ಆಸೆ ತೋರಿಸಿ ಮತಾಂತರ ಸಲ್ಲದು

10/07/2010

ಹಣಮಂತರಾಯ ಕೌಟಗೆ

ಆಸೆ ತೋರಿಸಿ ಮತಾಂತರ ಸಲ್ಲದು
ಎಲ್ಲ ಕಲಹಗಳಿಗೂ ಮನುಷ್ಯನ ಮನಸ್ಸೇ ಕಾರಣ. ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಮನಸ್ಸುಗಳ ಪರಿವರ್ತನೆ ಆಗಬೇಕು. ಬುದ್ಧ ಇದನ್ನೇ ಹೇಳಿದ್ದಾನೆ. ಆಚರಣೆಗಳಲ್ಲಿ ಭಿನ್ನತೆ ಇದ್ದ ಮಾತ್ರಕ್ಕೆ ದ್ವೇಷ ಸಾಧಿಸುವ ಅಗತ್ಯವಿಲ್ಲ

‘ವಿದೇಶಿಗನಾದ ನಾನು ಭಾರತೀಯರಿಗೆ ಭಾರತದ ಇತಿಹಾಸ ಮತ್ತು ತತ್ವ ಬೋಧಿಸುವುದೆಂದರೆ ಮುಜುಗರ ಎನಿಸುತ್ತದೆ. ಆದರೂ ಅನಿವಾರ್ಯವಾಗಿ ಅದನ್ನು ಮಾಡುತ್ತಿದ್ದೇನೆ…’ ಎನ್ನುತ್ತಲೆ ಮಾತಿಗಿಳಿದರು ಧಮ್ಮಾಚಾರಿ ಸುಭೂತಿ.

ಮೂಲತಃ ಇಂಗ್ಲೆಂಡಿನ ಲಂಡನ್ ಸಮೀಪದ ಚೆಟಮ್ ನಿವಾಸಿ ಅಲೆಕ್ಝಾಂಡರ್ ಕೆನಡಿ ತತ್ವಶಾಸ್ತ್ರದ ಪದವೀಧರ. 1970ರ ದಶಕದಲ್ಲಿ ಉರ್ಗೇನ್ ಸಂಘರಕ್ಷಿತ ಎಂಬ ಬೌದ್ಧ ವಿದ್ವಾಂಸರು ‘ಫ್ರೆಂಡ್ಸ್ ಆಫ್ ದಿ ವೆಸ್ಟರ್ನ್ ಬುದ್ಧಿಸ್ಟ್ ಆರ್ಡರ್’ ಎಂಬ ಸಂಘಟನೆ ಮೂಲಕ ಪಶ್ಚಿಮ ದೇಶಗಳಲ್ಲಿ ಬೌದ್ಧ ಧರ್ಮ ಪ್ರಚಾರ ನಡೆಸುತ್ತಿದ್ದರು. ಇವರ ಪ್ರಭಾವಕ್ಕೆ ಒಳಗಾದ ಕೆನಡಿ ತಮ್ಮ 21ನೇ ವಯಸ್ಸಿನಲ್ಲಿ ‘ಸುಭೂತಿ’ ಆಗಿ ಪರಿವರ್ತಿತರಾದರು.

1978ರಲ್ಲಿ ಅಸ್ತಿತ್ವಕ್ಕೆ ಬಂದ ‘ತ್ರೈಲೋಕ್ಯ ಬೌದ್ಧ ಮಹಾಸಂಘ ಸಹಾಯಕ ಗಣ’ದ ಮೂಲಕ ಸುಭೂತಿ ಧಮ್ಮ ತತ್ವ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಸಂಘರಕ್ಷಿತ’, ‘ಎ ನ್ಯೂ ವಾಯ್ಸಿ ಇನ್ ಬುದ್ಧಿಸ್ಟ್ ಟ್ರಡಿಷನ್’, ‘ಹೌ ಟು ಲಿವ್ ದಿ ಬುದ್ಧಿಸ್ಟ್ ಲೈಫ್’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಗುಲ್ಬರ್ಗದ ಬುದ್ಧ ವಿಹಾರದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಧಮ್ಮಕ್ರಾಂತಿ ಮಹಾಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು ‘ಪ್ರಜಾವಾಣಿ’ ಜತೆಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು.

* ನಿಮ್ಮ ಕೌಟುಂಬಿಕ ಹಿನ್ನೆಲೆ ಮತ್ತು ಧರ್ಮಾಂತರಕ್ಕೆ ಕಾರಣ?
ನಾನು ಹುಟ್ಟಿದ್ದು ಕ್ರೈಸ್ತ ಧರ್ಮೀಯನಾಗಿ. ತಂದೆ ಸ್ವಿಟ್ಜರ್ಲೆಂಡ್ ಮೂಲದವರು. ತಾಯಿ ನ್ಯೂಜಿಲೆಂಡ್ ಮೂಲದವರು. ನೆಲೆಸಿದ್ದು ಲಂಡನ್ ಸಮೀಪದ ಚಟಮ್‌ನಲ್ಲಿ.

‘ಎಲ್ಲದಕ್ಕೂ ದೇವರೇ ಕಾರಣ’ ಎಂಬುದು ಕ್ರೈಸ್ತರ ನಂಬಿಕೆ. ನನಗೆ ದೇವರಲ್ಲಿ ನಂಬಿಕೆ ಬರುತ್ತಿರಲಿಲ್ಲ. ಅಲ್ಲದೆ ಆ ಧರ್ಮದಲ್ಲಿನ ಕೆಲವು ಕಂದಾಚಾರಗಳು ನನಗೆ ಸರಿ ಅನಿಸಲಿಲ್ಲ. ಪದವಿ ಮುಗಿಸುವ ವೇಳೆಗೆ ನನ್ನ ಚಿಂತನೆಗಳು ಮತ್ತಷ್ಟು ಸ್ಪಷ್ಟವಾದವು. ‘ಬಿಬಿಸಿ ರೇಡಿಯೋ’ದಲ್ಲಿ ಒಮ್ಮೆ ಉರ್ಗೇನ್ ಸಂಘರಕ್ಷಿತ ಅವರ ಬೌದ್ಧ ಉಪನ್ಯಾಸ ಕೇಳಿ ಪ್ರಭಾವಿತನಾದೆ. ಲಭ್ಯವಿದ್ದ ಬೌದ್ಧ ಸಾಹಿತ್ಯವನ್ನು ಓದಿದೆ. ಉರ್ಗೇನ್ ಅವರನ್ನು ಭೇಟಿಯಾಗಿ ಅನುಯಾಯಿ ಆದೆ. ಟೇಲರ್ ಆಗಬೇಕೆಂಬ ಕನಸು ಕಂಡಿದ್ದೆ. ಈಗ ಧಮ್ಮ ಪ್ರಚಾರಕನಾಗಿ ಇಲ್ಲಿ ಬಂದಿದ್ದೇನೆ. ಅದಕ್ಕೆ ಅಡ್ಡಿ ಆಗಬಾರದು ಎಂದು ಬ್ರಹ್ಮಚಾರಿ ಆಗೇ ಉಳಿದಿದ್ದೇನೆ.

* ಮತಾಂತರದ ಬಗ್ಗೆ ಪಶ್ಚಿಮದ ರಾಷ್ಟ್ರಗಳು ಮತ್ತು ಭಾರತದಲ್ಲಿ ಇರುವ ವ್ಯತ್ಯಾಸ?
ಧರ್ಮಾಂತರ ಎಲ್ಲ ಕಡೆ ಇದೆ. ಪಶ್ಚಿಮದ ರಾಷ್ಟ್ರಗಳಲ್ಲಿ ವ್ಯಕ್ತಿಗತ ಆಸಕ್ತಿ, ತಾತ್ವಿಕ ಭಿನ್ನಾಭಿಪ್ರಾಯ, ಮಾನಸಿಕ ನೆಮ್ಮದಿ, ಆಚರಣೆಯಲ್ಲಿನ ಅಪನಂಬಿಕೆಯಿಂದ ಜನ ಮತಾಂತರ ಆಗುತ್ತಾರೆ. ಭಾರತದಲ್ಲಿ ಹಾಗಲ್ಲ. ಜಾತೀಯತೆ, ಅಸ್ಪೃಶ್ಯತೆ, ಶೋಷಣೆಗಳಿಂದ ಬೇಸತ್ತು ಧರ್ಮಾಂತರಗಳು ಆಗುತ್ತಿವೆ.

* ಹಿಂದೂ ಧರ್ಮದ ಬಗ್ಗೆ ನೀವು ಏನು ತಿಳಿದುಕೊಂಡಿದ್ದೀರಿ, ಅದರ ಬಗ್ಗೆ ಅಭಿಪ್ರಾಯವೇನು?
ವೇದ, ಉಪನಿಷತ್ತು, ಭಗವದ್ಗೀತೆಗಳನ್ನು ಓದಿದ್ದೇನೆ. ಅಲ್ಲಿ ಅನೇಕ ಉತ್ತಮ ಅಂಶಗಳಿವೆ. ಆದರ, ಸತ್ಕಾರ, ಭಕ್ತಿ, ಧ್ಯಾನಗಳು ತುಂಬ ಹಿಡಿಸಿವೆ. ಆದರೆ, ಜಾತೀಯತೆ, ಅಸ್ಪೃಶ್ಯತೆ, ಮಹಿಳೆಯರ ಶೋಷಣೆಗಳನ್ನು ಸಹಿಸಲಾಗದು. ಇವು ತೊಲಗಿದಲ್ಲಿ ಭಾರತ ಅತ್ಯಂತ ಸುಂದರ ರಾಷ್ಟ್ರವಾಗುವುದು.

ಸೂಫಿ ಸಂತರು ಹಾಗೂ ಭಕ್ತಿ ಚಳವಳಿಯ ಕಬೀರ, ತುಳಸಿದಾಸ, ರವಿದಾಸ, ರಮಣ ಮಹರ್ಷಿ ಮತ್ತಿತರರ ಕೃತಿಗಳನ್ನು ಓದಿದ್ದೇನೆ. ಇನ್ನು ಹಲವು ಸುಧಾರಕರ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ.

* ಕ್ರೈಸ್ತ ಧರ್ಮದಲ್ಲಿ ಕಂದಾಚಾರಗಳು ಇವೆ ಎಂದಿದ್ದೀರಿ. ಆದಾಗ್ಯೂ ಅದು ಇಷ್ಟೊಂದು ವಿಶಾಲವಾಗಿ ಬೆಳೆಯುತ್ತಿರುವುದು ಹೇಗೆ?
ಇದು ತೀರ ಗಂಭೀರವಾದ ಪ್ರಶ್ನೆ. ನನ್ನಂತೆಯೇ ಅನೇಕರಿಗೆ ಕ್ರೈಸ್ತ ಧರ್ಮ ಹಿಡಿಸುತ್ತಿಲ್ಲ. ಆದರೂ ಅದು ಬೆಳೆದಿದೆ. ಇದಕ್ಕೆ ಮುಖ್ಯ ಕಾರಣ ಚರ್ಚ್‌ಗಳಿಗೆ ಸಿಕ್ಕಿರುವ ರಾಜಾಶ್ರಯ. ಮಧ್ಯಕಾಲೀನ ಅವಧಿಯಲ್ಲಿ ಹೊಸ ಹೊಸ ವಸಾಹಾತುಗಳನ್ನು ಸ್ಥಾಪಿಸಿದ ಯುರೋಪಿನ ರಾಷ್ಟ್ರಗಳು ‘ಮೊದಲು ಖಡ್ಗ ನೆಡು, ನಂತರ ಕ್ರಾಸ್ ನೆಡು’ ಎಂಬ ನೀತಿ ಅನುಸರಿಸಿದವು. ಪೈಸೆ, ಪೌಂಡ್, ಡಾಲರ್ ಬಳಸಿ ಪ್ರಚಾರ ಮಾಡಿದವು. ಯಾರು ಏನೇ ಹೇಳಲಿ; ಈಗಲೂ ಕೆಲವು ಕ್ರೈಸ್ತ ಮಿಶನರಿಗಳು ಮಾಡುತ್ತಿರುವುದು ಇದನ್ನೆ.

* ಒತ್ತಾಯದ ಮತಾಂತರಕ್ಕೆ ನಿಮ್ಮ ಅಭಿಪ್ರಾಯ
ಧರ್ಮ, ಮಾರಾಟದ ಇಲ್ಲವೆ ಖರೀದಿಸುವ ಸರಕಲ್ಲ. ಆಸೆ ತೋರಿಸಿ, ಸಮ್ಮೋಹನಗೊಳಿಸಿ ಧರ್ಮ ಪ್ರಚಾರ ಮಾಡುವುದು ಸರಿಯಲ್ಲ. ಎಲ್ಲಕ್ಕೂ ಹೆಚ್ಚಾಗಿ ಜನ ಮೂರ್ಖರಾಗಬಾರದು ಎಂಬುದು ನನ್ನ ಸಲಹೆ. ನೋಡಿ ತಿಳಿಯಬೇಕು; ಸರಿ ಅನಿಸಿದರೆ ಸ್ವೀಕರಿಸಬೇಕು. ಮೌರ್ಯ ಸಾಮ್ರಾಟ ಅಶೋಕನೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಖಡ್ಗದಿಂದ ಗೆಲ್ಲಲಾಗದನ್ನು ಆತ ಧರ್ಮದಿಂದ ಗೆದ್ದಿದ್ದ.

* ಅಂಬೇಡ್ಕರ್ ಮತಾಂತರದ ನಂತರ ಬೌದ್ಧ ಧರ್ಮ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೀಮಿತ ಧರ್ಮ ಆಗುತ್ತಿದೆಯೇ?
ಈ ಹೇಳಿಕೆಯಲ್ಲಿ ಸ್ವಲ್ಪ ಸತ್ಯಾಂಶವಿದೆ. ಡಾ. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ನಂತರ ಪರಿಶಿಷ್ಟ ಜಾತಿಯ ಲಕ್ಷಾಂತರ ಜನ ಸಾಮೂಹಿಕವಾಗಿ ಮತಾಂತರ ಹೊಂದಿದ್ದರು. ಇದರಿಂದ ಮೇಲ್ವರ್ಗದ ಹಿಂದೂ ಜನ ಈ ಧರ್ಮದ ಬಗ್ಗೆ ತಾತ್ಸಾರ ಭಾವನೆ ತಾಳಿದರು. ಈ ಹಿಂದೆ ರಾಷ್ಟ್ರದ ಅನೇಕ ವಿಶ್ವವಿದ್ಯಾಲಯಗಳಲ್ಲಿ ವಿದ್ವಾಂಸರು ಬೌದ್ಧ ಧರ್ಮದ ಬಗ್ಗೆ ಆಸಕ್ತಿಯಿಂದ ಸಂಶೋಧನೆ ಕೈಗೊಳ್ಳುತ್ತಿದ್ದರು. ಅಂಬೇಡ್ಕರ್ ಧರ್ಮಾಂತರದ ನಂತರ ಇದು ಕಡಿಮೆ ಆಯಿತು. ಈಗ ಪರಿಸ್ಥಿತಿ ತಿಳಿಯಾಗುತ್ತಿದೆ. ದೇಶದ ಬಹುತೇಕ ಕಡೆ ಬೌದ್ಧ ಅವಶೇಷಗಳು ಪತ್ತೆಯಾಗುವಂತೆಯೇ ಇಲ್ಲಿಯ ಜನರ ಮನಸ್ಸುಗಳಲ್ಲಿಯೂ ಬೌದ್ಧ ಧರ್ಮದ ಆದರ್ಶಗಳಿವೆ. ಅದರ ಮೇಲೆ ಆವರಿಸಿರುವ ಪದರು ಸರಿಸುವ ಕೆಲಸ ಆಗಬೇಕಿದೆ.

* ಧರ್ಮ ಮತ್ತು ಮೂರ್ತಿ ಪೂಜೆ ಕುರಿತು ನಿಮ್ಮ ವಿಶ್ಲೇಷಣೆ?
ಇಸ್ಲಾಂ ಮಾತ್ರ ಮೂರ್ತಿ ಪೂಜೆಯನ್ನು ಪೂರ್ಣವಾಗಿ ಅಲ್ಲಗಳೆದ ಧರ್ಮ. ಉಳಿದ ಪ್ರಮುಖ ಧರ್ಮಗಳಲ್ಲಿ ಮೂರ್ತಿ ಪೂಜೆ ಒಂದಲ್ಲ ಒಂದು ಬಗೆ ಚಾಲ್ತಿಯಲ್ಲಿದೆ. ಕ್ರೈಸ್ತರು ಸಂತರ ಪ್ರತಿಮೆಗಳನ್ನು ಪ್ರತಿಷ್ಠಾಪಿಸುತ್ತಾರೆ. ಹಿಂದೂಗಳು ಪೌರಾಣಿಕ ದೇವತೆಗಳು ಸೆರಿದಂತೆ ಧಾರ್ಮಿಕ, ಸಾಮಾಜಿಕ ಸುಧಾರಕರ ಪ್ರತಿಮೆಗಳನ್ನು ಪೂಜಿಸುತ್ತಾರೆ. ಬೌದ್ಧರು ಸಹ ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಆದರೆ ಒಂದು ವ್ಯತ್ಯಾಸ ಎಂದರೆ ಬೌದ್ಧರಲ್ಲಿ ಮೂರ್ತಿ ದೇವರಲ್ಲ; ಅದು ಪ್ರೇರಣಾ ಶಕ್ತಿ ಮಾತ್ರ. ಬುದ್ಧ ಕೇವಲ ಮಾರ್ಗದಾತ; ಮೋಕ್ಷದಾತನಲ್ಲ. ಇದುವೇ ಬುದ್ಧ ಧಮ್ಮದ ಸೌಂದರ್ಯ ಕೂಡ.

* ಧರ್ಮ- ಧರ್ಮಗಳ ಮಧ್ಯದ ದ್ವೇಷ ನಿವಾರಣೆ ಹೇಗೆ?
ಎಲ್ಲ ಕಲಹಗಳಿಗೂ ಮನುಷ್ಯನ ಮನಸ್ಸೇ ಕಾರಣ. ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಮನಸ್ಸುಗಳ ಪರಿವರ್ತನೆ ಆಗಬೇಕು. ಬುದ್ಧ ಇದನ್ನೇ ಹೇಳಿದ್ದಾನೆ. ಆಚರಣೆಗಳಲ್ಲಿ ಭಿನ್ನತೆ ಇದ್ದ ಮಾತ್ರಕ್ಕೆ ದ್ವೇಷ ಸಾಧಿಸುವ ಅಗತ್ಯವಿಲ್ಲ. ಒಂದೇ ಧರ್ಮೀಯರಾಗಿ ಬಾಳಲು ಆಗದಿರಬಹುದು; ಸ್ನೇಹಿತರಾಗಿ ಉಳಿಯಲು ಏನು ಕಷ್ಟ? ನಾನು ಬೌದ್ಧ ಧರ್ಮ ಪ್ರಚಾರಕ, ನನ್ನ ಸಹೋದರ ಕ್ರೈಸ್ತ ಪಾದ್ರಿ. ನನ್ನ ಅನೇಕ ಸ್ನೇಹಿತರು ಕ್ರೈಸ್ತರು. ನಮ್ಮ ವಿಚಾರಗಳು ಬೇರೆ ಬೇರೆ. ಆದರೆ ನಾವೆಂದೂ ಜಗಳ ಆಡುವುದಿಲ್ಲ. ಎಲ್ಲರೂ ಹೀಗೇ ಇರಬೇಕು ಎಂಬುದು ನನ್ನ ಆಶಯ.

source :prajavani Jan/10/2010


ಸಾಂಚಿಯ ಬೌದ್ಧ ಸ್ಮಾರಕಗಳು

09/07/2010

ಸಾಂಚಿಯ ಬೌದ್ಧ ಸ್ಮಾರಕಗಳು*
UNESCO ವಿಶ್ವ ಪರಂಪರೆಯ ತಾಣ ಸಾಂಚಿಯ ಮಹಾ ಸ್ತೂಪ ರಾಷ್ಟ್ರ
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ ಘೋಷಿತ ವರ್ಷ 1989 (13ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

Sanchi_Stupa_from_Eastern_gate,_Madhya_Pradesh

ಸಾಂಚಿಯ ಬೌದ್ಧ ಸ್ಮಾರಕಗಳು ಭಾರತದ ಮಧ್ಯ ಪ್ರದೇಶ ರಾಜ್ಯದ ರಾಯ್‌ಸೇನ್ ಜಿಲ್ಲೆಯಲ್ಲಿವೆ. ಭೋಪಾಲದಿಂದ ೪೬ ಕಿ.ಮೀ. ದೂರದಲ್ಲಿರುವ ಸಾಂಚಿ ಗ್ರಾಮದಲ್ಲಿ ಹಲವು ಬೌದ್ಧ ಸ್ಮಾರಕಗಳಿದ್ದು ಇವುಗಳ ನಿರ್ಮಾಣಕಾಲವು ಕ್ರಿ.ಪೂ. ೩ನೆಯ ಶತಮಾನದಿಂದ ಕ್ರಿ.ಶ. ೧೨ನೆಯ ಶತನಮಾನದವರೆಗೆ. ಇಲ್ಲಿನ ಸ್ತೂಪಗಳಿಗೆ ಶಿಲಾತೋರಣಗಳಿದ್ದು ಅವು ಪ್ರೇಮ, ಶಾಂತಿ, ವಿಶ್ವಾಸ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತವೆ. ಸಾಂಚಿಯ ಮಹಾಸ್ತೂಪವನ್ನು ಅಶೋಕ ಚಕ್ರವರ್ತಿಯು ನಿರ್ಮಿಸಿದನು.


ಬೌದ್ಧ ಧರ್ಮಕ್ಕೆ 10,000 ದಲಿತರ ಮತಾಂತರ

09/07/2010

ಭೂಪಾಲ್, ಶನಿವಾರ, 11 ಅಕ್ಟೋಬರ್ 2008 ( 19:23 IST )
ಬುದ್ಧ ಜಯಂತಿಯ ದಿನವಾದ ಶುಕ್ರವಾರ ಮಧ್ಯಪ್ರದೇಶದ ಪುಕಾರಣ್ಯ ಗ್ರಾಮ ಸಮೀಪದ ಕಾನ್ಪುರದಲ್ಲಿ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಮಾತಾ ಪ್ರಸಾದ್, ಆಚಾರ್ಯ ಸಂದೇಶ್ ಭಾಲೆಕಾರ್ ಸೇರಿದಂತೆ ಹಲವು ಬೌದ್ಧ ಭಿಕ್ಷುಗಳ ಸಮ್ಮುಖದಲ್ಲಿ 10 ಸಾವಿರ ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು.

ಪುಕಾರಣ್ಯ ಗ್ರಾಮದ ಕಾನ್ಪುರದಲ್ಲಿ ನಡೆದ ಬೌದ್ಧ ಧರ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಈ ಮತಾಂತರ ಪ್ರಕ್ರಿಯೆ ನಡೆಯಿತು.ಇಂದಿನಿಂದ ನಾವು ಶ್ರೀರಾಮ ಸೇರಿದಂತೆ ಯಾವುದೇ ಹಿಂದೂ ದೇವ-ದೇವತೆಗಳನ್ನು ಪೂಜಿಸುವುದಿಲ್ಲ. ಆ ನಿಟ್ಟಿನಲ್ಲಿ ನಾವು ಕೇವಲ ಬುದ್ಧನ ತತ್ವಗಳನ್ನು ಮಾತ್ರ ಅನುಸರಿಸುತ್ತೇವೆ. ಇದು ನಮಗೆ ಮರುಜನ್ಮ ನೀಡಿದಂತಾಗಿದೆ ಎಂದು ರೂರಾ ಗ್ರಾಮದ ಶಾಕುಂತಲಾ ಕಮಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬೃಹತ್ ಸಮಾರಂಭದಲ್ಲಿ ಭಾರತೀಯ ದಲಿತ್ ಪ್ಯಾಂಥರ್ ಪಕ್ಷದ ಅಧ್ಯಕ್ಷ ಧಾನಿ ರಾವ್ ಅವರು ಭಾಗವಹಿಸಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನ, ವಿಚಾರಧಾರೆಯನ್ವಯ ಬೌದ್ಧ ದೀಕ್ಷೆ ಕಾರ್ಯಕ್ರಮ ನಡೆಸಲಾಗಿದೆ ಎಂದು ಹೇಳಿದರು.
(ಮೂಲ – ವೆಬ್‌ದುನಿಯಾ)