಾಮ್ಯತೆಯಿತ್ತು. ಎರಡೂ ಬಾಂಬ್‌ಗಳನ್ನು ಆರ್‌ಡಿಎಕ್ಸ್ ಮತ್ತು ಟಿಎನ್‌ಟಿ ಮಿಶ್ರಣದಿಂದ ತಯಾರಿಸಲಾಗಿತ್ತು. ಭಾರತೀಯ ಸೇನೆಯಲ್ಲಿ ಬಳಸಲಾಗುವ ಮಿಶ್ರಣದ ಪ್ರಮಾಣದ ಮಾದರಿಯನ್ನೇ ಈ ಸ್ಫೋಟದಲ್ಲೂ ಬಳಸಲಾಗಿತ್ತು.

ಅಜ್ಮೀರ್ ಸ್ಫೋಟದ ಮುಖ್ಯ ಸಂಚುಗಾರ ಸುನಿಲ್ ಜೋಶಿ ಎಂಬುದನ್ನು ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ಮಾಧ್ಯಮಕ್ಕೆ ಬಹಿರಂಗ ಪಡಿಸಿದ್ದಾರೆ. ಮಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟಿಸಲು ಬಳಸಲಾದ ಮೊಬೈಲ್ ಸಿಮ್ ಕಾರ್ಡ್‌ಗಳನ್ನೇ ಅಜ್ಮೀರ್ ಸ್ಫೋಟಕ್ಕೂ ಬಳಸಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಅದೇ ಹೊತ್ತಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ ಪಣಜಿ ನ್ಯಾಯಾಲಯದಲ್ಲಿ 11 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿದೆ. ಎಲ್ಲ ಆರೋಪಿಗಳೂ ಕೇಸರಿ ಭಯೋತ್ಪಾದನಾ ಸಂಘಟನೆಯಾದ ಸನಾತನ ಸಂಸ್ಥೆಯ ಕಾರ್ಯಕರ್ತರಾಗಿದ್ದಾರೆ. 2009ರ ಅಕ್ಟೋಬರ್‌ನಲ್ಲಿ ನಡೆದ ಮಡಗಾಂವ್ ಸ್ಫೋಟದ ಸಂಚಿನಲ್ಲಿ ಈ ಎಲ್ಲ ಆರೋಪಿಗಳು ಭಾಗಿಯಾಗಿದ್ದರು ಎಂದು ಆಪಾದಿಸಲಾಗಿದೆ. ಸ್ಥಳೀಯ ಹಬ್ಬವೊಂದರ ವೇಳೆ ಬಾಂಬ್ ಸ್ಫೋಟ ನಡೆಸಲು ಸ್ಫೋಟಕಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ನಡೆದ ಈ ಸ್ಫೋಟದಲ್ಲಿ ಕೇಸರಿ ಭಯೋತ್ಪಾದಕ ಸಂಘಟನೆಯ ಇಬ್ಬರು ಕಾರ್ಯಕರ್ತರು ಸಾವನ್ನಪ್ಪಿದ್ದರು.

ಈ ವರ್ಷದ ಫೆಬ್ರವರಿಯಲ್ಲಿ ನಡೆದ ಪುಣೆಯ ಜರ್ಮನಿ ಬೇಕರಿ ಸ್ಫೋಟ ಪ್ರಕರಣದ ತನಿಖೆಯಲ್ಲೂ ಸಂಶಯದ ಸುಳಿಯೊಂದು ತಲೆ ಎತ್ತಿದೆ. ಆರಂಭದಲ್ಲಿ ಈ ಸ್ಫೋಟದ ಹೊಣೆಯನ್ನು ಇಂಡಿಯನ್ ಮುಜಾಹಿದೀನ್ (ಐಎಂ) ಅಥವಾ ಜಿಹಾದಿ ಸಂಘಟನೆಗಳ ವಿಶ್ರಾಂತ ಘಟಕಗಳ ತಲೆಗೆ ಕಟ್ಟಲಾಗಿದೆ. ಈ ಕುರಿತು ಕೆಲವು ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಿ ತನಿಖೆಗೂ ಒಳಪಡಿಸಲಾಗಿದೆ.

ಕಳೆದ ತಿಂಗಳು ಭಟ್ಕಳದ ಅಬ್ದುಲ್ ಸಮದ್ ಎಂಬಾತನನ್ನು ಬಂಧಿಸಿದ್ದ ವೇಳೆ, ಪುಣೆ ಬೇಕರಿ ಸ್ಫೋಟ ಪ್ರಕರಣದಲ್ಲಿ ಸಿಸಿಟಿವಿಯಲ್ಲಿ ಕಂಡು ಬಂದಿರುವ ವ್ಯಕ್ತಿ ಆತನೇ ಎಂಬ ವಾದಕ್ಕೆ ಮಹಾರಾಷ್ಟ್ರ ಎಟಿಎಸ್ ಹೆಚ್ಚು ಪುಷ್ಟಿ ನೀಡಿತ್ತು. ಆದಾಗ್ಯೂ ಸಮದ್‌ನನ್ನು ಅಂತಹ ಯಾವುದೇ ಆರೋಪಗಳಿಲ್ಲದೆ ಬಿಡುಗಡೆ ಮಾಡಲಾಗಿದೆ. ಸ್ಫೋಟದ ಆರೋಪವನ್ನು ಆತನ ವಿರುದ್ಧ ದಾಖಲಿಸಲಾಗಿಲ್ಲ.

ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿರುವ ಮಹಾರಾಷ್ಟ್ರ ಎಟಿಎಸ್‌ನ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ನೇತೃತ್ವದಲ್ಲಿ, 2008ರ ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣದ ಕುರಿತು ನಡೆಸಿದ ತನಿಖೆಯು ಭಯೋತ್ಪಾದನೆಯ ಕುರಿತಾದ ಭಾರತದಲ್ಲಿದ್ದ ಭಾವನೆಯು ಬದಲಾವಣೆಯಾಗಲು ನಾಂದಿಯಾಯಿತು. ಹೇಮಂತ್ ಕರ್ಕರೆ ನೇತೃತ್ವದಲ್ಲಿ ನಡೆದ ತನಿಖೆಯು 2005-06ರಲ್ಲಿ ಸ್ಥಾಪನೆಯಾದ ಪುಣೆ ಮೂಲದ ಕೇಸರಿ ಭಯೋತ್ಪಾದನಾ ಸಂಘಟನೆ ಅಭಿನವ್ ಭಾರತ್‌ನ ಕಾರ್ಯಾಚರಣೆ ಮೊತ್ತಮೊದಲ ಬಾರಿಗೆ ದೇಶದ ಮುಂದೆ ತೆರೆದಿಟ್ಟಿತ್ತು.

ಕೇಸರಿ ಭಯೋತ್ಪಾದಕ ಸಂಘಟನೆಗಳ ಭಯೋತ್ಪಾದನಾ ಚಟುವಟಿಕೆಗಳನ್ನು ಬಯಲಿಗೆಳೆಯುವಲ್ಲಿ ಕರ್ಕರೆ ನೇತೃತ್ವದ ತಂಡವು ಯತ್ನಿಸಿತ್ತು.ಮಕ್ಕಾ ಮಸೀದಿ, ಅಜ್ಮೀರ್ ಮತ್ತು ಇತರ ಕೆಲವು ಸ್ಫೋಟಗಳು ಇತ್ತೀಚಿನ ಎರಡು ವರ್ಷಗಳಲ್ಲಿ ನಡೆದ ಸ್ಫೋಟಗಳಾದರೂ, 2002-03ರಲ್ಲಿ ಭೋಪಾಲ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಕೇಸರಿ ಸಂಘಟನೆಗಳ ಕಾರ್ಯಕರ್ತರಾದ ಕಲ್ಸಂಗ್ರ ಮತ್ತು ಸುನಿಲ್ ಜೋಶಿ ಐಇಡಿಯೊಂದಿಗೆ ಪತ್ತೆಯಾದಾಗಲೇ ಇಂತಹುದೊಂದು ಲಕ್ಷಣ ಕಂಡು ಬಂದಿತ್ತು.

ಅವರನ್ನು ಅಂದು ಪ್ರಶ್ನಿಸಲಾಗಿತ್ತು. ಆದರೆ ಯಾವುದೇ ಸಾಕ್ಷ ಪತ್ತೆಯಾಗಿರಲಿಲ್ಲ. ಆದರೂ ಬಜರಂಗ ದಳದ ಕೈವಾಡವಿರುವುದನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅಂದು ಶಂಕಿಸಿದ್ದರು.ಬಳಿಕ 2006ರಲ್ಲಿ ನಾಂದೇಡ್ ಮತ್ತು ಕಾನ್ಪುರ್‌ನಲ್ಲಿ ಸಂಘ ಪರಿವಾರ ನಾಯಕರ ಮನೆಗಳಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು.

ಆ ವರ್ಷ ಮಹಾರಾಷ್ಟ್ರದ ಪುರ್ನ, ಫೂಲ್‌ಬನಿ, ಜಲ್ನದ ಮಸೀದಿಗಳಲ್ಲಿ ಕೆಲವು ಸಣ್ಣ ಪ್ರಮಾಣದ ಸ್ಫೋಟಗಳೂ ನಡೆದಿದ್ದವು. ನಾಂದೇಡ್‌ನಲ್ಲಿ ಪತ್ತೆಯಾದ ಸ್ಫೋಟಕವು ಔರಂಗಾಬಾದ್‌ನ ಮಸೀದಿಯಲ್ಲಿ ಸ್ಫೋಟಿಸುವುದಕ್ಕಾಗಿತ್ತು ಎನ್ನಲಾಗಿದೆ. ಔರಂಗಾಬಾದ್‌ನ ನಕಾಶೆ, ಮುಸ್ಲಿಮ್ ಪುರುಷನ ವಸ್ತ್ರ ಮತ್ತು ನಕಲಿ ಗಡ್ಡ ಅಲ್ಲಿ ಪತ್ತೆಯಾಗಿತ್ತು. ಸ್ಫೋಟ ಪ್ರಕರಣವನ್ನು ಮುಸ್ಲಿಮರ ತಲೆಗೆ ಕಟ್ಟುವ ಹುನ್ನಾರ ಇದಾಗಿತ್ತು. ಈ ಕುರಿತು ಹೆಚ್ಚು ಗಮನ ಹರಿಸಲು ಅಷ್ಟೇ ಸಾಕಾಗಿತ್ತು.

ಆದಾಗ್ಯೂ ಈ ವರ್ಷದ ಮೇ-ಜೂನ್‌ವರೆಗೂ, ಮಾಧ್ಯಮಗಳು ಈ ಎಚ್ಚರಿಕೆಯನ್ನು ಗಂಭೀರವಾಗಿ ಗಮನಿಸಲೇ ಇಲ್ಲ ಅಥವಾ ಅದನ್ನು ನಿರ್ಲಕ್ಷಿಸುವ ಗೋಜಿಗೂ ಅವು ಹೋಗಲಿಲ್ಲ. 2008ರಲ್ಲಿ ಕರ್ಕರೆ ಮಾಲೆಗಾಂವ್ ಸ್ಫೋಟದ ತನಿಖೆಯ ನೇತೃತ್ವ ವಹಿಸಿದ್ದ ಎರಡು ತಿಂಗಳು ಮಾತ್ರ ಅವು ಈ ಕುರಿತು ಗಮನ ಹರಿಸಿದ್ದವು. ಆದರೆ ಈ ರೀತಿಯ ನಿರ್ಲಕ್ಷವನ್ನು ಎತ್ತಿಹಿಡಿಯಲೂ ಅವುಗಳಿಗೆ ಕಷ್ಟವಾಗುತ್ತಿದೆ.

ಕಳೆದ 10 ವರ್ಷಗಳಲ್ಲಿ, ಕೇಸರಿ ಹಿಂಸಾಚಾರದ ಕತೆಗಳು ವರದಿಯಾಗುತ್ತಲೇ ಇವೆ. ಈ ಕುರಿತು ವ್ಯವಸ್ಥಿತ ತನಿಖೆ ನಡೆಸುವ ಬದಲು ಘಟನೆ-ಘಟನೆಯನ್ನು ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ. ದೊಡ್ಡ ಪ್ರಕರಣಗಳು ತನಿಖೆಯಲ್ಲೇ ಇವೆ ಮತ್ತು ವರದಿಯೂ ಆಗುವುದಿಲ್ಲ ಎಂದು ಮುಂಬೈಯ ನ್ಯಾಯವಾದಿ, ಮಾನವ ಹಕ್ಕು ಹೋರಾಟಗಾರರಾದ ಮಿಹಿರ್ ದೇಸಾಯಿ ಹೇಳುತ್ತಾರೆ.

2008ರ ಮಾಲೆಗಾಂವ್ ಸ್ಫೋಟವು ಕೇಸರಿ ಭಯೋತ್ಪಾದಕ ಸಂಘಟನೆಗಳ ಪಾತ್ರವನ್ನು ಹೆಚ್ಚು ಪರಿಶೀಲಿಸುವಂತೆ ಮಾಡಿತು. ಆ ವರ್ಷದ ಸೆಪ್ಟಂಬರ್‌ನಲ್ಲಿ ನಡೆದ ಆ ಸ್ಫೋಟದಲ್ಲಿ 8 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದರು. ಸ್ಥಳದಲ್ಲಿ ದೊರೆತ ಮೋಟಾರ್ ಬೈಕ್‌ನಿಂದಾಗಿ ಸಾಧ್ವಿ ಪ್ರಜ್ಞಾ ಠಾಕೂರ್, ಸ್ವಘೋಷಿತ ಗುರು ದಯಾನಂದ ಪಾಂಡೆ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಹಾಗೂ ಇತರ 13 ಮಂದಿ ಈ ಸ್ಫೋಟದ ರೂವಾರಿಗಳಾಗಿದ್ದರೆಂದು ಈ ಕುರಿತು ತನಿಖೆ ಆರಂಭಿಸಿದ ಭಯೋತ್ಪಾದಕ ನಿಗ್ರಹ ದಳಕ್ಕೆ ಸ್ಪಷ್ಟವಾಗತೊಡಗಿತು.

ಭಯೋತ್ಪಾದಕ ನಿಗ್ರಹ ಪಡೆ ವಿಚಾರಣೆ ನಡೆಸಿದ ಸಂದರ್ಭ, ಇಂತಹ ಕೃತ್ಯದಲ್ಲಿ ಮೊದಲ ಬಾರಿಗೆ ಸಿಲುಕಿಕೊಂಡ ಸೇವಾನಿರತ ಸೇನಾಧಿಕಾರಿ ಶ್ರೀಕಾಂತ್ ಪುರೋಹಿತ್, ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟಕ್ಕೂ ತಾನೇ ಆರ್‌ಡಿಎಕ್ಸ್‌ನ್ನು ಸರಬರಾಜು ಮಾಡಿದ್ದಾಗಿ ಒಪ್ಪಿಕೊಂಡಿದ್ದನು. ಆದರೆ ಈ ಸ್ಫೋಟದ ಸಂಬಂಧ ಹೈದರಾಬಾದ್ ಪೊಲೀಸರು ‘ಹುಜಿ’ ಸಂಘಟನೆ ಮೇಲೆ ಶಂಕೆ ವ್ಯಕ್ತಪಡಿಸಿ, ಅದರ ಹಿಂದೆ ಬಿದ್ದಿದ್ದರಿಂದ ಇದನ್ನು ಬಹಿರಂಗಗೊಳಿಸದಂತೆ ಎಟಿಎಸ್‌ಗೆ ತಾಕೀತು ಮಾಡಲಾಗಿತ್ತು ಎನ್ನಲಾಗುತ್ತಿದೆ. ಇದೇ ತಂತ್ರವನ್ನು ಬಳಸಿ ಅಜ್ಮೀರ್ ಸ್ಫೋಟವನ್ನೂ ಮಾಡಲಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮಾಲೆಗಾಂವ್ ಸ್ಫೋಟ ಪ್ರಕರಣದ ಸಂಬಂಧ ಸಿದ್ಧಪಡಿಸಲಾಗಿದ್ದ 4528 ಪುಟಗಳ ದೋಷಾರೋಪ ಪಟ್ಟಿಯಲ್ಲಿ ‘ಅಭಿನವ ಭಾರತ’ ಸಂಘಟನೆ ಮತ್ತು ಅದರ ಸಹ ಸಂಘಟನೆಗಳ ಕುರಿತು ಪೂರ್ಣ ವಿವರವನ್ನು ನೀಡಲಾಗಿದೆ. ಪ್ರತ್ಯೇಕ ಹಿಂದೂ ರಾಷ್ಟ್ರ ನಿರ್ಮಾಣದ ಉದ್ದೇಶದಿಂದ ಇನ್ನಷ್ಟು ಸರಣಿ ಸ್ಫೋಟ ನಡೆಸುವ ಕುರಿತು ಪುರೋಹಿತ್, ಸಾದ್ವಿ ಮತ್ತು ಇತರರು ಪರಸ್ಪರ ಚರ್ಚಿಸಿಕೊಂಡಿದ್ದ ಕುರಿತು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ವೀರ ಸಾವರ್ಕರ್ ಸಂಸ್ಥಾಪಿಸಿದ್ದ ಅಭಿನವ್ ಭಾರತ ಕಾಲಕ್ರಮೇಣ ಅವಸಾನದತ್ತ ಸಾಗಿತ್ತು. ಆದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶಕ್ಕಾಗಿ ಹಿಮಾನಿ ಸಾವರ್ಕರ್ ಈ ಸಂಘಟನೆಯನ್ನು ಪುನರ್ ಸಂಘಟಿಸಿದ್ದರು. ತಮ್ಮ ಕನಸಿನ ನೂತನ ಹಿಂದೂ ರಾಷ್ಟ್ರಕ್ಕೆ ಚಿನ್ನದ ಲೇಪಿತ ಅಂಚುಗಳುಲ್ಲ ಸಂಪೂರ್ಣ ಕೇಸರಿ ಬಣ್ಣದ ಧ್ವಜ ಮತ್ತು ಪುರಾತನ ಚಿನ್ನದ ದೀಪದ ಚಿಹ್ನೆಯನ್ನು ಬಾವುಟದಲ್ಲಿ ಅಳವಡಿಸಲು ಅಭಿನವ್ ಭಾರತ್ ಯೋಜಿಸಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

2006, ಸೆಪ್ಟಂಬರ್ 8ರ ಶುಕ್ರವಾರ ಮಧ್ಯಾಹ್ನ ಮಲೆಗಾಂವ್‌ನ ಮಸೀದಿ ಮತ್ತು ಶ್ಮಶಾನದ ಸಮೀಪ ಮೂರು ಬಾಂಬ್‌ಗಳು ಸ್ಫೋಟಿಸಿ 37 ಜನರು ಸತ್ತು, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ತನಿಖೆ ನಡೆಸಲಾರಂಭಿಸಿದ ಪೊಲೀಸರು ಎಂದಿನಂತೆ ಇದು ಮುಸ್ಲಿಂ ಸಂಘಟನೆಗಳ ಕೈವಾಡವೆಂದು ವಿವರಿಸುತ್ತಾ, ನಿಷೇಧಿತ ಸಿಮಿಯ ಕಾರ್ಯಕರ್ತರೆಂದು ಆಪಾದಿಸಲಾದ ಕೆಲವು ಮುಸ್ಲಿಮರನ್ನು ಎಳೆದೊಯ್ದು ವಿಚಾರಣೆ ನಡೆಸಿ ತಪ್ಪಿತಸ್ಥರೆಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು.

ಘಟನೆ ನಡೆದ ದಿನ ಮಾಲೆಗಾಂವ್‌ನಿಂದ 700 ಕಿ.ಮೀ. ದೂರದ ಹಳ್ಳಿಯೊಂದರಲ್ಲಿ ಆ ಸಂದರ್ಭ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಹಮ್ಮದ್ ಝಾಹಿದ್‌ನನ್ನು ಪ್ರಮುಖ ಅರೋಪಿ ಎಂದು ಗುರುತಿಸಲಾಗಿತ್ತು. ಸ್ಫೋಟ ನಡೆಯುವ ಒಂದು ತಿಂಗಳ ಹಿಂದೆಯೇ ಪೊಲೀಸ್ ಬಂಧನಕ್ಕೊಳಪಟ್ಟಿದ್ದ್ದ ಶಬ್ಬಿರ್ ಮಸೀಲುಲ್ಲಾ ಈ ಪ್ರಕರಣದ ಪಿತೂರದಾರಿನೆಂದು ದೋಷಾರೋಪ ಪಟ್ಟಿಯಲ್ಲಿ ಗುರುತಿಸಲಾಗಿತ್ತು. ದೋಷಾರೋಪ ಪಟ್ಟಿಯಲ್ಲಿ ಹಲವಾರು ತಪ್ಪುಗಳು ಕಂಡು ಬರುತ್ತಿದ್ದವು.

ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಯ ಮೇರೆಗೆ ರಚಿಸಲಾದ ಶಂಕಿತ ಉಗ್ರರ ನಕ್ಷೆ ರಚನೆಯ ವೇಳೆ, ಪೊಲೀಸರು ಸಂಪೂರ್ಣ ಗಡ್ಡ ಬೋಳಿಸಿದ ವ್ಯಕ್ತಿಯ ನಕ್ಷೆಯನ್ನು ರಚಿಸಿದ್ದರು. ಆದರೆ ಪೊಲೀಸರು ಬಂಧಿಸಿದ್ದ ಎಲ್ಲ ಶಂಕಿತ ಆರೋಪಿಗಳೂ ವರ್ಷಗಳಿಂದ ಗಡ್ಡವೇ ಬೋಳಿಸದ ಗಡ್ಡದಾರಿಗಳಾಗಿದ್ದರು. ಆರೆಸ್ಸೆಸ್ ಪ್ರಚಾರಕ ಸುನಿಲ್ ಜೋಶಿಯ ಮೂಲಕ ಅಜ್ಮೀರ್ ಸ್ಫೋಟದ ಆರೋಪಿ ದೇವೇಂದ್ರ ಗುಪ್ತಾ ಅಭಿನವ್ ಭಾರತ್‌ನ ಸಂಪರ್ಕ ಹೊಂದಿದ್ದನೆಂದು ರಾಜಸ್ಥಾನ ಎಟಿಎಸ್ ಇದೀಗ ನಂಬಿದೆ.

2007ರಲ್ಲಿ ಶಂಕಿತ ಸಿಮಿ ಕಾರ್ಯಕರ್ತರು ಸುನಿಲ್ ಜೋಶಿಯನ್ನು ಹತ್ಯೆಗೈದರೆನ್ನಲಾದ ಬಳಿಕ, ಸಾಧ್ವಿ ಪ್ರಜ್ಞಾ ಸಿಟ್ಟಿಗೆದ್ದು 2008ರ ಮಲೆಗಾಂವ್ ಸ್ಫೋಟಕ್ಕೆ ಆದೇಶಿಸಿದಳೆಂದು ಮಹಾರಾಷ್ಟ್ರ ಎಟಿಎಸ್ ಹೇಳುತ್ತದೆ. 68 ಮಂದಿ ಪಾಕಿಸ್ತಾನಿಯರು ಸಾವನ್ನಪ್ಪಿರುವ ಸಂಜೌತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದಲ್ಲೂ ಸುನಿಲ್ ಜೋಶಿಯ ಭಾಗಿತ್ವವಿದೆ ಎಂದು ಹೇಳಲಾಗಿದೆ.

ಹೆಸರು ಸೂಚಿಸದ ಸಾಕ್ಷಿಯೊಂದು ವಿವರಿಸಿರುವಂತೆ, ಪುರೋಹಿತ್‌ರ ದೂರವಾಣಿ ಮಾತುಕತೆ ಸಾಕ್ಷ ದಿಂದ ಈ ವಿಷಯವನ್ನು ದೃಢ ಪಡಿಸಿಕೊಳ್ಳಲಾಗಿದೆ ಎಂದು ಹೇಳಲಾ ಗಿದೆ. ಪ್ರಮುಖ ಆರೋಪಿಗಳಲ್ಲಿ ಓರ್ವನಾದ ರಾಮನಾರಾಯಣ ಕಲ್ಸಂಗ್ರನನ್ನು ದೇವೇಂದ್ರ ಗುಪ್ತನಿಗೆ ಸಾಧ್ವಿ ಪರಿಚಯಿಸಿದ್ದಳು, ಆತ ಬಾಂಬ್ ಅಳವಡಿಸುವುದರಲ್ಲಿ ನಿಪುಣನಾಗಿ ದ್ದನು ಎಂದು ಮಹಾರಾಷ್ಟ್ರ ಮತ್ತು ರಾಜಸ್ಥಾನದ ತನಿಖಾ ಅಧಿಕಾರಿಗಳು ಹೇಳುತ್ತಾರೆ.

ಎಲ್ಲ ಬಂಧಿತ ಆರೋಪಿಗಳು ಆತನ ಹೆಸರನ್ನು ಸೂಚಿಸಿದ್ದರೂ, ಆತನನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಅಜ್ಮೀರ್, ಮಕ್ಕಾ ಮಸೀದಿ, ಮಾಲೆಗಾಂವ್ ಮತ್ತು ಸಂಜೌತಾ ಎಕ್ಸ್‌ಪ್ರೆಸ್ ಸ್ಫೋಟ ಮತ್ತು ಇತರ ಸ್ಫೋಟಗಳು ಕೇಸರಿ ಭಯೋತ್ಪಾದನೆ ಕಾರ್ಯಾಚರಣೆಯ ಭಾಗಗಳಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಸಿಬಿಐಯು ಈ ಎಲ್ಲ ಬಿಡಿ ಭಾಗಗಳನ್ನು ಒಂದುಗೂಡಿಸಿ, ತನಿಖೆ ಪೂರ್ಣಗೊಳಿಸಿದರೆ ಕೇಸರಿ ಭಯೋತ್ಪಾದನೆಯ ಪೂರ್ಣ ಚಿತ್ರಣ ಲಭಿಸಬಹುದು.

ಕೃಪೆ: ಔಟ್ ಲುಕ್

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: