ಭೈರಪ್ಪರಿಂದ ಹಿಂದೂ ಧರ್ಮದ ವೌಢ್ಯಗಳಿಗೆ ಬೆಂಬಲ: ಸಿಎನ್ನಾರ್

24/01/2011
ಸೋಮವಾರ – ಜನವರಿ -24-2011

ಬೆಂಗಳೂರು, ಜ. 23: ಎಸ್.ಎಲ್.ಭೈರಪ್ಪನವರು ಬಹುತೇಕ ತಮ್ಮ ಎಲ್ಲ ಕಾದಂಬರಿಗಳಲ್ಲಿಯೂ ಹಿಂದೂ ಧರ್ಮದ ಅರ್ಥವಿಲ್ಲದ ವೌಢ್ಯ ಆಚರಣೆ ಗಳನ್ನು ಬೆಂಬಲಿಸುತ್ತಾರೆ ಎಂದು ಪ್ರೊ.ಸಿ.ಎನ್. ರಾಮಚಂದ್ರನ್ ವಿಷಾದಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್‌ನ ಸಭಾಂಗಣದಲ್ಲಿಂದು ನವಕರ್ನಾಟಕ ಪ್ರಕಾಶನದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಡಾ.ಕೆ.ಎಲ್.ಗೋಪಾಲ ಕೃಷ್ಣಯ್ಯ ಅವರ ‘ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳೊಡನೆ ಧರ್ಮ-ಕರ್ಮ ಜಿಜ್ಞಾಸೆ’ ಕೃತಿಯನ್ನು ಅನಾವರಣ ಗೊಳಿಸಿ ಅವರು ಮಾತನಾಡಿದರು.
ಭೈರಪ್ಪನವರು ತಮ್ಮ ಗ್ರಹಭಂಗ ಕಾದಂಬರಿಯಲ್ಲಿ ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಮರುಮುದುವೆಯಾಗುವ ಕ್ಯಾತಾಯಿನಿಗೆ ಮೂರು ಸಲ ಅಕಾರಣ ವಾಗಿ ಗರ್ಭಪಾತ ಮಾಡಿಸಿ ಸಾಯಿಸಿದ್ದಾರೆ.

‘ದಾಟು’ವಿನಲ್ಲಿ ಜಾತೀಯತೆ ಯನ್ನು ವಿರೋಧಿಸುವ ದಲಿತ ಸಮುದಾಯದ ಮೋಹನ್‌ದಾಸ್‌ನು ಗರ್ಭಗುಡಿಯನ್ನು ಪ್ರವೇಶಿಸುವಾಗ ಮೂರ್ಚೆ ಹೋಗುತ್ತಾನೆ. ಹಿಂದೂ ಧರ್ಮದ ನಂಬಿಕೆಗಳ ವಿರುದ್ಧವಾಗಿ ಈಜುವ ಪ್ರತಿಯೊಂದು ಪಾತ್ರಗಳು ಅವಸಾನ ಹೊಂದುವಂತೆ ಚಿತ್ರಿಸಿದ್ದಾರೆ ಎಂದು ಅವರು ಆರೋಪಿಸಿದರು.

ಕವಲು ಕಾದಂಬರಿಯಲ್ಲಿ ಕೂಡ ಬೈರಪ್ಪನವರು ಸ್ತ್ರೀಪಾತ್ರಗಳೆಲ್ಲವೂ ಹಣದಾಸೆಗಾಗಿ ಯಾರಿಗಾದರೂ ತಮ್ಮ ಮೈ ಮಾರಿಕೊಳ್ಳುವಂತೆ ಹಾಗೂ ತಮ್ಮ ಗಂಡಂದಿರನ್ನು ವಿನಾಕಾರಣ ಕಾನೂನಿನ ಇಕ್ಕಟ್ಟಿಗೆ ಸಿಲುಕಿಸುವ ಖಳ ಪಾತ್ರಗಳಂತೆ ಚಿತ್ರಿಸಿದ್ದಾರೆ.

ಅವರು ನಮ್ಮ ದೇಶದ ಕಾನೂನುಗಳನ್ನು ಇನ್ನೊಮ್ಮೆ ಅಧ್ಯಯನ ಮಾಡುವುದು ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು.

ಯಾವುದೆ ಧರ್ಮ ಎಲ್ಲ ಕಾಲ ಘಟ್ಟದಲ್ಲಿ ಒಂದೆ ರೀತಿ ಇರಲು ಸಾಧ್ಯ ವಿಲ್ಲ. ಆಯಾ ಕಾಲದ ವಿವಿಧ ವರ್ಗಗಳು, ಸಾಮಾಜಿಕ ಸ್ಥಿತಿಗತಿಯನ್ನು ಆಧರಿಸಿ ಧರ್ಮ ಸ್ಥಿತ್ಯಂತರಗೊಳ್ಳುತ್ತಲೆ ಇರುತ್ತದೆ. ವೈದಿಕ ಧರ್ಮವು ಸಾಂಸ್ಕೃತಿಕ ಹಿಂದೂ ಧರ್ಮಕ್ಕಿಂತಲೂ ಪುರಾತನ ವಾದ ಇತಿಹಾಸವನ್ನು ಹೊಂದಿದೆ. ಹಿಂದೂ ಎಂಬ ಶಬ್ದದ ಕೂಡ ಪರಕೀಯ ರಿಂದ ಬಂದುದಾಗಿದೆ ಎಂದರು.
ಬುದ್ಧ ವೈದಿಕ ಪುರೋಹಿತಶಾಹಿ ಧರ್ಮವನ್ನು ವಿರೋಧಿಸಿದರೆ ಹೊರತು ಹಿಂದೂ ಧರ್ಮವನ್ನಲ್ಲ. ಕಾಲಕಾಲಕ್ಕೆ ಬದಲಾಗುವ ಧರ್ಮ ನಮ್ಮನ್ನು ರಕ್ಷಿಸು ತ್ತದೆ ಎಂಬುದನ್ನು ನಂಬುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು. ನೂರಾರು ವರ್ಷಗಳ ಹಿಂದೆ ಮುಸ್ಲಿಂ ಮಹಾರಾಜರು 2 ಸಾವಿರ ದೇವಾ ಲಯಗಳನ್ನು ನಾಶಗೊಳಿಸಿದರು.

ಅವರ ವಾರಸುದಾರರಾದ ಇಂದಿನ ಮುಸ್ಲಿಂರು ಈ ದುಷ್ಕೃತ್ಯಕ್ಕೆ ಬಲಿಯಾಗಬೇಕೆಂಬುದು ಭೈರಪ್ಪನವರ ಆವರಣ ಕಾದಂಬರಿಯ ವಾದವಾಗಿದೆ.

ಆದರೆ ಫರ್ಗುಶನ್ ಎಂಬ ವಿದೇಶಿ ವಿದ್ವಾಂಸ ಶೇ.99ರಷ್ಟು ಹಿಂದೂ ಧರ್ಮದ ಅನುಯಾಯಿಯಾಗಿದ್ದು ಕೊಂಡು ಹಿಂದೂ ಧರ್ಮದ ಕುರಿತು ಸಾಕಷ್ಟು ಗ್ರಂಥಗಳನ್ನು ರಚಿಸಿದ್ದಾರೆ. ಆದರೆ ಅವರು ಹಿಂದೂ ಧರ್ಮದ ವಾರಸುದಾರರಲ್ಲ ಎನ್ನುವುದನ್ನು ಭೈರಪ್ಪನವರು ಗಮನಿಸಬೇಕು ಎಂದು ಅವರು ಹೇಳಿದರು

Courtesy : Varthabharathi

http://vbnewsonline.com/Benguluru/41448/

Advertisements

ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ ಕೃತಿ ಬಿಡುಗಡೆ”ದಲಿತ ಬಣಗಳು ಒಗ್ಗಟ್ಟು ಪ್ರದರ್ಶಿಸಲಿ”: Rajashekhar Koti says , ಚಾಮರಾಜನಗರ

12/07/2010

ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ ಕೃತಿ ಬಿಡುಗಡೆ ಚಾಮರಾಜನಗರ: ಆಹಾರ ಇಲಾಖೆ ವ್ಯವಸ್ಥಾಪಕ ರಾಜಶೇಖರ ಮೂರ್ತಿ ಅವರು ನಾಗಸಿದ್ದಾರ್ಥ ಹೊಲೆಯಾರ್ ಎಂಬ ಕಾವ್ಯನಾಮದಲ್ಲಿ ರಚಿಸಿರುವ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್………………………………

2010/07/12

http://www.kannadaprabha.com


‘ದಲಿತ ಚಳವಳಿ ಮರುಹುಟ್ಟು ಪಡೆಯಲಿ’

11/07/2010
ಪ್ರಜಾವಾಣಿ ವಾರ್ತೆ
ಭಾನುವಾರ , ಜುಲೈ 11, 2010
ಚಾಮರಾಜನಗರ: ‘ರಾಜ್ಯದಲ್ಲಿ ಛಿದ್ರವಾಗಿರುವ ದಲಿತ ಚಳವಳಿ ಅಂಬೇಡ್ಕರ್ ಮೂಲ ವಿಚಾರಧಾರೆಗಳ ತಳಹದಿ ಮೇಲೆ ಮರುಹುಟ್ಟು ಪಡೆಯಬೇಕಿದೆ’ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪಿ. ದೇವರಾಜು ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಜಯಂತಿ ಅಂಗವಾಗಿ ದಲಿತ ಸಂಘರ್ಷ ಸಮಿತಿಯ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ಘಟಕದ ಆಶ್ರಯದಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ “ದಲಿತ ಸಂಘಟನೆಗಳ ಒಗ್ಗೂಡುವಿಕೆ’ ಕುರಿತು ಅವರು ಮಾತನಾಡಿದರು.70ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿಯ ಹೋರಾಟ ಪ್ರಬಲವಾಗಿತ್ತು. ದಲಿತರನ್ನು ಜಾಗೃತಗೊಳಿಸಿತ್ತು. 80ರ ದಶಕದ ನಂತರ ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ದಲಿತರ ಹೋರಾಟ ನಡೆಯಲಿಲ್ಲ. ಹಾಗಾಗಿ, ಸಂಘಟನೆ ಹೋಳಾಯಿತು ಎಂದು ಹೇಳಿದರು.

ಅಂಬೇಡ್ಕರ್ ಹೋರಾಟಕ್ಕೆ ಬುದ್ಧ, ಜ್ಯೋತಿ ಬಾಪುಲೆ, ಕಬೀರ್, ಪೆರಿಯಾರ್ ರಾಮಸ್ವಾಮಿ ಪ್ರೇರಣೆಯಾಗಿದ್ದರು. ಈ ಸಮಾಜ ಸುಧಾರಕರ ಬಗ್ಗೆ ದಲಿತ ಸಂಘಟನೆಗಳು ಅರಿತುಕೊಳ್ಳಲಿಲ್ಲ. ಅದರ ಪರಿಣಾಮ ಚಳವಳಿ ಸೋತಿದೆ. ಇವರ ಬಗ್ಗೆ ಮೊದಲು ದಲಿತ ಹೋರಾಟಗಾರರು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷುಲ್ಲಕ ವಿಚಾರಕ್ಕೆ ದಲಿತ ಮುಖಂಡರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ವಿಚಾರವಾದಿಗಳಾಗಿ ಮತ್ತು ಕಾರ್ಯಕರ್ತರಾಗಿ ಮಾತ್ರ ದಲಿತ ನಾಯಕರು ಹೋರಾಟ ಮಾಡಿದರು. ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲೆಯಲ್ಲಿ ಚಳವಳಿ ನಡೆಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ಶ್ರೇಷ್ಠ ಆರ್ಥಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕ ಚಿಂತಕರಾಗಿದ್ದರು. ಅವರ ರಾಜಕೀಯ ವ್ಯಾಖ್ಯಾನಗಳು ಯಾವುದೇ ರಾಜ್ಯಶಾಸ್ತ್ರದ ಪುಸ್ತಕದಲ್ಲಿಲ್ಲ. ಉದ್ದೇಶ ಪೂರ್ವಕವಾಗಿ ಅವರ ರಾಜಕೀಯ ಚಿಂತನೆಗಳನ್ನು ಮರೆ ಮಾಚಲಾಗಿದೆ ಎಂದು ಆರೋಪಿಸಿದರು.

ಮೀಸಲು ಕ್ಷೇತ್ರದಲ್ಲಿ ದಲಿತ ಅಭ್ಯರ್ಥಿಗಳ ವಿರುದ್ಧ ಪ್ರಭಾವಿ ಪಕ್ಷಗಳ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವಂತಿಲ್ಲ ಎಂದು ಪೂನಾ ಒಪ್ಪಂದದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆದರೆ, ಆ ಒಡಂಬಡಿಕೆಯನ್ನು ತಕ್ಷಣವೇ ಮುರಿದು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಯಿತು. ಈ ಕುರಿತು ಚರ್ಚೆಯೇ ನಡೆದಿಲ್ಲ ಎಂದರು.

ವಿಧಾನ ಪರಿಷತ್, ರಾಜ್ಯಸಭೆ, ರಕ್ಷಣಾ ವಲಯ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಮೀಸಲಾತಿ ಏಕೆ ನಿಗದಿ ಮಾಡಿಲ್ಲ. ಖಾಸಗೀಕರಣ, ಉದಾರೀಕರಣ, ಜಾಗತೀಕರಣ ಸಂದರ್ಭದಲ್ಲಿ ಮೀಸಲಾತಿ ನಾಶಗೊಳ್ಳುತ್ತಿದೆ. ಈ ಬಗ್ಗೆ ದಲಿತ ಮುಖಂಡರು ಗಂಭೀರ ಚಿಂತನೆ ನಡೆಸಬೇಕು ಎಂದರು.
“ದಲಿತರ ಮುಂದಿರುವ ಸವಾಲುಗಳು’ ಕುರಿತು ಡಾ.ಅಪ್ಪಗೆರೆ ಸೋಮಶೇಖರ್, “ದಲಿತರು ಹಾಗೂ ಅಂಬೇಡ್ಕರ್’ ಕುರಿತು ಡಾ.ನರೇಂದ್ರಕುಮಾರ್. ಮಾತನಾಡಿದರು. ವಿಚಾರವಾದಿ ಪ್ರೊಕೆ.ಎಸ್. ಭಗವಾನ್ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ್‌ಮೂರ್ತಿ ಮತ್ತು ತಂಡದವರು ಕ್ರಾಂತಿ ಗೀತೆ ಹಾಡಿದರು.

http://74.52.92.70/Content/Jul82010/district20100708193576.asp


ಸರ್ವರಿಗೂ ಶಿಕ್ಷಣ ನೀಡುವುದರ ಮೂಲಕ ಮಾತ್ರ ಅಂಬೇಡ್ಕರ್ ಕನಸಿನ ಭಾರತ ನಿರ್ಮಿಸಲು ಸಾಧ್ಯ – ಶಂಶೀರ್ ಬುಡೋಳಿ

11/07/2010


ಸಕಲೇಶಪುರ: ಮೇ ೭ : ಬಾಬಾ ಸಾಹೇಬ್ ಅಂಬೇಡ್ಕರ್ ಕಂಡ ಕನಸಿನ ಭಾರತವನ್ನು ನಿರ್ಮಿ ಸಲು ಸರ್ವರಿಗೂ ಕಡ್ಡಾಯ ಶಿಕ್ಷಣ ನೀಡುವುದರ ಮೂಲಕ ಮಾತ್ರ ಸಾಧ್ಯ ಎಂದು ವಾರ್ತಾ ಭಾರತಿ ಕನ್ನಡ ದಿನ ಪತ್ರಿಕೆಯ ಉಪ ಸಂಪಾದಕ ಶಂಶೀರ್ ಬುಡೋಳಿ ಹೇಳಿದರು.
ಸಕಲೇಶಪುರ ನಗರದ ಲಯನ್ಸ್ ಕ್ಲಬ್ ಹಾಲ್‌ನಲ್ಲಿ ಆಝಾದ್ ಯುವಕ ಸಂಘ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣೆ ಮತ್ತು ಶಾಲಾ ವಿದ್ಯಾರ್ಥಿ ಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತಿದ್ದ ಅವರು ಜಾತಿ ವ್ಯವಸ್ಥೆಯಲ್ಲಿ ಸಿಕ್ಕು ನಲುಗಿ ಹೋಗಿದ್ದ ಸ್ವಾತಂತ್ರ್ಯಾ ಪೂರ್ವ ಭಾರತದಲ್ಲಿ ಅಂಬೇಡ್ಕರ್ ಒಬ್ಬ ಸಮಾನತೆಯ ಹರಿಕಾರರಾಗಿ ಜನ್ಮ ತಾಳಿದರು. ಅವರು ಶೋಷಿತರ ಪರವಾಗಿ ನಡೆಸಿದ ಅವಿರತ ಹೋರಾಟದ ಫಲವಾಗಿ ಇಂದು ಭಾರತದಲ್ಲಿ ಶೋಷಿತರು ಮತ್ತು ದಮನಿತರು ಹಾಗೂ ಅಲ್ಪಸಂಖ್ಯಾತರು ಸಮಾನತೆಯ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಧೀಮಾನ್ ಎಸ್.ಎನ್. ಮಲ್ಲಪ್ಪ ಅಂಬೇಡ್ಕರ್ ಕೇವಲ ದಲಿತ ಸಮುದಾಯದ ನಾಯಕರಾಗಿರದೆ ರಾಷ್ಟ್ರದ ನಾಯಕರಾಗಿದ್ದಾರೆ. ಅವರು ನೀಡಿದ ಸಂವಿಧಾನದ ಕಾರಣ ಇಂದು ಭಾರತದಲ್ಲಿ ಪುರೋಹಿತಶಾಹಿ ವ್ಯವಸ್ಥೆ ನಿರ್ನಾಮವಾಗಲು ಸಾಧ್ಯವಾಯಿತು.
ಇಂತಹ ರಾಷ್ಟ್ರ ನಾಯಕನ ಜನ್ಮ ದಿನಾಚರಣೆಯನ್ನು ಕೇವಲ ಸರ್ಕಾರ ಮತ್ತು ದಲಿತರು ಆಚರಿ ಸದೆ ಎಲ್ಲಾ ಸಮುದಾಯದ ಜನರು ಆಚರಿಸುವಂತಾಗಬೆಕೆಂದು ಹೇಳಿದರು. ಈ ನಿಟ್ಟಿನಲ್ಲಿ ಆಝಾದ್ ಯುವಕ ಸಂಘ ಹಮ್ಮಿಕೊಂಡ ಅಂಬೇಡ್ಕರ್ ಜನ್ಮದಿನಾಚರಣೆ ಮತ್ತು ಉಚಿತ ಶಾಲಾ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಶ್ಲಾಘಿಸಿದ ಅವರು ಇಂತಹ ಸಮಾಜಸೇವಾ ಕಾರ್ಯಕ್ರಮಗಳು ಇನ್ನು ಮಂದೆಯೂ ನಡೆಯಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವೆಗಾಗಿ ಹಝರತ್ ಮಹಬೂಬ್ ಸುಭಾನಿ ನೂರಾನೀ ದರ್ಗಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಎಸ್.ಎಂ. ಮಹಮ್ಮದ್ (ಚೈಬಾವು) ರವರನ್ನು ಮತ್ತು ಮುಖ್ಯಮಂತ್ರಿಗಳ ಪದಕ ವಿಜೇತರಾದ ಸಕಲೇಶಪುರ ನಗರ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಶ್ರೀ ದೀಪಕ್‌ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹೆಚ್.ಪಿ. ಕಾಂತ್‌ರಾಜ್, ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಘಟಕದ ಅಧ್ಯಕ್ಷರಾದ ಡಿ.ಸಿ.ಸಣ್ಣಸ್ವಾಮಿ, ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಡಿ.ಹೆಚ್.ಆದಂ, ವಿಶ್ವ ಕನ್ನಡಿಗರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ರಾದ ಅಶ್ರಫ್ ಮಂಜ್ರಾಬಾದ್,ಬರಹಗಾರ ಅಕ್ಬರ್ ಜುನೈದ್, ಎ.ಪಿ.ಎಂ.ಸಿ.ಮಾಜಿ ನಿರ್ದೇಶಕ ಸಲೀಂ ಅಬ್ದುಲ್ಲಾ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ನಾಡ್ ಮಹಬೂಬ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ನಂದಿಕೃಪ ರಾಜು, ಸರಳ ಸಾಮೂಹಿಕ ವಿವಾಹ ಸಮಿತಿಯ ಅಧ್ಯಕ್ಷ ಕೊಲ್ಲಹಳ್ಳಿ ಇಬ್ರಾಹಿಂ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದರು. ಅಝಾದ್ ಯುವಕ ಸಂಘದ ಅಧ್ಯಕ್ಷ ಕಶ್ವ ಸುಲೈಮಾನ್ ಕಾರ್ಯ‍ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜನಾಬ್ ಸುಲೈಮಾನ್ ಕುಡುಗರಹಳ್ಳಿ ಸ್ವಾಗತಿಸಿದರೆ ಜನಾಬ್ ನಿಝಾರ್ ಮಂಜ್ರಾಬಾದ್ ಧನ್ಯವಾದ ಸಮರ್ಪಿಸಿದರು. ಜನಾಬ್ ತಸೀಫ್ ಕಾರ್ಯಕ್ರಮ ನಿರೂಪಿಸಿದರು.

ದಲಿತ ಮಹಿಳೆ ಹೊನ್ನಮ್ಮ ಹತ್ಯೆ ಪ್ರಕರಣ: ಗೋಪಾಲಪುರಕ್ಕೆ ಅಂಬೇಡ್ಕರ್ ನಿಗಮದ ಅಧ್ಯಕ್ಷರ ಭೇಟಿ

11/07/2010

ಹುಳಿಯಾರು, ಜು.೮: ಅನಿರೀಕ್ಷಿತ ವಾಗಿ ಸುರಿದ ಮಳೆಯ ನಡುವೆಯೂ ರಾಜ್ಯ ಅಂಬೇಡ್ಕರ್ ನಿಗಮ ಹಾಗೂ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ಹುಬ್ಬಳ್ಳಿ ಶಾಸಕ ರ ಭದ್ರಪ್ಪ, ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಅವರೊಂದಿಗೆ ದಲಿತ ನಾಯಕಿ ಹೊನ್ನಮ್ಮಳ ಹತ್ಯೆ ನಡೆದ ಗೋಪಾಲಪುರಕ್ಕೆ ಭೇಟಿ ನೀಡಿ ಘಟ ನೆಯ ವಿವರ ಪಡೆದು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ.

ನಂತರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮನುಷ್ಯ ಜಾತಿ ಯನ್ನು ದ್ವೇಷಿಸುವ, ದೌರ್ಜನ್ಯ ಹಾಗೂ ಅತ್ಯಾಚಾರ ಮಾಡುವ ಘಟನೆ ಗಳು ನಡೆಯಬಾರದು. ಅಂತಹ ದರಲ್ಲಿ ಹೊನ್ನಮ್ಮಳನ್ನು ಎಳೆದು, ಹಿಂಸಿಸಿ ಕೊಲೆ ಮಾಡಿರುವುದು ಮಾನವೀಯ ಮೌಲ್ಯಕ್ಕೆ ವಿರುದ್ಧವಾದ ಹಾಗೂ ಖಂಡನಾರ್ಹ ಎಂದರು.

ನಾಗರಿಕ ಸಮಾಜ ತಲೆತಗ್ಗಿಸು ವಂತಹ ಇಂತಹ ಘಟನೆಗಳನ್ನು ಕಾನೂನು ಅಡಿಯಲ್ಲಿ ಫಾಸ್ಟ್ ಟ್ರಾಕ್ ಕೋರ್ಟ್ ನಲ್ಲಿ ಬೇಗ ಇತ್ಯರ್ಥ ವಾಗುವ ಪ್ರಕರಣವಾಗಿ ಕೊಂಡೊಯ್ಯ ಬೇಕು. ಹೀಗಾದಾಗ ಮಾತ್ರ ಸಾಕ್ಷಿ ಜೀವಂತವಾಗಿರುತ್ತದೆ ಹಾಗೂ ಸೂಕ್ತ ನ್ಯಾಯ ದೊರಕುತ್ತದೆ. ಈ ನಿಟ್ಟಿನಲ್ಲಿ ಸರಕಾರದ ಜೊತೆ ಜರೂರಾಗಿ ಪ್ರಕರಣ ಇತ್ಯರ್ಥವಾಗುವಂತೆ ಕ್ರಮ ಕೈಗೊಳ್ಳಲು ಮಾತನಾಡುವುದಾಗಿ ಅವರು ತಿಳಿಸಿದರು.

ಹೊನ್ನಮ್ಮನವರು ಈ ಹಿಂದೆ ಅಂಬೇಡ್ಕರ್ ನಿಗಮದಿಂದ ೨೫ ಸಾವಿರ ಸಬ್ಸಿಡಿ, ೨೫ ಸಾವಿರ ಲೋನ್ ಮೇಲೆ ೨ ಎಕರೆ ಜಮೀನು ಖರೀದಿ ಮಾಡಿದ್ದು, ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚಿಸಿ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಕೃಷ್ಣಮೂರ್ತಿ ಭರವಸೆ ನೀಡಿದರಲ್ಲದೆ, ಜಮೀನಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿ ಕುಟುಂಬದವರಿಗೆ ನೆರವಾಗುವ ಸಲುವಾಗಿ ಗಂಗಾ ಕಲ್ಯಾಣ ಯೋಜನೆ ಅಥವಾ ಅಂಬೇ ಡ್ಕರ್ ನಿಗಮದಿಂದ ಹಣ ಕಾಸಿನ ನೆರವು ಒದಗಿಸುವ ಭರವಸೆ ನೀಡಿದರು.

ಈಗಾಗಲೇ ಹೊನ್ನಮ್ಮಳ ಕುಟುಂಬಕ್ಕೆ ೩ ತಿಂಗಳ ಅಗತ್ಯ ಪಡಿತರವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗಿದೆ. ಅಲ್ಲದೆ ಸೋದರ ಕುಮಾರಯ್ಯ ಅವರಿಗೆ ಹೈನುಗಾರಿಕೆಗೆ ನೆರವು ನೀಡಿ ಜೀವನ ನಿರ್ವಹಣೆಗೆ ಹಾಗೂ ಪುತ್ರ ಮಂಜುನಾಥ್ ಅವರು ಬಿಬಿ‌ಎಂ ಫಲಿತಾಂಶ ಎದುರು ನೋಡುತ್ತಿದ್ದು, ಫಲಿತಾಂಶ ಬಂದ ನಂತರ ಸರಕಾರಿ ಉದ್ಯೋಗ ಕೊಡಿಸುವ ನಿಟಿನಲ್ಲಿ ತಾವು ಧ್ವನಿಗೂಡಿಸುವುದಾಗಿ ತಿಳಿಸಿದರು.

ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ರಾಜ್ಯ ಎಸ್‌ಸಿ ಮೋರ್ಚಾದ ಉಪಾಧ್ಯಕ್ಷ ನಾಗರಾಜ್ ಮಲ್ಲಡಿ, ಪ್ರಧಾನ ಕಾರ್ಯದರ್ಶಿ ಗಂಗರಾಜು, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ‌ಓ ಡಾ.ವೇದಮೂರ್ತಿ, ಸುರೇಶ್ ಹಳೆಮನೆ, ದೇವರಾಜು, ರವಿ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.


ಸಂಸ್ಕೃತದಲ್ಲೂ ಬರುತ್ತಿದೆ ಅಂಬೇಡ್ಕರ್ ಜೀವನ ಚರಿತ್ರೆ

11/07/2010

ಪುಣೆ, ಶನಿವಾರ, 10 ಜುಲೈ 2010( 11:49 IST )

PR

ಭಾರತ ಸಂವಿಧಾನದ ನಿರ್ಮಾತೃ, ಶೋಷಿತರ ದನಿಯೆನಿಸಿದ್ದ ಡಾ. ಭೀಮಾರಾವ್ ರಾಮ್‌ಜೀ ಅಂಬೇಡ್ಕರ್ ಅವರ ಜೀವನ ಚರಿತ್ರೆ ಇದೀಗ ಮೊತ್ತ ಮೊದಲ ಬಾರಿ ದೇವಭಾಷೆ ಸಂಸ್ಕೃತದಲ್ಲೂ ಬರುತ್ತಿದೆ.

84ರ ಹರೆಯದ ವಿಕಲಚೇತನ ವೇದ ವಿದ್ವಾಂಸ ಪ್ರಭಾಕರ್ ಜೋಷಿ ಎಂಬವರೇ ಅಂಬೇಡ್ಕರ್ ಆತ್ಮಚರಿತ್ರೆಯನ್ನು ಸಂಸ್ಕೃತದಲ್ಲಿ ಬರೆದವರು. 2004ರಲ್ಲಿ ಈ ಕಾಯಕಕ್ಕೆ ಚಾಲನೆ ನೀಡಿದ್ದ ಜೋಷಿ ಈ ನಡುವೆ ದೃಷ್ಟಿಯನ್ನೂ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.

160 ಪುಟಗಳಲ್ಲಿ 21 ಅಧ್ಯಾಯಗಳನ್ನು ಹೊಂದಿರುವ ಈ ಆತ್ಮಕಥೆಗೆ ‘ಭೀಮಾಯಣ’ ಎಂದು ಹೆಸರಿಡಲಾಗಿದೆ. ಇಲ್ಲಿ 1,577 ಸಂಸ್ಕೃತ ಶ್ಲೋಕಗಳೂ ಇವೆ.

ಕಣ್ಣುಗುಡ್ಡೆಯಲ್ಲಿ ಒತ್ತಡ ಹೆಚ್ಚಾಗಿ ಕ್ರಮೇಣ ದೃಷ್ಟಿ ಕಳೆದುಕೊಳ್ಳುವ ರೋಗ ‘ಗ್ಲಾಕೋಮ’ಕ್ಕೆ ಒಳಗಾಗಿರುವ ಜೋಷಿ ಇಲ್ಲಿನ ಶಾಲೆ ಮತ್ತು ಕಾಲೇಜುಗಳಲ್ಲಿ ಸಂಸ್ಕೃತ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದವರು. ಅಂಬೇಡ್ಕರ್ ಬಗ್ಗೆ ಅಪಾರ ಅಭಿಮಾನವಿರುವ ಇವರು, ಸಂವಿಧಾನ ಶಿಲ್ಪಿಯ ಶೋಷಿತರೆಡೆಗಿನ ದನಿಗೆ ಹೆಚ್ಚು ಪ್ರಭಾವಿತಗೊಂಡವರು.

ತಂದೆ ರಾಮ್‌ಜೀಯವರಿಗೆ ತನ್ನ ಮಗ ಅಂಬೇಡ್ಕರ್ ಸಂಸ್ಕೃತ ಕಲಿಯಬೇಕೆಂಬ ಅಪ್ಪಟ ಆಸೆಯಿತ್ತು ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಉಳಿದಂತೆ ಅವರ ಜೀವನದ ಪ್ರಮುಖ ಮೈಲುಗಲ್ಲುಗಳನ್ನು ನಮೂದಿಸಿದ್ದೇನೆ. ನಾನು ಕಂಡಿರುವ-ಕೇಳಿರುವ-ಓದಿರುವ ವಿಚಾರಗಳನ್ನು ಪರಾಮರ್ಶೆ ನಡೆಸಿದ್ದೇನೆ. ಅವರ ಹೋರಾಟದ ಮಜಲುಗಳನ್ನು ದಾಖಲಿಸಿದ್ದೇನೆ ಎಂದು ಜೋಷಿ ವಿವರಣೆ ನೀಡಿದ್ದಾರೆ.

ಮುಂಬೈಯಲ್ಲಿನ ಶಾಲೆಯೊಂದರಲ್ಲಿ ಅಂಬೇಡ್ಕರ್ ದಲಿತರಾಗಿದ್ದರೆಂಬ ಏಕೈಕ ಕಾರಣಕ್ಕೆ ಸಂಸ್ಕೃತ ಕಲಿಸಲು ಅಧ್ಯಾಪಕರು ನಿರಾಕರಿಸಿದ್ದರು. ಆಗಿನ ಕಾಲದಲ್ಲಿ ಸಂಸ್ಕೃತವನ್ನು ಕೆಳ ಜಾತಿಗಳವರು ಕಲಿಯುವಂತಿರಲಿಲ್ಲ. ಅದು ಮೈಲಿಗೆ ಎಂದು ಪರಿಗಣಿಸಲಾಗುತ್ತಿತ್ತು. ಇವೆಲ್ಲವೂ ಈ ಆತ್ಮಚರಿತ್ರೆಯಲ್ಲಿ ಪ್ರಮುಖ ಸ್ಥಾನ ಪಡೆದಿವೆ ಎಂದಿದ್ದಾರೆ.

ಈ ಆತ್ಮಕಥೆಯನ್ನು ಮಹಾರಾಷ್ಟ್ರ ರಾಜ್ಯಪಾಲ ಶಂಕರನಾರಾಯಣನ್ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.


ಮತಾಂತರದ ಬಗ್ಗೆ ಬೊಬ್ಬೆ ಹಾಕುವುದ ನಿಲ್ಲಿಸಿ

10/07/2010
writer K marulasiddappa
ತಮ್ಮನ್ನು ವಿಚಾರವಂತರೆಂದು ಘೋಷಿಸಿಕೊಂಡಿರುವ ಕೆಲವು ಸಾಹಿತಿ ಸಂಶೋಧಕರ, ಮತಾಂತರವನ್ನು ಕಾನೂನು ಪ್ರಕಾರ ನಿಷೇಧಿಸಬೇಕೆಂದು ಕರೆಕೊಟ್ಟಿದ್ದಾರೆ. ಮತಾಂತರದಿಂದ ಭಾರತೀಯ ಸಂಸ್ಕೃತಿ ಹಾನಿಯಾಗುತ್ತಿದೆ ಎಂಬುದಾಗಿ ನಂಬಿರುವ ಇವರಿಗೆ ಸಂಸ್ಕೃತಿಯ ವೈಶಿಷ್ಯವೇನೆಂದು ಗೊತ್ತಿಲ್ಲವೇ ?

ವಾಸ್ತವವಾಗಿ ಭಾರತೀಯ ಸಂಸ್ಕೃತಿಯ ಒಂದು ಭಾಗ ಹಿಂದೂ ಧರ್ಮವನ್ನು ಪರಿಗಣಿಸಬೇಕೇ ಹೊರತು, ಹಿಂದೂ ಧರ್ಮ ಮಾತ್ರವೇ ಭಾರತೀಯ ಸಂಸ್ಕೃತಿಯಲ್ಲ. ಭಾರತೀಯ ಎಂಬುದರಲ್ಲಿ ಬೌದ್ಧ, ಜೈನ, ವೀರಶೈವ, ಸಿಖ್, ಇಸ್ಲಾಂ, ಕ್ರೈಸ್ತ ಮುಂತಾದ ಹಲವಾರು ಧರ್ಮಗಳೂ ಸೇರಿದ್ದು, ಈ ಧರ್ಮಗಳೆಲ್ಲ ಬೆಳೆದಿರುವುದು ಮತಾಂತರ ಮೂಲಕವೇ ಎಂಬುದನ್ನು ಮರೆಯುವಂತಿಲ್ಲ.

ಅಂತೆಯೇ ಈ ದೇಶದಲ್ಲಿ ಸಾವಿರಾರು ಜಾತಿ, ಪಂಗಡಗಳೆಲ್ಲವನ್ನೂ ಹಿಂದೂ ಧರ್ಮದ ಚೌಕಟ್ಟಿನ ಸಮಾವೇಶಗೊಳಿಸಲು ಯಾವ ಆಧಾರಗಳೂ ಇಲ್ಲ. ಅದನ್ನು ಒಪ್ಪುವುದಾದರೆ ವರ್ಣಾಶ್ರಮ ಪದ್ಧತಿಗನುಸಾರವಾಗಿ ಶ್ರೇಣಿಕೃತ ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತಾ ಆಚರಣೆಯನ್ನೂ ಒಪ್ಪಬೇಕಾಗುತ್ತದೆ. ಕೆಳಜಾತಿಯ ಜನರು ಸಾವಿರಾರು ವರ್ಷಗಳಿಂದಲೂ ತಮಗಾಗುವ ಅವಮಾನ, ಅನ್ಯಾಯಗಳನ್ನು ಪ್ರತಿಭಟಿಸಿ ಮತಾಂತರಗೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಆತ್ಮಗೌರವ. ಸಮಾನತೆಯ ಆಧಾರದಲ್ಲಿ ಹಿಂದೂ ಧರ್ಮವನ್ನು ಪುನರ್ ರಚಿಸಬೇಕಾಗುತ್ತದೆ. ಈ ಅಂಶಗಳನ್ನು ಗೌಣವಾಗಿಸಿ, ಮತಾಂತರದ ಬಗೆಗೆ ಬೊಬ್ಬೆ ಹಾಕುವುದು ಯಥಾಸ್ಥಿತಿ ವಾದಿಗಳ ತಂತ್ರವಾಗಿದೆ.

ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದನ್ನು ವಿರೋಧಿಸಿದ್ದರೂ ಆಳದಲ್ಲಿ ಮತಾಂತರ ವಿರೋಧಿಗಳ ಗುರಿ ಬೌದ್ಧರು. ಇತ್ತೀಚೆಗೆ ಲಕ್ಷಾಂತರ ಮಂದಿ ದಲಿತರು ಕರ್ನಾಟಕದಲ್ಲಿ ಬೌದ್ಧ ದೀಕ್ಷೆ ಪಡೆಯುತ್ತಿರುವುದನ್ನು ಗಮನಿಸಿ ಮತಾಂತರವನ್ನೇ ನಿಷೇಧಿಸುವ ಮಾತನಾಡುತ್ತಿದ್ದಾರೆ. ಬೌದ್ಧ ಧರ್ಮವು ಹಿಂದೂ ಧರ್ಮದ ಶಾಖೆ ಎಂದು ಅಪ್ಪಣೆ ಕೊಡಿಸುವ ಪೇಜಾವರ ಮಠಾಧೀಶರು ಅದೇ ಉಸಿರಿನಲ್ಲಿ ದಲಿತರು ಬೌದ್ಧ ಧರ್ಮ ದೀಕ್ಷೆ ಪಡೆಯಬಾರದೆಂದೂ, ಬೇಕಾದರೆ ಆರ್ಯ ಸಮಾಜ ಸೇರಿಕೊಳ್ಳಬಹುದೆಂದು ಪರವಾನಿಗಿ ನೀಡುತ್ತಾರೆ. ಮಧ್ವ ಮತಕ್ಕೆ ಬನ್ನಿ ಎಂದು ಆಹ್ವಾನ ನೀಡುವ ಔದಾರ್ಯವಿಲ್ಲದ ಮತ್ತು ಅಸ್ಪೃಶ್ಯರೊಡನೆ ಸಹಪಂಕ್ತಿ ಭೋಜನಕ್ಕೆ ಒಪ್ಪದ ಪೇಜಾವರರ ಶಿಷ್ಯರೂ ಸಾಹಿತಿ, ಬುದ್ಧಿಜೀವಿಗಳ ಸುಳ್ಳು ಆರೋಪ ಹೊರಿಸುತ್ತಾರೆ.

ಬುದ್ಧಿ ಜೀವಿಗಳ ಬಾಯಲ್ಲಿ ಕಾಮಾಟಿಪುರದ ವಾಸನೆ ಬರುತ್ತಿದೆ ಮುಂತಾಗಿ ಕೀಳು ಮಟ್ಟದ ವ್ಯಕ್ತಿ ನಿಂದೆಗೆ ಹೊರಟಾಗ ಅವರೊಂದಿಗೆ ಸಂವಾದ ಅಸಾಧ್ಯವೆನಿಸುತ್ತದೆ. ನಾನು ಗೌರವಿಸುವ ಹಿರಿಯರೂ, ಗುರುಗಳೂ ಆದ ಡಾ ಚಿದಾನಂದಮೂರ್ತಿ ತಮ್ಮ ಇಳಿ ವಯಸ್ಸಿನಲ್ಲಿ ಯಾವ ಮಟ್ಟದ ಜನರೊಡನೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆಂಬುದನ್ನು ಗಮನಿಸಿದಾಗ ನನ್ನ ಮನಸ್ಸು ಮುದುಡಿ ಹೋಗುತ್ತದೆ.

ಕೆ ಮರುಳಸಿದ್ದಪ್ಪ, ಬೆಂಗಳೂರು

ಪೂರಕ ಓದಿಗೆ:
ಏಸು ಇರುವುದೆ ಖಾತ್ರಿ ಇಲ್ಲ, ಭೈರಪ್ಪ

at thatskannada.oneindia.mobi/response/2009/33908.html