ಬಸವಣ್ಣನವರನ್ನು ರಕ್ಷಿಸಿ


 

-ಬಿ.ಎಲ್.ವೇಣು,ಚಿತ್ರದುರ್ಗ
ಬರಗೂರರು ‘ವಚನ ಚಳವಳಿಯನ್ನು ಶಿವಕೇಂದ್ರಿತ ಚಳವಳಿ’ ಎಂದಿದ್ದಾರೆ. ಆಗ ಧಾರ್ಮಿಕತೆಯ ಪ್ರಭಾವವಿದ್ದ ಕಾಲ. ಬಸವಣ್ಣ, ಅಲ್ಲಮ, ಬುದ್ಧ, ಏಸುಕ್ರಿಸ್ತ ಇವರ ಚಿಂತನೆಗಳು ನಮಗೆ ತಿಳಿದಿವೆ. ಆದರೆ…

ಬಸವಣ್ಣನವರ ಕಾಲದಲ್ಲಿ ಎಲ್ಲವೂ ಆಗಿತ್ತೆ? ಎಂದು ಕೇಳುವ ಮೂಲಕ ನಮ್ಮೆಲ್ಲರನ್ನೂ ವಿಚಾರದ ಒರೆಗಲ್ಲಿಗೆ ಹಚ್ಚಿದ ಬರಗೂರು ರಾಮಚಂದ್ರಪ್ಪ ಅವರಿಗೆ ವಚನಕಾರರನ್ನು ಅಗೌರವಿಸುವ ವಿಚಾರ ಇದ್ದಂತಿಲ್ಲ.  ಬಸವಣ್ಣನವರ ಕಾಲದಲ್ಲೇ ಎಲ್ಲವೂ ಆಗಬೇಕಂತೇನಿಲ್ಲ. ಸರ್ವ ಸಮಾನತೆಯ ಬೀಜ ಬಿತ್ತಿದ ಅವರ ಆಶಯಗಳು ಕಡೆಗಣಿಸುವಂಥವೂ ಅಲ್ಲ. ಗಾಂಧೀಜಿ, ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್ ಅವರು ವಚನ ಚಳುವಳಿಯಿಂದ ಪ್ರೇರೇಪಿತರಾಗಿದ್ದರೆ ಅಷ್ಟರ ಮಟ್ಟಿಗಿನ ಗೆಲುವು ಶರಣರದ್ದಾಗುತ್ತದೆ.

ಗಾಂಧೀಜಿ, ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್ ಅವರ ಕಾಲದಲ್ಲಿ ಎಲ್ಲವೂ ಆಗಿತ್ತೇ? ಗಾಂಧಿ ಅಸ್ಪಶ್ಯತೆ ವಿರುದ್ಧ  ಹೋರಾಡಿದ ಮಾತ್ರಕ್ಕೆ ಅಸ್ಪಶ್ಯತೆ ನಾಶವಾಗಿದೆಯೆ? ಅಂಬೇಡ್ಕರ್ ದಲಿತರ ಶಿಕ್ಷಣಕ್ಕೆ ಸಂವಿಧಾನದಲ್ಲಿ ಹೆಚ್ಚಿನ ಒತ್ತು ನೀಡಿದರು. ಅಂದ ಮಾತ್ರಕ್ಕೆ ದಲಿತರಿಗೆಲ್ಲಾ ಶಿಕ್ಷಣ ದೊರೆತು ಆರ್ಥಿಕ, ಸಾಮಾಜಿಕ ಸಮಾನತೆ ದೊರಕಿದೆಯೇ? ಕಾರ್ಲ್‌ಮಾರ್ಕ್ಸ್ ಹೋರಾಟ ಎಷ್ಟರಮಟ್ಟಿಗೆ ಸುಧಾರಣೆ ತಂದಿದೆ? ಯಾರ ಕಾಲದಲ್ಲೇ ಆಗಲಿ ಎಲ್ಲವೂ ಆಗಿಬಿಡುವ ಸಾಧ್ಯತೆಗಳು ವಿರಳ. ಆದರೆ ಆ ದಿಸೆಯಲ್ಲಿ ಇಷ್ಟಾದರೂ ಪ್ರಯತ್ನಗಳೇ ಆಗಿರದಿದ್ದರೆ ಈ ವೇಳೆಗೆ ನಮ್ಮ ದೇಶ ಇನ್ನೆಂತಹ ಹೀನ ಅವಸ್ಥೆಯಲ್ಲಿ ಇರುತ್ತಿತ್ತೋ? ಕಲ್ಪಿಸಿಕೊಂಡರೇ ನಡುಕ ಹುಟ್ಟುತ್ತದೆ.

ಈ ಹೊತ್ತಿಗೂ ಸನಾತನಿಗಳ ಉಪಟಳ ಕಡಿಮೆಯಾಗಿಲ್ಲ. 12ನೇ ಶತಮಾನದಲ್ಲಿ ಶರಣರು ಜಾತೀಯತೆಯ ವಿರುದ್ಧ ಪ್ರತಿಭಟಿಸಿದರೆ,16ನೇ ಶತಮಾನದಲ್ಲಿ ಹರಿದಾಸರೂ ಜಾತಿ ಮತ, ಮೌಢ್ಯ ಮಡಿ, ಮೈಲಿಗೆಗಳ ಧೋರಣೆಗಳನ್ನು ತಮ್ಮ ಕೀರ್ತನೆಗಳಲ್ಲಿ ಟೀಕಿಸಿದ್ದಾರೆ. ಪಂಪ ಮಾನವ ಕುಲಂ ತಾನೊಂದೆ ವಲಂ’ ಎಂದಿದ್ದಾನೆ. ಕುವೆಂಪು  ‘ಮನುಜ ಮತ, ವಿಶ್ವಪಥ’ ಎಂದರು. ಮನುಷ್ಯರೆಲ್ಲಾ ಒಂದೇ. ಮೇಲು -ಕೀಳು ಎಂಬ ಭೇದ ಮಾಡಿದ್ದು,  ವಿದ್ಯಾದಾನ ಮಾಡದಿದ್ದುದು ಮಹಾಪಾಪ ಎಂಬ  ಪಾಪಪ್ರಜ್ಞೆಯ ಮಾತುಗಳು ಆಯಾ ಕಾಲಘಟ್ಟದಲ್ಲಿ   ಸನಾತನಿಗಳಿಂದಲೂ ಬಂದಿವೆ.

ಬರಗೂರರು ‘ವಚನ ಚಳವಳಿಯನ್ನು ಶಿವಕೇಂದ್ರಿತ ಚಳವಳಿ’ ಎಂದಿದ್ದಾರೆ. ಆಗ ಧಾರ್ಮಿಕತೆಯ ಪ್ರಭಾವವಿದ್ದ ಕಾಲ. ಬಸವಣ್ಣ, ಅಲ್ಲಮ, ಬುದ್ಧ, ಏಸುಕ್ರಿಸ್ತ ಇವರ ಚಿಂತನೆಗಳು ನಮಗೆ ತಿಳಿದಿವೆ. ಆದರೆ, ಅವರು ನಂಬಿದ ದೇವರುಗಳ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ. ವಿವೇಕಾನಂದ  ‘ದರಿದ್ರ ದೇವೋಭವ’ ಅಂದರೆ, ಕುವೆಂಪು  ‘ನೂರು ದೇವರನ್ನೆಲ್ಲ ನೂಕಾಚೆ ದೂರ’ ಅಂದರು. ಇವೆಲ್ಲ ದೈವ ವಿರೋಧಿ ಭಾವಗಳೇ ಅಥವಾ ದೇವರು, ಧರ್ಮದ ಬಗೆಗಿನ ವಿಮರ್ಶೆಗಳೇ?

ಬಸವಣ್ಣ ಎಲ್ಲರಿಗೂ ಇಷ್ಟಲಿಂಗ ಕಟ್ಟುವ ಮೂಲಕ ಸರ್ವ ಸಮಾನತೆಯನ್ನು ತರಲು ಹೆಣಗಿದರೇ ಹೊರತು ಹೊಸತೊಂದು ಜಾತಿರೂಪ ನೀಡಲಿಲ್ಲ. ವೈದಿಕ ಧರ್ಮವನ್ನು ವಿರೋಧಿಸಿ ಜನ್ಮತಳೆದ ವೀರಶೈವ ಧರ್ಮ ತದನಂತರ ವೈದಿಕ ಧರ್ಮದ ನಕಲಿನಂತಾಗಿದ್ದು ವಿಪರ್ಯಾಸ. ಶರಣರನ್ನು ಮಾದಾರ ಚೆನ್ನಯ್ಯ, ಡೋಹರಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಅಂತೆಲ್ಲಾ ಗುರುತಿಸಿದ್ದು ಜಾತಿಯ ನೆಲೆಯಲ್ಲಲ್ಲ. ಕಾಯಕದ ನೆಲೆಯಲ್ಲಿ. ಆ ಕುರಿತು ಗುಮಾನಿ ಪಡುವಂಥದ್ದೇನಿಲ್ಲ.

‘ಕಾಯಕವೇ ಕೈಲಾಸ’ವೆಂದು ಎಲ್ಲ ತೆರನಾದ ಕಾಯಕವನ್ನು ಗೌರವಿಸುತ್ತಾ ‘ಶ್ರಮ ಸಂಸ್ಕತಿ’ಗೆ ಬಸವಣ್ಣ ಹೆಚ್ಚು ಒತ್ತು ಕೊಟ್ಟರೇ ವಿನಾ ಶಿವ ಸಂಸ್ಕತಿಗಲ್ಲ. ಬಸವಣ್ಣನವರದು ಶಿವಕೇಂದ್ರಿತ ಚಳುವಳಿಯಲ್ಲ. ಅದು ವೈದಿಕಶಾಹಿ ವಿರೋಧಿ ಚಳುವಳಿ.

‘ದೇಹವೇ ದೇವಾಲಯ’,‘ಇವನಾರವ ಅನ್ನದೆ ಇವ ನಮ್ಮವ’ನೆಂದು ದಲಿತರನ್ನು ಅಪ್ಪಿ ತಮ್ಮ ಸರಿ ಸಮನಾಗಿ ಕೂರಿಸಿಕೊಂಡರು. ಅಲ್ಲಮನನ್ನು ಎತ್ತರದಲ್ಲೆೀ ಕೂರಿಸಿ ‘ಎನಗಿಂತ ಕಿರಿಯರಿಲ್ಲವಯ್ಯ’ ಅಂದ ಬಸವಣ್ಣನವರನ್ನು ಸಂಶಯಿಸುವ ಯಾರೇ ಆಗಲಿ ಕಿರಿಯರಾಗಿ ಬಿಡುತ್ತಾರಷ್ಟೆ. ಗಾಂಧಿ ಕೇವಲ ಅಸ್ಪಶ್ಯತೆ ನಾಶದ ಕಡೆಗೇ ಕಾಳಜಿ ತೋರಿದರೇ ಹೊರತು ಜಾತಿ ನಾಶದ ಬಗ್ಗೆ ತುಟಿ ಬಿಚ್ಚಲಿಲ್ಲ. ಅವರಿಗೂ ಒಂದು ಮಿತಿ ಇತ್ತು. ಅಂಬೇಡ್ಕರ್ ಹಿಂದೂ ಧರ್ಮದಲ್ಲಿನ  ಜಾತಿ ವ್ಯವಸ್ಥೆಯಿಂದ ಬೇಸತ್ತು ಅದರಿಂದ ಪಾರಾಗಲು ತಾವೇ ಬೌದ್ಧ ಧರ್ಮ ಸ್ವೀಕರಿಸಿದರು. ಹಾಗಂತ ದಲಿತರನ್ನು ನಡುನೀರಲ್ಲಿ ಕೈಬಿಟ್ಟರು ಎನ್ನಲಾದೀತೆ? ಎಲ್ಲಾ ಕೀಳು ಜಾತಿಯ ಜನರನ್ನು ಬಸವಣ್ಣ ಒಂದೆಡೆ ಕಲೆಹಾಕಿ ಅವರ ಭಾವನೆಗಳನ್ನು ಹಂಚಿಕೊಳ್ಳುವ, ಅಚ್ಚ ಕನ್ನಡದಲ್ಲಿ ವಚನಗಳ ಮೂಲಕ ಅಭಿವ್ಯಕ್ತಿಸುವ ಅವಕಾಶ ಕಲ್ಪಿಸಿ, ಮಹಿಳೆಯರನ್ನು ಅಡಿಗೆ ಮನೆಯಿಂದ ಅನುಭವ ಮಂಟಪಕ್ಕೆ ಬರುವ ವಾತಾವರಣ ನಿರ್ಮಿಸಿದರಲ್ಲದೆ, ಕಾಯಕ ಮಾಡಿ ಬದುಕುವವನೇ ಕುಲಜನೆಂದು ಗೌರವಿಸಿ ‘ಕಾಯಕ ಸಂಸ್ಕತಿ’ ಹುಟ್ಟು ಹಾಕಿದ್ದನ್ನು ಸಮಾಜವಾದವೆಂದು ಕರೆಯದೆ ಮತ್ತೇನೆಂದು ಕರೆಯೋಣ? ಕಾರ್ಲ್‌ಮಾರ್ಕ್ಸ್‌ರ ಚಿಂತನೆ ಕೂಡ ಇದಕ್ಕಿಂತ ಬೇರೆಯದೇನಲ್ಲ.

850 ವರ್ಷಗಳ ಹಿಂದೆಯೇ ಮೋಚಿಯ ಮಗನಿಗೆ ವೈದಿಕ ಮಂತ್ರಿಯ ಮಗಳೊಂದಿಗೆ ಮದುವೆ  ಮಾಡಿಸಿ ಜಾತಿ ನಾಶಕ್ಕೆ ಅಂತರ್ಜಾತೀಯ ಮದುವೆಗಳೇ ಬಲವಾದ ಅಸ್ತ್ರವೆಂದು ಸಾರಿದ ಬಸವಣ್ಣನವರ  ತತ್ವಾದರ್ಶಗಳನ್ನು ಅವರ ಅನುಯಾಯಿಗಳು ತಪ್ಪದೆ ಪಾಲಿಸುತ್ತ ಬಂದಿದ್ದರೆ ಈ ವೇಳೆಗೆ ಜಾತಿಗಳು ಇರುತ್ತಿರಲಿಲ್ಲ. ಮೀಸಲಾತಿಯ ಅಗತ್ಯವೂ ಇರುತ್ತಿದ್ದಿಲ್ಲ.

ಆಚಾರಕ್ಕೆ ಆದ್ಯತೆ ಕೊಡದೆ, ವಿಚಾರಕ್ಕೆ ಪ್ರಾಮುಖ್ಯ  ಕೊಟ್ಟ ಬಸವಣ್ಣ ಬಹುಮುಖ್ಯವಾಗಿ ತನ್ನದೇ ಧರ್ಮಿಯರ ವಿರುದ್ಧ ಮೊದಲು ದನಿ ಎತ್ತಿ ವಿರೋಧಿಸಿದರು. ವೈದಿಕಶಾಹಿಗಳ ಎದೆಯಲ್ಲಿ ನಡುಕ ಹುಟ್ಟಿಸಿದರು. ಸಮಾನತೆಯ ಧರ್ಮದ ಪರಿಕಲ್ಪನೆ ತಂದರು. ಅವರು ಈ ದೇಶ ಕಂಡ ಮೊಟ್ಟ ಮೊದಲ ಬಂಡಾಯಗಾರ, ಉಳಿದವರೆಲ್ಲ ಅವರ ನಕಲುಗಳಷ್ಟೇ.

ಬಸವಣ್ಣನವರೆಂದೂ ಈಗಿನ ಬಂಡಾಯಗಾರರಂತೆ ಅವಕಾಶವಾದಿಯಾಗಲಿಲ್ಲ. ಪೀಠ ತೊರೆದರೇ (ಅದೂ ಪ್ರಧಾನಿ ಪೀಠ) ವಿನಾ ಪೀಠಕ್ಕಾಗಿ ಹಪಹಪಿಸಲಿಲ್ಲ.

ಗಾಂಧೀಜಿ, ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್ ಅವರಿಗೆ ಇದ್ದ ಆದ್ಯತೆ, ಅವಕಾಶ, ಗುರಿಗಳೇ ಬೇರೆ. ಬಸವಣ್ಣನವರಿಗಿದ್ದ ಅವಕಾಶ, ಗುರಿ, ಆದ್ಯತೆಗಳೇ ಬೇರೆ. ಆದರೂ ಇವರೆಲ್ಲರೂ ಸಮಾನತೆ ತರಲು, ಜಾತಿಯ ಅನಿಷ್ಟ ವ್ಯವಸ್ಥೆಯ ಎದುರು ಹೋರಾಟ ನಡೆಸಿದ ಸಮಾಜವಾದಿಗಳೇ. ಬಸವಣ್ಣನವರ ವಚನಗಳನ್ನು ಪೂರ್ತಿಯಾಗಿ ಉಲ್ಲೇಖಿಸದೆ ಕೆಲವು ಸಾಲುಗಳನ್ನು ಮಾತ್ರ ಹೆಕ್ಕಿಕೊಂಡು ತಮ್ಮ ವಾದಕ್ಕೆ ತಕ್ಕಂತೆ ಬಳಸಿಕೊಂಡು  ಬಸವಣ್ಣನವರನ್ನು ಕಾಣಲು, ನಮಗೆ ತೋರಿಸಲು ಹಾಗೂ ನಮ್ಮನ್ನು ನಂಬಿಸಲು ಪರದಾಡುತ್ತಿರುವ ವಿದ್ವಾಂಸರಿಂದ ಬಸವಣ್ಣನವರನ್ನು ರಕ್ಷಿಸಬೇಕಿದೆ. ಆದರೆ ರಕ್ಷಿಸುವವರು ಯಾರು? 

_________

Courtesy: http://www.prajavani.net/Content/Jul42010/sunday20100703192828.asp

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: