ರಾಜಕಾರಣಿಗಳ ಪಾಲಿನ ‘ಕಾಮಧೇನು’-ಗೋವು

02/12/2010
ದಿನೇಶ್ ಅಮಿನ್‌ಮಟ್ಟು

ರಾಜಕಾರಣಿಗಳ ಪಾಲಿನ ‘ಕಾಮಧೇನು’-ಗೋವು

ಹಸುಗಳ ಬಗ್ಗೆ ಈ ಜಗತ್ತಿನಲ್ಲಿ ಯಾರಿಗಾದರೂ ಮಾತನಾಡುವ ಹಕ್ಕಿದ್ದರೆ ಅದು ರೈತರಿಗೆ ಮಾತ್ರ. ಆ ಪ್ರಾಣಿಯನ್ನು ಕುಟುಂಬದ ಸದಸ್ಯರಂತೆ ಸಾಕಿ ಸಲಹುತ್ತಿರುವರು,

ಗೋವು ರಾಜಕೀಯದ ಹಳೆಯ ‘ಕಾಮಧೇನು’. ಲಾಲ್‌ಕೃಷ್ಣ ಅಡ್ವಾಣಿಯವರಿಂದ ಹಿಡಿದು ನರೇಂದ್ರ ಮೋದಿವರೆಗೆ, ಇಂದಿರಾ ಗಾಂಧಿಯವರಿಂದ ಹಿಡಿದು ದಿಗ್ವಿಜಯ್ ಸಿಂಗ್‌ವರೆಗೆ ಎಲ್ಲರೂ ರಾಜಕೀಯ ಲಾಭದ ಹಾಲು ಕರೆಯಲು ಬಡಹಸುವಿನ ಕೆಚ್ಚಲಿಗೆ ಕೈ ಹಾಕಿದವರೇ ಆಗಿದ್ದಾರೆ. ಈ ಪಟ್ಟಿಯಲ್ಲಿ ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. 

‘ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ರಕ್ಷಣೆ ಕಾಯಿದೆ 1964’ಕ್ಕೆ ತಿದ್ದುಪಡಿ ಮಾಡುವ ಮಸೂದೆಯೊಂದನ್ನು ರಾಜ್ಯ ಸರ್ಕಾರ ತಯಾರಿಸಿದೆ. ಇದಕ್ಕೆ ಗೋವಿನ ಬಗೆಗಿನ ಭಕ್ತಿ ಮತ್ತು ಕಾಳಜಿಯಷ್ಟೇ ಕಾರಣ ಎಂದು ಸರ್ಕಾರದಲ್ಲಿರುವ ನಿಜವಾದ ಗೋಭಕ್ತರ್ಯಾರೂ ಗೋವಿನ ಮೇಲೆ ಆಣೆ ಮಾಡಿ ಹೇಳಲಾರರು.

ಹಸುಗಳ ಬಗ್ಗೆ ಈ ಜಗತ್ತಿನಲ್ಲಿ ಯಾರಿಗಾದರೂ ಮಾತನಾಡುವ ಹಕ್ಕಿದ್ದರೆ ಅದು ರೈತರಿಗೆ ಮಾತ್ರ. ಆ ಪ್ರಾಣಿಯನ್ನು ಕುಟುಂಬದ ಸದಸ್ಯರಂತೆ ಸಾಕಿ ಸಲಹುತ್ತಿರುವರು, (ಎಷ್ಟೋ ರೈತರ ಮನೆಯೊಳಗೆ ದನದ ಕೊಟ್ಟಿಗೆ ಇದೆ) ಮತ್ತು ಆ ಮೂಕ ಪ್ರಾಣಿಯೊಡನೆ ನಿತ್ಯ ‘ಮಾತನಾಡುತ್ತಾ’ ಅದರ ಕಷ್ಟ-ಸುಖ ವಿಚಾರಿಸುತ್ತಿರುವವರು ಕೇವಲ ರೈತರು. ವಿಚಿತ್ರವೆಂದರೆ ರೈತರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹಸುಗಳ ಪ್ರಾಣ ಉಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ಕೆಲಸಕ್ಕೆ ಹೊರಟಿರುವ ರಾಜಕಾರಣಿಗಳು, ಸ್ವಾಮೀಜಿಗಳು, ಹಿಂದೂ ಧರ್ಮದ ಉದ್ಧಾರದ ಗುತ್ತಿಗೆ ಪಡೆದುಕೊಂಡಿರುವ ಸಮಾಜ ಸುಧಾರಕರಲ್ಲಿ ಯಾರೂ ಹಸು ಸಾಕಿದವರಲ್ಲ, ಅದರ ಸೆಗಣಿ ಎತ್ತಿದವರಲ್ಲ, ಗಂಜಳ ಬಾಚಿದವರಲ್ಲ, ಹುಲ್ಲು ಹಾಕಿದವರಲ್ಲ. ಇವರಲ್ಲಿ ಹೆಚ್ಚಿನವರು ಪ್ಯಾಕೆಟ್ ಹಾಲು ಕುಡಿದು ಗೋವಿನ ಚಿತ್ರಕ್ಕೆ ಪೂಜೆ ಮಾಡುವವರು. ವೈಯಕ್ತಿಕ ಲಾಭ-ನಷ್ಟದ ಲೆಕ್ಕಾಚಾರಕ್ಕೆ ತೊಡಗಿದಾಗೆಲ್ಲ ಇವರಿಗೆ ಗೋವಿನ ಬಗ್ಗೆ ಭಕ್ತಿ ಕೆರಳುತ್ತದೆ, ಕಾಳಜಿ ಉಕ್ಕಿ ಹರಿಯುತ್ತದೆ.

 

ಗೋಹತ್ಯೆ ನಿಷೇಧದ ಪರವಾಗಿ ವಕಾಲತ್ತು ವಹಿಸುತ್ತಿರುವವರೆಲ್ಲರೂ ಕೊಡುತ್ತಿರುವ ಕಾರಣ ಅದರ ಬಗ್ಗೆ ಹಿಂದೂಗಳಲ್ಲಿರುವ ಪೂಜ್ಯಭಾವನೆ. ಗೋವು ನಿಜಕ್ಕೂ ಹಿಂದೂಗಳ ಪಾಲಿಗೆ ಪೂಜನೀಯವೇ? ಹೌದು ಎಂದಾದರೆ ಅದು ಎಂದಿನಿಂದ ಹುಟ್ಟಿಕೊಂಡದ್ದು? ಹಿಂದೂ ಧರ್ಮ ಹುಟ್ಟಿಕೊಂಡ ದಿನದಿಂದಲೇ ಗೋವು ಪೂಜನೀಯವಾಗಿತ್ತೇ ಇಲ್ಲವೇ, ಯಾವುದೋ ಕಾಲಘಟ್ಟದಲ್ಲಿ ದಿಢೀರನೇ ಗೋವು ಪಾವಿತ್ರ್ಯದ ಪಟ್ಟ ಏರಿತೇ? ಈ ಪ್ರಶ್ನೆಗಳಿಗೆ ವೇದಗಳಲ್ಲಿಯೇ ಸ್ಪಷ್ಟವಾದ ಮತ್ತು ಯಾರೂ ನಿರಾಕರಿಸಲಾಗದಂತಹ ಉತ್ತರಗಳಿವೆ. ಆದರೆ ಹಿಂದೂ ಧರ್ಮದ ಆಚಾರ-ವಿಚಾರಗಳ ಬಗ್ಗೆ ಮಾತನಾಡುವಾಗೆಲ್ಲ ವೇದ-ಉಪನಿಷತ್‌ಗಳನ್ನು ಉಲ್ಲೇಖಿಸುವ ಪಂಡಿತರು ಗೋವಿನ ಪಾವಿತ್ರ್ಯದ ಬಗೆಗಿನ ಚರ್ಚೆ  ಎದುರಾದಾಗ ಮಾತ್ರ ಧರ್ಮಶಾಸ್ತ್ರಗಳನ್ನು ತಪ್ಪಿಯೂ ಪ್ರಸ್ತಾಪಿಸುವುದಿಲ್ಲ.

ಹಿಂದೂ ಧರ್ಮದ ‘ಸಂವಿಧಾನ’ ಎಂದೇ ಹೇಳಲಾಗುತ್ತಿರುವ ನಾಲ್ಕು ವೇದಗಳು ಆ ಕಾಲದ ಆಚಾರ, ವಿಚಾರ, ನಂಬಿಕೆ, ಜೀವನಕ್ರಮ, ಆಹಾರ ಪದ್ಧತಿಗಳ ವಿವರಗಳನ್ನೊಳಗೊಂಡ ಸಮಗ್ರರೂಪದ ದಾಖಲೆ. ಅವುಗಳ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರರು ಸೇರಿದಂತೆ ಆ ಕಾಲದ ಹಿಂದೂಗಳೆಲ್ಲರೂ ಮಾಂಸಾಹಾರಿಗಳಾಗಿದ್ದರು. ಹಸು ಮತ್ತು ಕುದುರೆ ಅವರ ಮೆಚ್ಚಿನ ಆಹಾರವಾಗಿತ್ತು. ಅಶ್ವಮೇಧ, ರಾಜಸೂಯ, ವಾಜಪೇಯ ಮೊದಲಾದ ಯಾಗಗಳಲ್ಲಿ ದನ, ಎತ್ತು, ಗೂಳಿಗಳನ್ನು ಬಲಿಕೊಡುವುದು ಮತ್ತು ಅದರ ನಂತರ ಅವುಗಳ ಮಾಂಸ ತಿನ್ನುವುದು ಸಾಮಾನ್ಯವಾಗಿತ್ತು. ಮದುವೆಯಿಂದ ಶ್ರಾದ್ಧದವರೆಗೆ ವಿಶೇಷ ಸಂದರ್ಭಗಳಲ್ಲಿ ‘ದನ ಕಡಿಯುವ’ ಪದ್ಧತಿ ಇತ್ತು. ಮನೆಗೆ ಬರುವ ಅತಿಥಿಗಳಿಗೆ ನೀಡುವ ಗೋಮಾಂಸದಿಂದ ಕೂಡಿದ ‘ಮಧುಪರ್ಕ’ (ಸೂಪ್?) ಎಂಬ ಪಾನೀಯ ನೀಡಲಾಗುತ್ತಿತ್ತು. ಇದರಿಂದಾಗಿಯೇ ಅತಿಥಿಗಳನ್ನು ‘ಗೋಘ್ನ’ (ಗೋವಿನ ಹತ್ಯೆಗೆ ಕಾರಣಕರ್ತರು) ಎಂದು ಕರೆಯುತ್ತಿದ್ದರಂತೆ.

ಈ ಬಗ್ಗೆ ಬರೆದು ಮುಗಿಯದಷ್ಟು ಉಲ್ಲೇಖಗಳು ವೇದಗಳು, ತೈತ್ತರೀಯ ಉಪನಿಷತ್, ಮನುಸ್ಮೃತಿ ಮಹಾಭಾರತ, ರಾಮಾಯಣಗಳಲ್ಲಿವೆ. ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ (‘ಹಿಂದೂಸ್ ಏಟ್ ಬೀಫ್’ ಕೃತಿ) ಅವರಿಂದ ಹಿಡಿದು ಅನೇಕ ಇತಿಹಾಸಕಾರರು, ವಿದ್ವಾಂಸರು ವೇದಗಳಕಾಲದಲ್ಲಿನ ಗೋಮಾಂಸ ಭಕ್ಷಣೆ ಬಗ್ಗೆ ವಿವರವಾಗಿ ಬರೆದಿದ್ದಾರೆ.

ಭಾರತರತ್ನ ಪ್ರಶಸ್ತಿ ಪಡೆದಿದ್ದ ಪುರಾತತ್ವ ಶಾಸ್ತ್ರಜ್ಞ ಪಿ.ವಿ.ಕಾಣೆ ತಾವು ಸಂಪಾದಿಸಿರುವ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ದಲ್ಲಿ, ಇತಿಹಾಸಕಾರ ಪ್ರೊ.ದ್ವಿಜೇಂದ್ರನಾಥ್ ಝಾ ಅವರ ‘ದಿ ಮಿತ್ ಆಫ್ ಹೋಲಿ ಕೌ’ ಎಂಬ ಪುಸ್ತಕದಲ್ಲಿ ವೇದ ಮತ್ತು ವೇದ ಪೂರ್ವ ಕಾಲದಲ್ಲಿ ಗೋಮಾಂಸ ಭಕ್ಷಣೆ ಹೇಗೆ ಸಾಮಾನ್ಯ ಆಹಾರ ಪದ್ಧತಿಯಾಗಿತ್ತು ಎಂಬುದನ್ನು  ಆಧಾರಸಹಿತ ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಘ ಪರಿವಾರಕ್ಕೆ ಹೆಚ್ಚು ಪ್ರಿಯರಾಗಿರುವ ಸಾಹಿತಿ ಎಸ್.ಎಲ್.ಭೈರಪ್ಪನವರು ‘ಪರ್ವ’ ಕಾದಂಬರಿಯಲ್ಲಿ ಇದನ್ನೇ ಬರೆದುದಕ್ಕೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. (ಧುರ್ಯೋಧನನು ರಾಯಭಾರಕ್ಕೆ ಕಳುಹಿಸುವ ಸೋಮದತ್ತನೆಂಬ ಪುರೋಹಿತರು ಮಧ್ಯಾಹ್ನದ ಭೋಜನಕ್ಕೆ ಕೋಣನ ಮಾಂಸ ತಿನ್ನುವ ಚಿತ್ರ ‘ಪರ್ವ’ದಲ್ಲಿದೆ).

ವೇದಕಾಲದಲ್ಲಿ ಮಾಂಸಾಹಾರಿಗಳಾಗಿದ್ದ ಹಿಂದೂಗಳು ಸಸ್ಯಾಹಾರಿಗಳಾಗಿದ್ದು ಮತ್ತು ಇದ್ದಕ್ಕಿದ್ದಂತೆಯೇ ಗೋವುಗಳು ಪವಿತ್ರಸ್ಥಾನ ಪಡೆದು ಪೂಜನೀಯವಾಗಿದ್ದು ಬೌದ್ಧ ಧರ್ಮದ ಸ್ಥಾಪನೆಯ ನಂತರ ಎನ್ನುವುದು ಚಾರಿತ್ರಿಕವಾದ ಸತ್ಯ. ಆದರೆ ಬಹಳ ಮಂದಿ ತಿಳಿದುಕೊಂಡಂತೆ ಬುದ್ಧ ಶಾಕಾಹಾರಿಯಾಗಿರಲಿಲ್ಲ, ಆತ ಮತ್ತು ಆತನ ಅನುಯಾಯಿಗಳು ಮಾಂಸ (ಅದೂ ಹಂದಿ) ತಿನ್ನುತ್ತಿದ್ದರು. ಅಹಿಂಸಾವಾದಿಯಾಗಿದ್ದ ಬುದ್ಧ ರೈತನ ಸಂಗಾತಿಯಾದ ಗೋವುಗಳ ಹತ್ಯೆಯನ್ನು ವಿರೋಧಿಸಿದ್ದ. ಬೌದ್ಧ ಧರ್ಮದ ಉದಯದಿಂದ ಭೀತಿಗೊಳಗಾದ ಹಿಂದೂಧರ್ಮ ಅದನ್ನು ಎದುರಿಸಲೆಂದೇ ಶಾಕಾಹಾರಿಯಾಗಿದ್ದು ಮತ್ತು ಗೋವನ್ನು ಪೂಜನೀಯವಾಗಿ ಮಾಡಿದ್ದು.

ಇಂತಹ ಗೋವು ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದ ‘ಕಾಮಧೇನು’ವಾಯಿತು. ಆಶ್ಚರ್ಯಕರ ಸಂಗತಿ ಎಂದರೆ ಈ ರಾಜಕೀಯ ಪ್ರಾರಂಭಿಸಿದ್ದೇ ಮೊಘಲ್ ದೊರೆಗಳು. ಬಾಬರ್, ಅಕ್ಬರ್, ಹುಮಾಯೂನ್ ಮೊದಲಾದವರೆಲ್ಲರೂ ಹಿಂದೂಗಳನ್ನು ಒಲಿಸಿಕೊಳ್ಳಲು ನಿಯಂತ್ರಿತ ಗೋಹತ್ಯೆ ನಿಷೇಧ ಹೇರಿದ್ದರು.

ಗೋಹತ್ಯೆ ನಿಷೇಧವನ್ನು ಮೂಲಭೂತ ಹಕ್ಕಾಗಿ ಸೇರಿಸಬೇಕೆಂದು ಸಂವಿಧಾನ ರಚನಾ ಸಭೆಯಲ್ಲಿ ಕೆಲವು ಹಿಂದೂ ನಾಯಕರು ಒತ್ತಡ ಹೇರಿದ್ದರು. ಆದರೆ ಅಂಬೇಡ್ಕರ್ ಮಾತ್ರವಲ್ಲ ಆಗಿನ ಪ್ರಧಾನಿ ಜವಾಹರಲಾಲ ನೆಹರೂ ಅವರೂ ಇದಕ್ಕೆ ವಿರುದ್ಧವಾಗಿದ್ದರು. ಈ ಕಾರಣದಿಂದಾಗಿಯೇ ಬಹಳ ಎಚ್ಚರಿಕೆಯಿಂದ 48ನೇ ಪರಿಚ್ಛೇದವನ್ನು ರಾಜ್ಯಗಳಿಗೆ ಸಂಬಂಧಿಸಿದ ಸಂವಿಧಾನದ ನಿರ್ದೇಶನ ತತ್ವದಲ್ಲಿ ಸೇರಿಸಲಾಯಿತು. ‘ಕೃಷಿಕ್ಷೇತ್ರ ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿಪಡಿಸಬೇಕು. ಜಾನುವಾರಗಳ ತಳಿ ಸುಧಾರಣೆಗೆ ಕ್ರಮಕೈಗೊಳ್ಳುವುದರ ಜತೆಗೆ ಪ್ರಯೋಜನಕಾರಿ ಜಾನುವಾರುಗಳು ಮುಖ್ಯವಾಗಿ ಹಾಲು ನೀಡುವಂತಹ ಹಸು-ಎಮ್ಮೆಗಳ ಹತ್ಯೆಗೆ ನಿಷೇಧ ಹೇರಬಹುದು’ ಎಂದು 48ನೇ ಪರಿಚ್ಛೇದ ಹೇಳಿದೆ. ಇದರಂತೆ ಪಶ್ಚಿಮ ಬಂಗಾಳ, ಕೇರಳ ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ನಿಯಂತ್ರಿತ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ.

ಕರ್ನಾಟಕದಲ್ಲಿ 1964ರಿಂದಲೂ ಗೋರಕ್ಷಣಾ ಕಾಯಿದೆ ಜಾರಿಯಲ್ಲಿದೆ. ಇದರ ಪ್ರಕಾರ ಸಂಬಂಧಿತ ಅಧಿಕಾರಿಗಳಿಂದ ಲಿಖಿತ ದೃಢೀಕರಣಪತ್ರ ಪಡೆದ ನಂತರವಷ್ಟೇ ಗೋವುಗಳ ಹತ್ಯೆಮಾಡಬಹುದಾಗಿದೆ. ಈ ರೀತಿ ಹತ್ಯೆ ಮಾಡಬಹುದಾದ ಗೋವುಗಳಿಗೆ ಕನಿಷ್ಠ ಹನ್ನೆರಡು ವರ್ಷ ವಯಸ್ಸಾಗಿರಬೇಕು, ಅವುಗಳು ಹಾಲು ನೀಡುವ ಇಲ್ಲವೇ ಕರು ಹಾಕುವ ಸಾಮರ್ಥ್ಯವನ್ನು ಕಳೆದುಕೊಂಡಿರಬೇಕು ಹಾಗೂ ಗಾಯಗೊಂಡು ನಿರುಪಯುಕ್ತವಾಗಿರಬೇಕು. ಉಳಿದೆಲ್ಲ ಕಾಯಿದೆಗಳಂತೆ ಇದರ ಉಲ್ಲಂಘನೆ ಕೂಡಾ ನಡೆಯುತ್ತಿರುವುದು ನಿಜ. ಮಾಂಸಕ್ಕಾಗಿ ಹಸುಗಳನ್ನು ಕಸಾಯಿಖಾನೆಗಳಿಗಿಂತ ಹೆಚ್ಚಾಗಿ ಖಾಸಗಿಯಾಗಿಯೇ ಕೊಲ್ಲುವುದರಿಂದ ಕಾಯಿದೆಯ ಪಾಲನೆ ಕಡಿಮೆ.

ಸಂಪೂರ್ಣವಾಗಿ ಗೋಹತ್ಯೆ ನಿಷೇಧಿಸುವ ಕಾನೂನು ರಚನೆ ಒತ್ತಾಯ ಸ್ವತಂತ್ರ ಭಾರತದಲ್ಲಿ ಜೋರಾಗಿ ಕೇಳಿಬಂದದ್ದು 1979ರಲ್ಲಿ ವಿನೋಬಾ ಭಾವೆ ಆಮರಣ ಉಪವಾಸ ಪ್ರಾರಂಭಿಸಿದಾಗ. ಇದಕ್ಕೆ ಮಣಿದ ಜನತಾ ಸರ್ಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. 1982ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರೇ ರಾಜ್ಯಸರ್ಕಾರಳಿಗೆ ಪತ್ರ ಬರೆದು ಗೋಹತ್ಯೆ ನಿಷೇಧಿಸುವಂತೆ ತಿಳಿಸಿದ್ದರು. ಅಲ್ಲಿಂದೀಚೆಗೆ ಗೋಹತ್ಯೆ ನಿಷೇಧದ ಕನಿಷ್ಠ ಹನ್ನೆರಡು ಖಾಸಗಿ ಸದಸ್ಯರ ಗೊತ್ತುವಳಿಗಳು ಲೋಕಸಭೆಯಲ್ಲಿ ಮಂಡನೆಯಾಗಿವೆ. 1990ರಲ್ಲಿ ಬಿಜೆಪಿ ಸದಸ್ಯ ಜಿ.ಎಂ.ಲೋಧಾ ಮಂಡಿಸಿದ ಗೊತ್ತುವಳಿಗೆ ಕಾಂಗ್ರೆಸ್ ನಾಯಕ ವಸಂತ ಸಾಠೆ ಅವರೇ ಬೆಂಬಲಿಸಿ ಅಚ್ಚರಿಸಿ ಹುಟ್ಟಿಸಿದ್ದರು.

ಬೂದಿ ಮುಚ್ಚಿದ ಕೆಂಡದಂತಿದ್ದ ಈ ವಿವಾದವನ್ನು ಇತ್ತೀಚೆಗೆ ಕೆದಕಿದ್ದು ಎಐಸಿಸಿಯ ಈಗಿನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಗೋಹತ್ಯೆ ನಿಷೇಧಿಸಿ ಕಾನೂನು ರೂಪಿಸುವಂತೆ ‘ದಿಗ್ಗಿರಾಜಾ’ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದರು. ಇದನ್ನೇ ಬಳಸಿಕೊಂಡ ಎನ್‌ಡಿಎ ಸರ್ಕಾರ 2003ರಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಮುಂದಾಯಿತು. ಆದರೆ ಮಿತ್ರಪಕ್ಷಗಳಾದ ತೆಲುಗುದೇಶಂ ಮತ್ತು ಡಿಎಂಕೆ ವಿರೋಧದ ಕಾರಣದಿಂದಾಗಿ ಆ ಪ್ರಯತ್ನ ಸಫಲವಾಗಲಿಲ್ಲ.

ಗೋಹತ್ಯೆ ನಿಷೇಧವನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನರಷ್ಟೇ ವಿರೋಧಿಸುತ್ತಾರೆಂಬ ತಪ್ಪು ಕಲ್ಪನೆಯೊಂದಿದೆ. ದನದ ಮಾಂಸವನ್ನು ನಿತ್ಯದ ಆಹಾರವಾಗಿ ಬಳಸುತ್ತಿರುವವರಲ್ಲಿ ಶೂದ್ರ ಮತ್ತು ದಲಿತರ ಸಂಖ್ಯೆ ಕೂಡಾ ಗಣನೀಯವಾಗಿದೆ. ಹೀಗಿದ್ದರೂ ಗೋಹತ್ಯೆಯ ನಿಷೇಧವನ್ನು ಕೇವಲ ಆಹಾರದ ದೃಷ್ಟಿಯಿಂದಷ್ಟೇ ವಿರೋಧಿಸಬೇಕಾಗಿಲ್ಲ. ಸಂಖ್ಯೆಯ ದೃಷ್ಟಿಯಿಂದ ವಿಶ್ವದಲ್ಲಿಯೇ ಅತಿಹೆಚ್ಚಿನ ಜಾನುವಾರು ಸಂಪತ್ತು ಹೊಂದಿರುವ ದೇಶ ಭಾರತ. ವಿಶ್ವದ ಒಟ್ಟು ಹಸುಗಳಲ್ಲಿ ನಾಲ್ಕನೆ ಒಂದರಷ್ಟು ನಮ್ಮ ದೇಶದಲ್ಲೇ ಇವೆ. ಇಲ್ಲಿರುವ ಸುಮಾರು 20 ಕೋಟಿ ಜಾನುವಾರುಗಳಲ್ಲಿ ಹಸುಗಳು ಆರು ಕೋಟಿ, ಎಮ್ಮೆಗಳು  ಎಂಟು ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದರೆ ಶೇಕಡಾ 60ರಷ್ಟು ಜಾನುವಾರುಗಳಿಗೆ ಬೇಕಾದಷ್ಟು ಮಾತ್ರ ಆಹಾರ ಲಭ್ಯ ಇದೆ. ಗೋಮಾಳಗಳೆಲ್ಲ ಒತ್ತುವರಿಗೊಳಗಾಗಿ ಕಣ್ಮರೆಯಾಗುತ್ತಿರುವುದರಿಂದ ಈ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಇದೆ. ಈವರೆಗಿನ ಎಲ್ಲ ಪಂಚವಾರ್ಷಿಕ ಯೋಜನೆಗಳ ವರದಿಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಕೃಷಿಕ್ಷೇತ್ರದಲ್ಲಿನ ಕಷ್ಟ-ನಷ್ಟ ತಾಳಲಾರದೆ ರೈತರು ಈಗಲೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇಂತಹವರ ಕುತ್ತಿಗೆಗೆ ಹಾಲು ಬತ್ತಿದ, ಕರು ಹಾಕದ, ರೋಗಿಷ್ಠ ಬಡಕಲು ಹಸುಗಳನ್ನು ಕಟ್ಟಿಹಾಕಿದರೆ ರೈತರ ಆತ್ಮಹತ್ಯೆಯ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಅಷ್ಟೇ.

ಗೋಹತ್ಯೆ ನಿಷೇಧಕ್ಕೆ ಕಾನೂನು ರಚಿಸಲು ಹೊರಟಿರುವ ಸರ್ಕಾರಕ್ಕೆ ಇವೆಲ್ಲ ಗೊತ್ತಿಲ್ಲ ಎಂದೇನಿಲ್ಲ. ಗೊತ್ತಿದ್ದೂ ಇಂತಹ  ‘ತಪ್ಪು’ ಮಾಡುತ್ತಿರುವುದಕ್ಕೆ ಕಾರಣ ಆಡಳಿತಪಕ್ಷದೊಳಗಿನ ಗುಪ್ತ ಅಜೆಂಡಾ. ಈಗಿರುವ ಕಾಯಿದೆಗೆ ಸೂಚಿಸಲಾಗಿರುವ ತಿದ್ದುಪಡಿಗಳಲ್ಲಿ ಗೋಹತ್ಯೆಯ ಪತ್ತೆಗಾಗಿ ಕಲ್ಪಿಸಿರುವ ಅವಕಾಶ ಹಾಗೂ ಅಪರಾಧಕ್ಕಾಗಿ ವಿಧಿಸಲಾಗುವ ಶಿಕ್ಷೆಯ ಪ್ರಮಾಣವೇ ಸರ್ಕಾರದ ದುರುದ್ದೇಶಕ್ಕೆ ಸಾಕ್ಷಿ.

ಈ ತಿದ್ದುಪಡಿ ಜಾರಿಗೆ ಬಂದರೆ ಮುಸ್ಲಿಮರನ್ನು ಒಳಗೊಂಡಂತೆ ರಾಜಕೀಯ ವಿರೋಧಿಗಳನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸುವುದು ಇನ್ನೂ ಸುಲಭದ ಕೆಲಸ. ಅವರ ಮನೆಮುಂದೆ ಸತ್ತದನದ ತಲೆ ಎಸೆದರಾಯಿತು. ಒಂದು ವರ್ಷದ ಜೈಲು ಇಲ್ಲವೇ 50,000 ರೂಪಾಯಿ ದಂಡ. ಮುಖ್ಯಮಂತ್ರಿ ಯಡಿಯೂರಪ್ಪನವರು ಎಷ್ಟು ಮಂದಿಯ ಕೈ ಕಡಿಯಲು ಸಾಧ್ಯ?

__________

Courtesy: http://www.prajavani.net/Content/Feb152010/dinesh20100214170320.asp

 

 

Advertisements

ಬೌದ್ಧ ಧರ್ಮಕ್ಕೆ 10,000 ದಲಿತರ ಮತಾಂತರ

09/07/2010

ಭೂಪಾಲ್, ಶನಿವಾರ, 11 ಅಕ್ಟೋಬರ್ 2008 ( 19:23 IST )
ಬುದ್ಧ ಜಯಂತಿಯ ದಿನವಾದ ಶುಕ್ರವಾರ ಮಧ್ಯಪ್ರದೇಶದ ಪುಕಾರಣ್ಯ ಗ್ರಾಮ ಸಮೀಪದ ಕಾನ್ಪುರದಲ್ಲಿ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಮಾತಾ ಪ್ರಸಾದ್, ಆಚಾರ್ಯ ಸಂದೇಶ್ ಭಾಲೆಕಾರ್ ಸೇರಿದಂತೆ ಹಲವು ಬೌದ್ಧ ಭಿಕ್ಷುಗಳ ಸಮ್ಮುಖದಲ್ಲಿ 10 ಸಾವಿರ ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು.

ಪುಕಾರಣ್ಯ ಗ್ರಾಮದ ಕಾನ್ಪುರದಲ್ಲಿ ನಡೆದ ಬೌದ್ಧ ಧರ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಈ ಮತಾಂತರ ಪ್ರಕ್ರಿಯೆ ನಡೆಯಿತು.ಇಂದಿನಿಂದ ನಾವು ಶ್ರೀರಾಮ ಸೇರಿದಂತೆ ಯಾವುದೇ ಹಿಂದೂ ದೇವ-ದೇವತೆಗಳನ್ನು ಪೂಜಿಸುವುದಿಲ್ಲ. ಆ ನಿಟ್ಟಿನಲ್ಲಿ ನಾವು ಕೇವಲ ಬುದ್ಧನ ತತ್ವಗಳನ್ನು ಮಾತ್ರ ಅನುಸರಿಸುತ್ತೇವೆ. ಇದು ನಮಗೆ ಮರುಜನ್ಮ ನೀಡಿದಂತಾಗಿದೆ ಎಂದು ರೂರಾ ಗ್ರಾಮದ ಶಾಕುಂತಲಾ ಕಮಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬೃಹತ್ ಸಮಾರಂಭದಲ್ಲಿ ಭಾರತೀಯ ದಲಿತ್ ಪ್ಯಾಂಥರ್ ಪಕ್ಷದ ಅಧ್ಯಕ್ಷ ಧಾನಿ ರಾವ್ ಅವರು ಭಾಗವಹಿಸಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನ, ವಿಚಾರಧಾರೆಯನ್ವಯ ಬೌದ್ಧ ದೀಕ್ಷೆ ಕಾರ್ಯಕ್ರಮ ನಡೆಸಲಾಗಿದೆ ಎಂದು ಹೇಳಿದರು.
(ಮೂಲ – ವೆಬ್‌ದುನಿಯಾ)


ಬೌದ್ಧ ಧರ್ಮ-ಅನಾವಶ್ಯಕ ವಿವಾದ: ಪೇಜಾವರ

08/07/2010
ಬೌದ್ಧ ಧರ್ಮ-ಅನಾವಶ್ಯಕ ವಿವಾದ: ಪೇಜಾವರ
ಹುಬ್ಬಳ್ಳಿ, ಶನಿವಾರ, 15 ನವೆಂಬರ್ 2008( 13:50 IST )

ದಲಿತರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಧರ್ಮಾಂತರಗೊಳ್ಳುವ ಕುರಿತಾಗಿ ತಮ್ಮ ಅನಿಸಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವಿವಾದ ಸೃಷ್ಟಿಸಲಾಗಿದೆ ಎಂದು ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮಿಜಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಕ್ತಿ ಸ್ವಯಂ ಇಚ್ಛೆಯಿಂದ ಯಾವುದೇ ಧರ್ಮ ಸ್ವೀಕಾರಕ್ಕೆ ಸಂವಿಧಾನ ಅವಕಾಶ ಕಲ್ಪಿಸಿರುವಾಗ ಒಂದು ಧರ್ಮದ ವಿರುದ್ಧ ತಾವು ಹೇಗೆ ಹೇಳಿಕೆ ನೀಡಲು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸೇರಬೇಡಿ ಎಂಬುದು ತಮ್ಮ ಅಭಿಪ್ರಾಯವಾಗಿತ್ತೇ ವಿನಃ ಅದು ಆದೇಶವಾಗಿರಲಿಲ್ಲ ಎಂದು ಅವರು ವಿವರಿಸಿದರು.

ಭಯೋತ್ಪಾದನೆ ಕೃತ್ಯಗಳಲ್ಲಿ ಕೆಲ ಮಠಾಧೀಶರು ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣ ವಿಚಾರಣೆಯಲ್ಲಿದೆ. ಅದರ ಕುರಿತು ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದರು.


ಗಾಂಧೀಜಿ ಬಗ್ಗೆ ತಿಳಿಯಲು ಅಂಬೇಡ್ಕರ್ರವರ ಬರಹಗಳನ್ನು ಓದುವ ಪ್ರಯತ್ನ ಮಾಡಿ !

08/07/2010

Reply to ಡಾ|| ಪಾಟೀಲ ಪುಟ್ಟಪ್ಪ’ article (ಗಾಂಧೀಜಿಯನ್ನು ತಿಳಿಯುವ ತೊಂದರೆ ತೆಗೆದುಕೊಳ್ಳಿ!) 21 June 2010, Prajavani Daily.

ಡಾ||ಪಾಟೀಲ ಪುಟ್ಟಪ್ಪ ನವರು ಅಂಬೇಡ್ಕರ್ ರವರು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಲು ಗಾಂಧಿ ಕಾರಣರಲ್ಲ ವೆಂಬ ನನ್ನ ಮಾತಿಗೆ ತುಂಬಾ ವ್ಯಾಕುಲಗೊಂಡಂತೆ ಕಾಣುತ್ತದೆ. ಇದಕ್ಕಾಗಿ ‘ಗಾಂಧೀಜಿಯನ್ನು ತಿಳಿಯುವ ತೊಂದರೆ ತೆಗೆದುಕೊಳ್ಳಿ ಎಂದವರು ಆದೇಶ ನೀಡಿದ್ದಾರೆ. ಆ ಕಾಲದ ವಿದ್ಯಮಾನಗಳನ್ನು ತಿಳಿದವರಂತೆ ಮಾತನಾಡಿದ್ದಾರೆ. ಆ ಕಾಲದಲ್ಲಿ ಏನು ನಡೆಯಿತು ಎನ್ನುವುದು ಅವರಿಗೇನು ಗೊತ್ತು? ಎಂದವರು ಸಿಡಿದಿದ್ದಾರೆ. ಇದೇ ಮಾತುಗಳು ಪುಟ್ಟಪ್ಪನವರಿಗೂ ಅನ್ವಯಿಸುತ್ತದೆಂಬ ಅಂಶವನ್ನು ಅವರು ಅರಿಯುವುದು ಸೂಕ್ತ. ಐತಿಹಾಸಿಕ ಪ್ರಜ್ಞೆ ಬಗ್ಗೆ ಗೌರವ ಇರುವ ಯಾವುದೇ ವ್ಯಕ್ತಿ ಇಂತಹ ಮಾತನ್ನು ಆಡಲಾರರು.

ಅಂಬೇಡ್ಕರ್ರವರು ನೆಹರೂ ಸಂಪುಟದಲ್ಲಿ ಕಾನೂನು ಮಂತ್ರಿಗಳಾಗಿದ್ದ ಕಾರಣದಿಂದಲೇ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದರೆನ್ನುವ ಅಂಶ ತೀರಾ ಬಾಲಿಷವಾಗಿದೆ. ಅದೇ ರೀತಿ ಶ್ರೀಶಿವಸುಂದರ್ ರವರ ಕಾಂಗ್ರೆಸ್ಗೆ ಅಂಬೇಡ್ಕರ್ರವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವುದು ಒಂದು ತಂತ್ರವಾಗಿತ್ತೆ ಎಂಬ ಅಭಿಪ್ರಾಯವೂ ಸಹ ಅಮಾನವೀಯ ಮನುಸ್ಮೃತಿಗೆ ಕೊನೆ ಹಾಡಿ ಮಾನವತಾವಾದದ ಸಂವಿಧಾನ ನೀಡಿದ ಸಂವಿಧಾನ ಶಿಲ್ಪಿಯ ಚಾರಿತ್ರಿಕ ಸಾಧನೆ ಮತ್ತು ದಾಖಲೆಗೆ ಅಗೌರವ ತೋರಿಸಿದಂತಾಗಿದೆ.
ಆದ್ದರಿಂದ ಈ ಕೆಳಕಂಡ ಅಂಶಗಳನ್ನು ಓದುಗರ ಗಮನಕ್ಕೆ ತರಬಯಸುತ್ತೇನೆ. ಜುಲೈ 1946 ರಲ್ಲಿ ರಾಜ್ಯಾಂಗ ರಚನಾ ಸಭೆಗೆ ನಡೆದ ಚುನಾವಣೆಯಲ್ಲಿ ಬಾಬಾ ಸಾಹೇಬ್ ಡಾ||ಅಂಬೇಡ್ಕರ್ ರವರು South Bombay ಯಿಂದ ಸ್ಪಧರ್ಿಸಿದಾಗ ಕಾಂಗ್ರೆಸ್ ಮತ್ತು ಎಡ ಪಂಥೀಯರು ಅವರ ವಿರುದ್ಧ ಅಂಬೇಡ್ಕರ್ರವರ ಆಪ್ತ ಸಹಾಯಕರಾಗಿದ್ದ ಕಜ್ರೋಳಕರ್ರವರನ್ನು ಒಮ್ಮತದ ಅಭ್ಯಥರ್ಿಯಾಗಿ ನಿಲ್ಲಿಸಿ ಅಂಬೇಡ್ಕರ್ ರವರನ್ನು ಸೋಲಿಸುತ್ತಾರೆ. ಇದರಿಂದ ದಿಗಿಲುಗೊಂಡ ಪಶ್ಚಿಮ ಬಂಗಾಳದ ಚಂಡಾಲರು ಮತ್ತು ಮುಸ್ಲಿಂರು ಅಂಬೇಡ್ಕರ್ರವರನ್ನು ಸಂವಿಧಾನ ರಚನಾ ಸಮಿತಿಗೆ ಕಳುಹಿಸಲೇಬೇಕೆಂಬ ಹಠದಿಂದ ಜೈಸೂರ್ ಮತ್ತು ಖುಲ್ನಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶ್ರೀ.ಜೋಗೇಂದ್ರಾಥ್ ಮಂಡಲ್ರವರಿಂದ ರಾಜೀನಾಮೆ ಕೊಡಿಸಿ ಬಾಬಾ ಸಾಹೇಬ್ ಡಾ||ಅಂಬೇಡ್ಕರ್ರವರನ್ನುನಿಲ್ಲಿಸಿ ಗೆಲ್ಲಿಸುತ್ತಾರೆ. ನಂತರ 1947ರ ಜುಲೈ 2 ರಂದು ದೇಶ ವಿಭಜನೆ ಸಂದರ್ಭದಲ್ಲಿ ಅಂಬೇಡ್ಕರ್ರವರು ಪ್ರತಿನಿಧಿಸಿದ್ದ ಜೈಸೂರ್ ಮತ್ತು ಖುಲ್ನಾ ಪ್ರದೇಶವನ್ನು ಪೂರ್ವ ಪಾಕಿಸ್ತಾನಕ್ಕೆ ಬಿಟ್ಟುಕೊಡಲಾಗುತ್ತದೆ. ಇದರಿಂದ ಅಂಬೇಡ್ಕರ್ರವರು ಪಾಕಿಸ್ತಾನದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ವಾಸ್ತವವಾಗಿ ವಿಭಜನಾ ಸಿದ್ದಾಂತವು ಶೇ. 50 ಕ್ಕಿಂತ ಹೆಚ್ಚು ಮುಸ್ಲಿಂರಿರುವ ಪ್ರದೇಶವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕೆಂಬುದಾಗಿತ್ತು. ಆದರೆ ಜೈಸೂರ್ ಮತ್ತು ಖುಲ್ನಾದಲ್ಲಿ ಮುಸ್ಲಿಂರ ಜನಸಂಖ್ಯೆ ಶೇ. 48 ರಷ್ಟು, ಅಸ್ಪೃಶ್ಯರು ಮತ್ತು ಹಿಂದೂಗಳ ಸಂಖ್ಯೆ 52% ರಷ್ಟಿತ್ತು. ಆದರೂ ಸಹ ಅಂಬೇಡ್ಕರ್ರವರನ್ನು ರಾಜ್ಯಾಂಗ ರಚನಾ ಸಭೆಯಿಂದ ಹೊರಗಿಡಬೇಕೆಂಬ ಕುತಂತ್ರದಿಂದ ವಿಭಜನಾ ಸಿದ್ಧಾಂತವನ್ನು ಕಡೆಗಣಿಸಿ ಜೈಸೂರ್ ಮತ್ತು ಖುಲ್ನಾ ವನ್ನು ಪೂರ್ವ ಪಾಕಿಸ್ತಾನಕ್ಕೆ ಬಿಟ್ಟು ಕೊಡಲಾಗುತ್ತದೆ. ನನ್ನ ಜನ ಭಾರತದಲ್ಲಿರುವುದರಿಂದ ಪಾಕಿಸ್ತಾನದ ಸಂವಿಧಾನ ರಚನಾ ಸಭೆಯಲ್ಲಿ ನಾನೇನು ಮಾಡಲಿ ಎಂದು ಡಾ||ಅಂಬೇಡ್ಕರ್ರವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಾರೆ. ನಂತರ ಇಂಗ್ಲೆಂಡ್ಗೆ ತೆರಳಿದ ಅಂಬೇಡ್ಕರ್ರವರು ಜುಲೈ 7 ಮತ್ತು 8 ರಂದು ಬ್ರಿಟನ್ ಪ್ರಧಾನ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ಚಚರ್ಿಸಿ ತಮಗಾಗಿರುವ ಅನ್ಯಾಯವನ್ನು ಮನದಟ್ಟುಮಾಡಿಕೊಡುತ್ತಾರೆ. ಅಂಬೇಡ್ಕರ್ರವರಿಗೆ ಆಗಿದ್ದ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿದ ಬ್ರಿಟೀಷ್ ಸಕರ್ಾರ ಜೈಸೂರ್ ಮತ್ತು ಖುಲ್ನಾವನ್ನು ಭಾರತದಲ್ಲೇ ಉಳಿಸುವಂತೆ ಇಲ್ಲದಿದ್ದರೆ ಬೇರಾವುದಾದರೂ ಕ್ಷೇತ್ರದಿಂದ ಅಂಬೇಡ್ಕರ್ರವನ್ನು ರಾಜ್ಯಾಂಗ ಸಭೆಗೆ ಆಯ್ಕೆ ಮಾಡುವಂತೆ ನೆಹರೂರವರಿಗೆ ಸೂಚಿಸುತ್ತದೆ. ಇಲ್ಲದಿದ್ದರೆ ಸ್ವಾತಂತ್ರ್ಯವನ್ನು ಮುಂದೂಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತದೆ. ಇದರಿಂದ ಗಾಬರಿ ಬಿದ್ದ ಕಾಂಗ್ರೆಸ್ನವರು ಪೂನಾದಿಂದ ಆಯ್ಕೆಯಾಗಿದ್ದ ಬ್ಯಾರಿಸ್ಟರ್ ಜಯಕರ್ರವರಿಂದ ರಾಜೀನಾಮೆ ಕೊಡಿಸಿ ಜುಲೈ 9, 1947 ರಂದು ಬಾಬಾ ಸಾಹೇಬ್ ಅಂಬೇಡ್ಕರ್ರವರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಾರೆ.
ರಾಜ್ಯಾಂಗ ರಚನಾ ಸಭೆಗೆ ಸದಸ್ಯರಾಗದಂತೆ ಬಾಬಾ ಸಾಹೇಬರಿಗೆ ಹೆಜ್ಜೆ ಹೆಜ್ಜೆಗೂ ಅಡ್ಡಗಾಲು ಹಾಕಿದ ಜನ ಅವರನ್ನೇ ಕರಡು ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲು ಬ್ರಿಟೀಷರು ಮತ್ತು ಬಾಬಾ ಸಾಹೇಬರಿಗಿದ್ದ ಸಂವಿಧಾನಾತ್ಮಕ ಪ್ರಚಂಡ ಜ್ಞಾನವೇ ಕಾರಣವಾಗಿತ್ತು. ಅಲ್ಲದೆ ಅಂದು ಸಂವಿಧಾನದ ಕರಡು ಸಿದ್ಧಪಡಿಸ ಬಲ್ಲವರಾರಿದ್ದರು? ಶ್ರೀ.ಟಿ.ಟಿ.ಕೃಷ್ಣಮೂತರ್ಿರವರು ದಿನಾಂಕ 4-11-1949 ರಂದು ರಾಜ್ಯಾಂಗ ರಚನಾ ಸಭೆಯಲ್ಲಿ ಹೇಳಿದ ಮಾತನ್ನು ಗಮನಿಸಿ ಸಂವಿಧಾನದ ಕರಡು ಸಮಿತಿಗೆ 7 ಜನ ಸದಸ್ಯರನ್ನು ನೇಮಿಸಲಾಗಿತ್ತು. ಇವರಲ್ಲಿ ಒಬ್ಬರು ಮೃತರಾದರು, ಮತ್ತೊಬ್ಬರು ವಿದೇಶಕ್ಕೆ ಹೋದವರು ಹಿಂದಿರುಗಿ ಬರಲೇ ಇಲ್ಲ, ಇನ್ನೊಬ್ಬರು ಅನಾರೋಗ್ಯದ ಕಾರಣದಿಂದ ಸಮಿತಿಯ ಕಾರ್ಯಕಲಾಪಗಳಿಂದ ಹೊರಗೇ ಉಳಿದರು, ಇನ್ನಿಬ್ಬರು ವಿವಿಧ ಕಾರಣಗಳಿಂದ ಭಾಗವಹಿಸಲಿಲ್ಲ. ಅಂತಿಮವಾಗಿ ಈ ಜವಾಬ್ದಾರಿ ಸಂಪೂರ್ಣವಾಗಿ ಡಾ||ಅಂಬೇಡ್ಕರ್ರವರ ಮೇಲೇಯೇ ಬಿತ್ತು. ಅದನ್ನವರು ನಮ್ಮೆಲ್ಲರ ನಿರೀಕ್ಷೆ ಮೀರಿ ನಿಭಾಯಿಸಿ ಅತ್ಯುತ್ತಮವಾದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ ರಚನೆಯಂತಹ ಶ್ರೇಷ್ಠವಾದ ಕೆಲಸದ ಬಗ್ಗೆ ನೇಮಕಗೊಂಡಿದ್ದ ಸದಸ್ಯರು ಎಂಥಹ ಕಾಳಜಿ ಇಟ್ಟುಕೊಂಡಿದ್ದರೆಂಬ ಹಿನ್ನೆಲೆಯಲ್ಲಿ ಬಾಬಾ ಸಾಹೇಬರ ಶ್ರಮವನ್ನು ನೋಡಬೇಕು.
ಡಾ||ಅಂಬೇಡ್ಕರ್ರವರು 1946ರಲ್ಲಿ ರಾಜ್ಯಾಂಗ ರಚನಾ ಸಭೆಗೆ ಸಲ್ಲಿಸುವುದಕ್ಕಾಗಿ ಬರೆದ States and Minorites ಕೃತಿಯೇ ಇಂದಿನ ಸಂವಿಧಾನದ ಮೂಲವಾಗಿದೆ. ಈ ಪ್ರಸ್ತಾವನೆಯನ್ನು ಸಂವಿಧಾನ ರಚನಾ ಸಭೆಗೆ ಸಲ್ಲಿಸುವುದಕ್ಕೆ ಮೊದಲೇ ಅಂಬೇಡ್ಕರ್ರವರ ಕೆಲವು ಹಿಂದೂ ಸ್ನೇಹಿತರ ಒತ್ತಾಯದ ಮೇರೆಗೆ ಪುಸ್ತಕ ರೂಪದಲ್ಲಿ ಹೊರಬಂದು ಎಲ್ಲಾ ಸದಸ್ಯರ ಕೈ ಸೇರಿತ್ತು. ಸಂವಿಧಾನದ ಕರಡು ಸಿದ್ಧಪಡಿಸಿಕೊಡುವಂತೆ ಹೊರದೇಶಗಳತ್ತ ನೋಡುತ್ತಿದ್ದ ನೆಹರೂ ಮತ್ತವರ ಮಿತ್ರರು ಅಂತಿಮವಾಗಿ ಅಂಬೇಡ್ಕರ್ರವರನ್ನು ಅಧ್ಯಕ್ಷರಾಗಿ ನೇಮಿಸಲು ಈ ಕೃತಿಯೂ ಒಂದು ಕಾರಣವಾಗಿದೆ.
ಪಾಪು ರವರ ಗಾಂಧೀಜಿ ಇಲ್ಲದಿದ್ದರೆ ನಾನು ಮನುಷ್ಯನಾಗುತ್ತಿರಲಿಲ್ಲ ಎಂಬ ಮಾತು ಅವರ ಆದರ್ಶ ಪುರುಷ ಅಣ್ಣ ಬಸವಣ್ಣನಿಗೆ ಮಾಡಿದ ಅವಮಾನವೇ ಸರಿ. ಎಲ್ಲಾ ಜಾತಿಗಳನ್ನೊಳಗೊಂಡ ಅನುಭವ ಮಂಟಪ ಕಟ್ಟಿದ ಬಸವಣ್ಣನೆಲ್ಲಿ? ಮನುಧರ್ಮ ಶಾಸ್ತ್ರವನ್ನು ಕೊಂಡಾಡಿ ವರ್ಣ ವ್ಯವಸ್ಥೆಯನ್ನು ಸಮಥರ್ಿಸಿದ ಗಾಂಧೀಜಿ ಎಲ್ಲಿ?
ಗಾಂಧೀಜಿ ಬಗ್ಗೆ ತಿಳಿಯಬೇಕಾದರೆ ಪಾಟೀಲ್ ಪುಟ್ಟಪ್ಪನವರು ಬಾಬಾ ಸಾಹೇಬರ ಬರಹಗಳು ಮತ್ತು ಭಾಷಣಗಳನ್ನು ಓದುವ ಪ್ರಯತ್ನ ಮಾಡಲಿ.

-ರಾಜಶೇಖರಮೂರ್ತಿ

ವ್ಯವಸ್ಥಾಪಕರು
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಜಿಲ್ಲಾಡಳಿತ ಭವನ, ಚಾಮರಾಜನಗರ