ಬೌದ್ಧರ ನಾಡಿನಲ್ಲಿ ಇದೇನಿದು ತಲ್ಲಣ


ಪಿ.ಜಿ.ವಿಜು
ಚೀನಾ ತನ್ನ ಆಕ್ರಮಣಕಾರಿ ನಡೆಯೊಂದಿಗೆ ಅಲ್ಲಿ ಎಲ್ಲವನ್ನೂ ಆಕ್ರಮಿಸಿ ಕುಳಿತಿದೆ. ಹೀಗಾಗಿ ಅಲ್ಲಿ ಸೇನಾಧಿಕಾರಿಗಳದೇ ಕಾರುಬಾರು. ಮಾನವಹಕ್ಕುಗಳ ಉಲ್ಲಂಘನೆ, ಪ್ರಜಾಸತ್ತೆಯ ಮೌಲ್ಯಗಳ ತುಚ್ಛೀಕರಣ ಸಾಮಾನ್ಯವಾಗಿದೆ.

ಪ್ರಾಚೀನ ಕಾಲದಿಂದಲೂ ಭಾರತದೊಂದಿಗೆ ಸಾಂಸ್ಕೃತಿಕವಾಗಿ ನಿಕಟವಾಗಿರುವ ಮ್ಯಾನ್ಮಾರ್‌ನಲ್ಲಿ ಶೇಕಡ 90ರಷ್ಟು ಮಂದಿ ಬೌದ್ಧ ಧರ್ಮಾವಲಂಬಿಗಳು. ಬರ್ಮೀಯರಲ್ಲಿ ಬೌದ್ಧಚಿಂತನೆಯೊಂದಿಗೆ ಸಹಜವಾಗಿಯೇ ಸರಳತೆ, ಸಜ್ಜನಶೀಲತೆ ಮೈಗೂಡಿದೆ. ಇಂತಹ ನೆಲದಲ್ಲಿ ಚೀನಾ ತನ್ನ ಆಕ್ರಮಣಕಾರಿ ನಡೆಯೊಂದಿಗೆ ಅಲ್ಲಿ ಎಲ್ಲವನ್ನೂ ಆಕ್ರಮಿಸಿ ಕುಳಿತಿದೆ. ಹೀಗಾಗಿ ಅಲ್ಲಿ ಸೇನಾಧಿಕಾರಿಗಳದೇ ಕಾರುಬಾರು. ಮಾನವಹಕ್ಕುಗಳ ಉಲ್ಲಂಘನೆ, ಪ್ರಜಾಸತ್ತೆಯ ಮೌಲ್ಯಗಳ ತುಚ್ಛೀಕರಣ ಸಾಮಾನ್ಯವಾಗಿದೆ. ಮ್ಯಾನ್ಮಾರ್‌ನಲ್ಲಿ ಮಾನವಹಕ್ಕುಗಳ ಉಲ್ಲಂಘನೆ ವಿರುದ್ಧ ನಿನ್ನೆ (ಶುಕ್ರವಾರ)ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಖಂಡಿಸುವ ನಿರ್ಣಯ ಕೈಗೊಂಡಾಗ ಭಾರತ ಅದರಿಂದ ದೂರ ಉಳಿಯಿತು. ಭಾರತವು ಮ್ಯಾನ್ಮಾರ್ ಪರ ನಿಲ್ಲಲು
ಹಿಂಜರಿಯುತ್ತಿರುವುದಾದರೂ ಏಕೆ ?

ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಮ್ಯಾನ್ಮಾರ್ ಬಗ್ಗೆ ವಿಶೇಷ ಪ್ರೀತಿ ಇತ್ತು ಎಂಬುದು ಅವರ ಬರಹಗಳಲ್ಲಿ ಕಂಡು ಬರುವ ಆ ನೆಲದ ಪ್ರಸ್ತಾಪಗಳಿಂದ ಗೊತ್ತಾಗುತ್ತದೆ. ಅರ್ಧ ಶತಮಾನದ ಹಿಂದೆ ತಾವು ಬರೆದ ‘ಏಕತೆಯ ಭಂಗ’ ಎಂಬ ಲೇಖನದಲ್ಲಿ ‘ಹಿಂದೂಸ್ತಾನ ಮತ್ತು ಪಾಕಿಸ್ತಾನಗಳ ನಡುವಣ ಏಕತೆಗಿಂತ ಹಿಂದೂಸ್ತಾನ ಮತ್ತು ಮ್ಯಾನ್ಮಾರ್ ನಡುವಣ ಏಕತೆಯೇ ಹೆಚ್ಚು.ಮ್ಯಾನ್ಮಾರನ್ನು ಭಾರತದಿಂದ ಪ್ರತ್ಯೇಕಿಸಿದಾಗ ವಿರೋಧಿಸದವರು ಸಾಮಾಜಿಕವಾಗಿ,ಅಧ್ಯಾತ್ಮಿಕ ನೆಲೆಯಲ್ಲಿ ಭಾರತಕ್ಕಿಂತ ಭಿನ್ನವೆನಿಸುವ ಪಾಕಿಸ್ತಾನ ಬೇರೆಯಾಗಿದ್ದಕ್ಕೆ ಕಿಡಿ ಕಾರುವುದೇಕೆ?’ ಎಂದು ಅವರು ಪ್ರಶ್ನಿಸಿದ್ದರು.ಅವರ ಪ್ರಕಾರ ಸಾಂಸ್ಕೃತಿಕ ನೆಲೆಯಲ್ಲಿ ಮ್ಯಾನ್ಮಾರ್ ಭಾರತದ ಜತೆಗೇ ಹೆಚ್ಚು ಆವಿನಾಭಾವತೆ ಹೊಂದಿದೆ. ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಜತೆಗೆ ಬೆರೆತುಕೊಂಡೇ ಬಂದ ಮ್ಯಾನ್ಮಾರ್ ಜನಜೀವನದಲ್ಲಿ ನಮ್ಮ ಬೌದ್ಧ ಧರ್ಮ ಹಾಸುಹೊಕ್ಕಾಗಿದೆ. ಅಲ್ಲಿನ ಒಟ್ಟು ಜನಸಂಖ್ಯೆಯ ಶೇಕಡ 90ರಷ್ಟು ಮಂದಿ ಬೌದ್ಧರೇ. ಹೀಗಾಗಿ ಅಲ್ಲಿನ ರಾಜಕಾರಣದ ಏಳುಬೀಳುಗಳನ್ನು ಬೌದ್ಧಧರ್ಮವನ್ನು ಹೊರತುಪಡಿಸಿ ನೋಡುವಂತೆಯೇ ಇಲ್ಲ.

ರಾಜಧಾನಿ ಯಾಂಗೂನ್‌ನಲ್ಲಿರುವ ಬೃಹದಾಕಾರದ ಬಂಗಾರಲೇಪಿತ ಶೈಡಗೋನ್ ಪಗೋಡವಂತೂ ಸಹಸ್ರಮಾನಗಳಿಂದ ಬಹಳಷ್ಟು ರಾಜಕೀಯ ಏಳುಬೀಳುಗಳನ್ನು ಕಂಡಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ಯಾಂಗೂನ್ ಪ್ರದೇಶದ ಇಬ್ಬರು ವರ್ತಕರು ಈಗಿನ ಬಿಹಾರ ಪ್ರದೇಶಕ್ಕೆ ಬಂದಿದ್ದಾಗ, ಬೌದ್ಧ ವಿಚಾರಧಾರೆಯಿಂದ ಪ್ರಭಾವಿತರಾಗಿ ಬುದ್ಧನ ಎಂಟು ಕೂದಲುಗಳನ್ನು ಪಡೆದುಕೊಂಡು ವಾಪಸಾದರು. ಅವರೇ ಕಟ್ಟಿದ ಶೈಡಗೋನ್ ಪಗೋಡದ ಸುತ್ತಲೂ ಯಾಂಗೂನ್ ಬೆಳೆಯುತ್ತಾ ಹೋಯಿತು. ಇದಾಗಿ ಶತಮಾನದ ನಂತರ ಅಶೋಕ ಚಕ್ರವರ್ತಿಯು ಬೌದ್ಧಬಿಕ್ಷುಗಳ ತಂಡವನ್ನು ಮ್ಯಾನ್ಮಾರ್‌ಗೆ ಕಳುಹಿಸುತ್ತಾರೆ. ಅವರ ಪ್ರಭಾವದಿಂದ ಆಗಿನ ಬಾಗನ್ ಅರಸರು ಬೌದ್ಧರಾಗುತ್ತಾರೆ. ಮ್ಯಾನ್ಮಾರ್‌ದಾದ್ಯಂತ ಬೌದ್ಧಬಿಕ್ಷುಗಳು ಸಂಚರಿಸುತ್ತಾರೆ. ಆ ನಾಡಿನಾದ್ಯಂತ ಜನ ಬೌದ್ಧ ವಿಚಾರಧಾರೆಯನ್ನು ಅಪ್ಪಿಕೊಳ್ಳುತ್ತಾರೆ. ಕಳೆದ ಎರಡು ಸಾವಿರ ವರ್ಷಗಳ ಅಲ್ಲಿನ ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಇತ್ಯಾದಿ ಎಲ್ಲದರಲ್ಲೂ ಬೌದ್ಧ ಪ್ರಭಾವವೇ ಎದ್ದು ಕಾಣುತ್ತದೆ.

ಆಂಗ್ ಸಾನ್ ಸೂಕಿಯಿಂದಾಗಿ ಪ್ರಸಕ್ತ ಮ್ಯಾನ್ಮಾರ್ ರಾಜಕಾರಣ ಹೊಸ ಆಯಾಮ ಪಡೆದುಕೊಂಡಿದೆ.ಸೂಕಿ ಮೇಲೆ ಬೌದ್ಧ ಚಿಂತನೆಯ ಪ್ರಭಾವವೇ ಹೆಚ್ಚು. ಪ್ರಜಾಸತ್ತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅವರು ತಮ್ಮ ಮೊದಲ ಭಾಷಣವನ್ನು ಶೈಡಗೋನ್ ಪಗೋಡದ ಆವರಣದಲ್ಲಿಯೇ ಮಾಡಿದ್ದರು.ಇವರ ತಂದೆ ಆಂಗ್‌ಸಾನ್ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕಾಲಘಟ್ಟದಲ್ಲಿಯೇ ಮ್ಯಾನ್ಮಾರ್‌ನಿಂದಲೂ ಬ್ರಿಟಿಷರು ಕಾಲ್ಕಿತ್ತಿದ್ದರು. ಇನ್ನೇನು ಆಂಗ್‌ಸಾನ್ ನೇತೃತ್ವದ ಸರ್ಕಾರ ಮ್ಯಾನ್ಮಾರ್ ಇತಿಹಾಸಕ್ಕೆ ಹೊಸ ಭಾಷ್ಯ ಬರೆಯಲಿದೆ ಎನ್ನುತ್ತಿದ್ದಾಗಲೇ ಅವರ ಕಗ್ಗೊಲೆ ನಡೆಯಿತು.ಆಂಗ್‌ಸಾನ್ ಅಪ್ಪಟ ಬೌದ್ಧರಾಗಿದ್ದು, ಶೈಡಗೋನ್ ಪಗೋಡದ ಆವರಣದಲ್ಲಿನ ಅವರ ಭಾಷಣಗಳು ಆ ನಾಡಿನ ಜನರಲ್ಲಿ ಹೊಸ ಚಿಂತನೆಯ ಹೊಳೆ ಹರಿಸಿದ್ದವು. ಬ್ರಿಟಿಷರ ವಿರುದ್ಧ ಮ್ಯಾನ್ಮಾರ್‌ದಾದ್ಯಂತ 1936ರಲ್ಲಿ ನಡೆದಿದ್ದ ವಿದ್ಯಾರ್ಥಿ ಚಳವಳಿಗೆ ಶೈಡಗೋನ್ ಪಗೋಡದಲ್ಲಿಯೇ ಚಾಲನೆ ಸಿಕ್ಕಿತ್ತು. ಅಂದು ಆಂಗ್‌ಸಾನ್ ಬ್ರಿಟಿಷರ ವಿರುದ್ಧ ಸಂಘಟಿಸಿದ್ದ ವಿದ್ಯಾರ್ಥಿಗಳ ಹೋರಾಟ ಬ್ರಿಟಿಷರ ತೊಳ್ಳೆ ನಡುಗಿಸಿತ್ತು.

ಭಾರತದಲ್ಲಿ ತನ್ನ ಮೇಲೆ ನಡೆದ ನಿರಂತರ ದಾಳಿಯಿಂದಾಗಿ ಒಂದು ಸಾವಿರ ವರ್ಷದ ಹಿಂದೆಯೇ ಬೌದ್ಧಧರ್ಮ ಮಸುಕಾಗತೊಡಗಿತ್ತು. ಆದರೆ ಅದೇ ಸಂದರ್ಭದಲ್ಲಿ ಮ್ಯಾನ್ಮಾರ್‌ನಲ್ಲಿ ಬೌದ್ಧಧರ್ಮ ತನ್ನ ಆಳವಾದ ಬೇರುಗಳನ್ನಿಳಿಸಿ ಮುಗಿಲೆತ್ತರ ಬೆಳೆಯತೊಡಗಿತ್ತು. ಆ 250 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಪಾಗಾನ್ ಅರಸೊತ್ತಿಗೆ ಕಾಲದಲ್ಲಿ ಸಾವಿರಾರು ಪಗೋಡಗಳು, ಸ್ತೂಪಗಳು ನಿರ್ಮಾಣಗೊಂಡವು. ಮಂಗೋಲರ ದಾಳಿಯಿಂದ ಬೌದ್ಧರು ತೊಂದರೆಗೆ ಸಿಲುಕಿದರಾದರೂ, ನಂತರ ಕ್ರಮವಾಗಿ ಶಾನ್, ಟೊಂಗೊ, ಕೊನ್‌ಬಾಗ್ ಅರಸೊತ್ತಿಗೆಗಳು ಐದು ಶತಮಾನಗಳ ಕಾಲ ಆಳಿದವು. ಆಗ ಬೌದ್ಧರು ಚೇತರಿಕೆ ಕಂಡರು. ಸಹಸ್ರಮಾನದ ಎಲ್ಲಾ ಅರಸರು ಮತ್ತು ಜನರಿಗೆ ಭಾರತದ ಮುಖ್ಯವಾಹಿನಿಯೊಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ಸಂಬಂಧವಿದ್ದೇ ಇತ್ತು.

ಇನ್ನೂರು ವರ್ಷಗಳ ಹಿಂದೆ ಬ್ರಿಟಿಷರು ಮೊದಲಿಗೆ ಮ್ಯಾನ್ಮಾರ್‌ನಲ್ಲಿ ಕಾಲಿಟ್ಟು, ನಿರಂತರ ಕದನ ನಡೆಸಿ 1885ರಲ್ಲಿ ಇಡೀ ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಮೇಲಂತೂ ಕೋಲ್ಕತ್ತ ಮತ್ತು ದೆಹಲಿಯೊಂದಿಗೆ ಬರ್ಮಿಯರ ಸಂಬಂಧ ಹೆಚ್ಚಿತು. 1948ರಲ್ಲಿ ಬ್ರಿಟಿಷರು ಮ್ಯಾನ್ಮಾರ್ ತ್ಯಜಿಸಿದರು.

ಹೀಗೆ ಮ್ಯಾನ್ಮಾರ್ ಮತ್ತು ಭಾರತದ ಸ್ವತಂತ್ರಪೂರ್ವದ ಕಥೆಗಳಲ್ಲಿ ವ್ಯತ್ಯಾಸವೇನೂ ಇಲ್ಲ. ಆದರೆ ಸ್ವಾತಂತ್ರ್ಯಾನಂತರ ಮ್ಯಾನ್ಮಾರ್ ಆಡಳಿತಾತ್ಮಕವಾಗಿ ದಿಕ್ಕು ತಪ್ಪಿದರೆ, ಭಾರತ ಪ್ರಜಾಸತ್ತೆಯ ಹಾದಿಯಲ್ಲಿ ಸರಾಗವಾಗಿ ಸಾಗಿಬಂದಿದೆ.ಬ್ರಿಟಿಷರು ಮ್ಯಾನ್ಮಾರ್‌ನಲ್ಲಿ ಆಡಳಿತಕ್ಕೊಂದು ಸುವ್ಯವಸ್ಥೆಯ ಸ್ವರೂಪ ತಂದರಲ್ಲದೆ, ಕೃಷಿ ಪ್ರಧಾನವಾಗಿದ್ದ ಆರ್ಥಿಕತೆಯನ್ನು, ಕೃಷಿ ಉತ್ಪನ್ನಗಳ ರಫ್ತು ಪ್ರಧಾನ ಕ್ಷೇತ್ರವನ್ನಾಗಿ ರೂಪಾಂತರಿಸಿದ್ದರು. ಹೀಗಾಗಿಯೇ ಏಳು ದಶಕಗಳ ಹಿಂದೆಯೇ ಮ್ಯಾನ್ಮಾರ್ ಜಗತ್ತಿನಲ್ಲೇ ಅತ್ಯಧಿಕ ಅಕ್ಕಿ ರಫ್ತು ಮಾಡುತ್ತಿದ್ದ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಆ ಕಾಲದಲ್ಲಿ ಆಂಗ್ಲರು ಬೌದ್ಧರ ಮೇಲೆ ಸವಾರಿ ಮಾಡುವ ಧೈರ್ಯ ತೋರಲಿಲ್ಲವಾದರೂ, ಕ್ರೈಸ್ತ ಮಿಷನರಿಗಳ ಚಟುವಟಿಕೆ ಹೆಚ್ಚಿತು.ಆಗ ಅಸಮಾಧಾನಗೊಂಡ ಬೌದ್ಧರು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದರು. ಅದೇ ಸ್ವಾತಂತ್ರ್ಯ ಸಂಗ್ರಾಮದ ಭುಗಿಲಾಯಿತು. ಆಗ ಹುಟ್ಟು ಪಡೆದ ‘ಯಂಗ್‌ಮೆನ್ಸ್ ಬುದ್ದಿಸ್ಟ್ ಅಸೋಸಿಯೇಷನ್’ ಕಳೆದ ಶತಮಾನದ ಮೊದಲಾರ್ಧದಲ್ಲಿ ಸ್ವಾತಂತ್ರ ಹೋರಾಟದ ಮುಂಚೂಣಿಯಲ್ಲಿದ್ದರೆ, ಉತ್ತರಾರ್ಧದಲ್ಲಿ ಪ್ರಜಾಸತ್ತೆಯ ಉಳಿವಿಗಾಗಿ ಸತತ ಹೋರಾಟದಲ್ಲಿ ನಿರತವಾಗಿದೆ.

ಸ್ವಾತಂತ್ರ್ಯ ಸಿಗುತ್ತಿದ್ದಂತೆಯೇ ಆಗಿನ ಅಗ್ರನಾಯಕ, ಹೋರಾಟಗಾರ ಆಂಗ್‌ಸಾನ್ ಕೊಲೆಯಾದುದರಿಂದ ಯುನು ಮೊದಲ ಪ್ರಧಾನ ಮಂತ್ರಿಯಾದರು. ಸುಮಾರು ಒಂದು ದಶಕದ ಕಾಲ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಇವರು ಯಾಂಗೂನ್‌ನಲ್ಲಿ ವಿಶ್ವ ಬೌದ್ಧ ವಿಶ್ವವಿದ್ಯಾಲಯ ಆರಂಭಿಸಿದ್ದಲ್ಲದೆ, ಬೌದ್ಧರ ವ್ಯವಹಾರಗಳಿಗೇ ಪ್ರತ್ಯೇಕ ಸಚಿವಾಲಯ ರಚಿಸಿದರು. ಮೂಲತಃ ಬೌದ್ಧಶಾಸ್ತ್ರ ಪ್ರಾಧ್ಯಾಪಕರೇ ಆಗಿದ್ದ ಯುನು ಮೇಲೆ ಬರ್ಮೀಯರು ಅಪಾರ ನಂಬಿಕೆ ಇರಿಸಿಕೊಂಡಿದ್ದರಾದರೂ, ಯುನು ಆಡಳಿತದಲ್ಲಿ ನಿಯಂತ್ರಣವಿರಿಸಿಕೊಳ್ಳುವಲ್ಲಿ ವೈಫಲ್ಯ ಕಂಡರು.

ಶತಮಾನಗಳ ಹಿಂದೆಯೇ ಚೀನಾ ಅರಸರು ಹಲವು ಸಲ ಮ್ಯಾನ್ಮಾರ್ ಮೇಲೆ ವಿಫಲ ದಾಳಿ ನಡೆಸಿದ್ದರು. ಸ್ವಾತಂತ್ರ್ಯಾನಂತರ ಚೀನಾದ ಒಂದು ಕಣ್ಣು ಮ್ಯಾನ್ಮಾರ್ ಮೇಲೆ ಇದ್ದೇ ಇತ್ತು. ಯುನು ಐವತ್ತರ ದಶಕದ ಕೊನೆಯಲ್ಲಿ ಬೌದ್ಧಧರ್ಮವನ್ನು ರಾಷ್ಟ್ರೀಯ ಧರ್ಮ ಎಂದು ಘೋಷಿಸಿದೊಡನೆ, ಉತ್ತರ ಮ್ಯಾನ್ಮಾರ್‌ನ ಬೆಟ್ಟಸಾಲುಗಳಲ್ಲಿರುವ ಕಚಿನ್ ಬುಡಕಟ್ಟು ಜನರನ್ನು ಚೀನಾ ಎತ್ತಿಕಟ್ಟಿತು. ಚೀನಾ, ಮ್ಯಾನ್ಮಾರ್ ಮತ್ತು ಭಾರತದ ಗಡಿಭಾಗಗಳಲ್ಲಿರುವ ಬಹಳಷ್ಟು ಬುಡಕಟ್ಟು ಮಂದಿ ಶತಮಾನದ ಹಿಂದೆ ಕ್ರೈಸ್ತರಾಗಿದ್ದಾರೆ. ಬೌದ್ಧಧರ್ಮಕ್ಕೆ ಪ್ರಾಧಾನ್ಯತೆ ಕೊಟ್ಟದ್ದನ್ನು ವಿರೋಧಿಸಿದ ಕಚಿನ್‌ಗಳ ಕೈಗೆ ಚೀನಾದ ಶಸ್ತ್ರಾಸ್ತ್ರಗಳು ಬಂದವು.ಇವರ ವಿರುದ್ಧದ ಸಂಘರ್ಷಗಳಲ್ಲಿ ಜರ್ಜರಿತಗೊಂಡ ಯುನು ಸರ್ಕಾರ ಆಂತರಿಕ ಭದ್ರತೆಗಾಗಿ ಸೇನಾ ನೆರವು ಪಡೆಯಿತು.

ಇದರ ಲಾಭ ಪಡೆದ ಜನರಲ್ ನೆವಿನ್ 1962ರಲ್ಲಿ ಸೇನಾಕ್ರಾಂತಿ ನಡೆಸಿ ತಾವೇ ಅಧಿಕಾರದ ಗದ್ದುಗೆ ಏರಿದರು.ನೆವಿನ್ ಬಹುಸಂಖ್ಯಾತ ಬರಾಮ್ ಸಮುದಾಯಕ್ಕೆ ಸೇರಿದವರೆಂದು ಹೇಳಿಕೊಳ್ಳುತ್ತಿದ್ದರಾದರೂ, ಇವರ ಪೂರ್ವಜರು ಚೀನಾ ಮೂಲದವರೆಂದೇ (ಚೀನಿ ಬರ್ಮೀಯ) ಬಹಳಷ್ಟು ಮಂದಿ ನಂಬಿಕೊಂಡಿದ್ದಾರೆ. ಇವರು ಸಮಾಜವಾದಿ ಅರ್ಥವ್ಯವಸ್ಥೆಗೆ ಹೆಚ್ಚು ಒತ್ತು ನೀಡಿದರಾದರೂ, ಪ್ರಜಾಸತ್ತೆಯನ್ನು ಮೂಲೆಗುಂಪಾಗಿಸಿದರು.

ಇವತ್ತು ಮ್ಯಾನ್ಮಾರ್‌ನಲ್ಲಿ ‘ಚೀನಿ ಬರ್ಮೀಯ’ ಸಮುದಾಯ ಶೇ 3ರಷ್ಟಿದ್ದಾರೆನ್ನಲಾಗುತ್ತಿದೆ. ನೋಡಲು ಬರ್ಮೀಯರಂತೆ ಕಾಣುವ ಇವರು ಬರ್ಮೀ ಭಾಷೆಯನ್ನು ಕಲಿತು ನಿರರ್ಗಳವಾಗಿ ಮಾತನಾಡುತ್ತಾರೆ. 1990ರ ನಂತರವಂತೂ ಮ್ಯಾನ್ಮಾರ್‌ನ ಉತ್ತರದ ಚೀನಾ ಗಡಿ ಪ್ರದೇಶದಿಂದ ಸಹಸ್ರಾರು ಸಂಖ್ಯೆಯಲ್ಲಿ ಬಂದು ಮ್ಯಾನ್ಮಾರ್‌ನೊಳಗೆ ನೆಲೆಸಿಬಿಟ್ಟಿದ್ದಾರೆ.ಇವತ್ತು ಮ್ಯಾನ್ಮಾರ್‌ನ ಕೈಗಾರಿಕೆ, ಹಣಕಾಸು, ವಾಣಿಜ್ಯ ವಹಿವಾಟುಗಳೆಲ್ಲಾ ಈ ಸಮುದಾಯದವರ ಕೈಯಲ್ಲೇ ಇದೆ.ಈ ಸಮುದಾಯದಲ್ಲಿ ಬಹಳಷ್ಟು ಮಂದಿ ಉನ್ನತ ಶಿಕ್ಷಣ ಪಡೆದವರೇ ಆಗಿದ್ದು, ಇಂಗ್ಲಿಷ್ ಕರಗತ ಮಾಡಿಕೊಂಡು ಹೊರಜಗತ್ತಿನೊಂದಿಗೆ ವ್ಯವಹರಿಸಬಲ್ಲವರಾಗಿದ್ದಾರೆ.

ಇಂತಹ ಬೆಳವಣಿಗೆಗಳ ನಡುವೆ ಪ್ರಜಾಸತ್ತೆಗಾಗಿ ಎಂಬತ್ತರ ದಶಕದ ಆರಂಭದಲ್ಲಿ ಶುರುವಾದ ಜನಾಂದೋಲನ ದೇಶದಾದ್ಯಂತ ವ್ಯಾಪಕಗೊಂಡಿತು. ವಿದ್ಯಾರ್ಥಿ ಚಳವಳಿ ತಾರಕಕ್ಕೇರಿತು. ಆರ್ಥಿಕ ಸ್ಥಿತಿ ಹದಗೆಡತೊಡಗಿತು.ಆಗ ಸೇನೆ ಸಾವಿರಾರು ಪ್ರತಿಭಟನಾಕಾರರ ಹತ್ಯೆಗೈಯಿತು. ಆಗಲೇ ಸೂಕಿ ದೇಶದಾದ್ಯಂತ ಪ್ರವಾಸ ಮಾಡಿ ಭಾಷಣ ಮಾಡತೊಡಗಿದರು. ನೆವಿನ್ ಆಡಳಿತದಲ್ಲಿ ನಿಯಂತ್ರಣ ಕಳೆದುಕೊಳ್ಳತೊಡಗಿದರು. 1988ರ ಸೆಪ್ಟಂಬರ್‌ನಲ್ಲಿ ನೆವಿನ್ ಸರ್ಕಾರವನ್ನು ಕಿತ್ತೊಗೆದ ಸೇನಾಧಿಕಾರಿಗಳ ಗುಂಪೊಂದು ‘ರಾಜ್ಯ ಕಾನೂನು, ಸುವ್ಯವಸ್ಥೆ ಪುನರ್‌ಸ್ಥಾಪನೆ ಮಂಡಳಿ’ (ಎಸ್‌ಎಲ್‌ಒಆರ್‌ಸಿ) ಹೆಸರಲ್ಲಿ ಅಧಿಕಾರ ವಶ ಪಡಿಸಿಕೊಂಡಿತು.ಇವರ ದಬ್ಬಾಳಿಕೆಯಿಂದ ಮೂರು ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಸಾವನ್ನಪ್ಪಿದರು.

1990ರವರೆಗೆ ‘ಮಿಲಿಟರಿ ಕಾನೂನು’ ಜಾರಿಯಲ್ಲಿತ್ತು. 90ರಲ್ಲಿ ಸೇನಾಧಿಕಾರಿಗಳ ಗುಂಪು ಸಾರ್ವತ್ರಿಕ ಚುನಾವಣೆ ನಡೆಸಿತು.ಆಗ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ ನಿಚ್ಚಳ ಬಹುಮತ ಗಳಿಸಿತು. ಆದರೆ ಜನರ ತೀರ್ಪನ್ನು ತಿರಸ್ಕರಿಸಿದ ಸೇನಾಡಳಿತ ಸೂಕಿಯನ್ನು ಗೃಹಬಂಧನದಲ್ಲಿರಿಸಿತು. ಸೇನಾಡಳಿತಗಾರರು 1997ರಲ್ಲಿ ತಮ್ಮ ಗುಂಪಿನ ಹೆಸರನ್ನು ‘ರಾಜ್ಯ ಶಾಂತಿ ಮತ್ತು ಅಭಿವೃದ್ಧಿ ಮಂಡಳಿ’ (ಎಸ್‌ಪಿಡಿಸಿ) ಎಂದು ಬದಲಿಸಿಕೊಂಡರು. ಇದೀಗ ಸೇನಾಡಳಿತಗಾರರು ತಮ್ಮ ಮೂಗಿನ ನೇರಕ್ಕೇ ಮತ್ತೆ ಚುನಾವಣೆ ನಡೆಸಿದ್ದಾರೆ. ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ ಚುನಾವಣೆಯಿಂದ ದೂರ ಉಳಿದಿತ್ತು. ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ಇದೀಗ ಸೂಕಿ ಬಿಡುಗಡೆಯಾಗಿದೆ. ಇವರ ನೇತೃತ್ವದಲ್ಲಿ ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ ಹೋರಾಟ ಹೊಸ ಆಯಾಮ ಪಡೆದುಕೊಳ್ಳಲಿದೆ.

ಆದರೆ ಈಗಾಗಲೆ ಚೀನಾ ಸರ್ಕಾರ ಮ್ಯಾನ್ಮಾರ್‌ನಲ್ಲಿ ತನ್ನ ಸಂಪೂರ್ಣ ಹಿಡಿತ ಸಾಧಿಸಿದೆ. ಮ್ಯಾನ್ಮಾರ್‌ನ ನೌಕಾಪಡೆ, ಬಂದರುಗಳನ್ನು ಅಭಿವೃದ್ಧಿ ಪಡಿಸಿರುವ ಚೀನಾ ಅವುಗಳ ಮೇಲೆ ನಿಯಂತ್ರಣ ಪಡೆದಿದೆ. ಗೂಢಚರ್ಯೆ ಜಾಲಕ್ಕೆ ಸಂಬಂಧಿಸಿದ ಎಲ್ಲಾ ತಂತ್ರಜ್ಞಾನ, ಸಲಕರಣೆ ಚೀನಾದ್ದಾಗಿದೆ. ಅಲ್ಲಿನ ಸಿತ್ವೆ ನೌಕಾನೆಲೆಯನ್ನು ಕಟ್ಟಿರುವ ಚೀನಾ, ಈ ಮೂಲಕ ಬಂಗಾಳಕೊಲ್ಲಿಯ ಮೇಲೆ ತನ್ನ ಆಸ್ಥಿತ್ವವನ್ನು ಬಲಪಡಿಸಿಕೊಂಡಿದೆ.20ವರ್ಷಗಳ ಹಿಂದೆಯೇ ಮ್ಯಾನ್ಮಾರ್‌ನಲ್ಲಿ ಸೇನಾನೆಲೆ ಸ್ಥಾಪಿಸಿದ್ದ ಚೀನಾ ಇಂದು ಆ ದೇಶದ ಆರ್ಥಿಕತೆ, ಸೇನೆ ಮತ್ತು ಆಡಳಿತದ ಮೇಲೆ ಹಿಡಿತ ಸಾಧಿಸಿದೆ.

ಇಂತಹ ಸಂದಿಗ್ಧತೆಯಲ್ಲಿ ಬೌದ್ಧರು ಪ್ರಜಾಪ್ರಭುತ್ವದ ಪುನರ್‌ಸ್ಥಾಪನೆಗಾಗಿ ಹೋರಾಟವನ್ನು ಕೈಗೆತ್ತಿಕೊಂಡಿದ್ದಾರೆ.ಕೇವಲ ಮೂರು ವರ್ಷಗಳ ಹಿಂದೆ ಬೌದ್ಧರು ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟಾಗ ಬಂದೂಕಿನ ನೆರವಿನಿಂದ ಜನರನ್ನು ಚದುರಿಸಿದ್ದ ಸೇನೆ, ಪಗೋಡಗಳನ್ನು ಸುತ್ತುವರಿದಿತ್ತು. ಜನರೂ ಬೌದ್ಧಬಿಕ್ಷುಗಳೊಂದಿಗೆ ಕೈಜೋಡಿಸಿದ್ದರು.ಆಗ ಸಾವಿರಾರು ಬಿಕ್ಷುಗಳನ್ನು ಜೈಲಿಗೆ ತಳ್ಳಲಾಯಿತು. ನೂರಾರು ಜನ ಸತ್ತರು. ಅಂದು ವಿಶ್ವಸಂಸ್ಥೆಯಲ್ಲಿ ಇದರ ವಿರುದ್ಧ ಬಹಳಷ್ಟು ದೇಶಗಳು ಪ್ರತಿಭಟಿಸಿದ್ದವು.

ಇಂತಹದೊಂದು ಸಂಕ್ರಮಣ ಕಾಲಘಟ್ಟದಲ್ಲಿ ಸೂಕಿ ಪ್ರಜಾಪ್ರಭುತ್ವದ ಮರುಸ್ಥಾಪನೆಯ ಮಾತನಾಡುತ್ತಿದ್ದಾರೆ.ಸೇನಾಡಳಿತದ ಬೆನ್ನ ಹಿಂದಿರುವ ಬೃಹತ್ ‘ಶಕ್ತಿ’ಯ ಬಗ್ಗೆ ಅರಿವಿರುವುದರಿಂದಲೇ ಇದೀಗ ಸೂಕಿ ಅಹಿಂಸಾತ್ಮಕ ಹಾದಿಯ ಬಗ್ಗೆ ಮಾತನಾಡುತ್ತಿದ್ದಾರೆ.ಅವರ ಹಿಂದೆ ಸಹಸ್ರಾರು ಬೌದ್ಧರು ನಿಂತಿದ್ದಾರೆ.ಬೌದ್ಧಬಿಕ್ಷುಗಳು ತಮ್ಮ ಭಿಕ್ಷಾಪಾತ್ರೆಯನ್ನು ತಲೆಕೆಳಗಾಗಿ ಹಿಡಿದು ನಡೆಯುತ್ತಿದ್ದಾರೆ.ಇದೂ ಪ್ರತಿಭಟನೆಯ ಒಂದು ಪರಿ.ಬೌದ್ಧರಿಗೆ ಜಯ ಸಿಗಬಹುದೇ?______

Courtesy:

http://www.prajavani.net/Content/Nov202010/antarala20101119213742.asp

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: