ಡಾ. ಅಂಬೇಡ್ಕರ್ ಮಾರ್ಗದರ್ಶನದಲ್ಲಿ ಸಾಮಾಜಿಕ ಅಭಿವೃದ್ಧಿ: ಸಚಿವ ಪಾಲೆಮಾರ್ Ambedkar Jayanti in Mangalore

10/09/2010

ಮಂಗಳೂರು,ಏ.14: ಸಂವಿಧಾನಶಿಲ್ಪಿ, ಸಾಮಾಜಿಕ ಪರಿವರ್ತನೆಯ ಹರಿಕಾರರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿದ ಮಾರ್ಗದರ್ಶನದಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದ್ದು, ಸಮಾನತೆಯ ನವಸಮಾಜ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಹೇಳಿದರು.

ಇಂದು ನಗರದ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ ಡಾ.ಬಿ. ಆರ್.ಅಂಬೇಡ್ಕರ್ ಅವರ 119ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿಂದುಳಿದವರ ಅಭಿವೃದ್ಧಿಗಾಗಿರುವ ಇಲಾಖೆ ಹಾಗೂ ಮಹಾನಗರಪಾಲಿಕೆ ಮುಖಾಂತರ ಹಿಂದುಳಿದವರ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಹಾಗೂ ಫಲಾನುಭವಿಗಳ ವಿವರವನ್ನು ಸಚಿವರು ನೀಡಿದರಲ್ಲದೆ, ದೇಶವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಲು ಹಾದಿ ತೋರಿದ ಮಾನವತವಾದಿ ಅಂಬೇಡ್ಕರ್ ಅವರನ್ನು ಸ್ಮರಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಸದಸ್ಯರಾದ ಎನ್ ಯೋಗೀಶ್ ಭಟ್ ಅವರು, ರಾಷ್ಟ್ರೀಯ ಚಿಂತನೆ ಇಂದಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎಂದರು. ಸರ್ಕಾರ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಭಾಗ್ಯಲಕ್ಷ್ಮಿಯಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು ಜನಪರ ಯೋಜನೆಗಳಿಂದಾಗುವ ಸಮಾಜಮುಖಿ ಪರಿವರ್ತನೆಯನ್ನು ಗುರುತಿಸಬೇಕೆಂದರು. ಅಗತ್ಯಕ್ಕೆ ಪೂರಕವಾಗಿ ಯೋಜನೆ ರೂಪಿಸುವುದನ್ನು ಪ್ರತಿಪಾದಿಸಿದ ಅವರು, ನಗರದಲ್ಲಿ ಸಾಕಷ್ಟು ಸಾಮಾಜಿಕ ಪರಿವರ್ತನೆ ಹಾಗೂ ಅಭಿವೃದ್ಧಿ ಸಾಧ್ಯವಾಗಿದೆ ಎಂದು ನುಡಿದರು. ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರು ಹಾಗೂ ನಿರ್ದೇಶಕರು ಗಾಂಧಿ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ.ಎಲ್.ಧರ್ಮ ಅವರು ಮುಖ್ಯ ಭಾಷಣಕಾರರಾಗಿದ್ದರು. ಮಂಗಳೂರು ವಿಧಾನಸಭಾ ಶಾಸಕ ಯು.ಟಿ ಖಾದರ್ ಮಾತನಾಡಿದರು. ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ.ಸಂತೋಷ್ ಕುಮಾರ್ ಭಂಡಾರಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಮಹಾಪೌರರಾದ ರಜನಿ ದುಗ್ಗಣ್ಣ, ಉಪ ಮಹಾಪೌರ ರಾಜೇಂದ್ರ ಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷ ರಾಮಚಂದ್ರ ಕುಂಪಲ, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಸಿಇಒ ಪಿ.ಶಿವಶಂಕರ್, ಮನಾಪ ಆಯುಕ್ತ ವಿಜಯಪ್ರಕಾಶ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೃಷಿ ಪಂಡಿತ ಮಹಾಲಿಂಗ ನಾಯ್ಕ ಕೇಪು ಮತ್ತು ಭೂತಾ ರಾಧನೆಯಲ್ಲಿ ವಿಶಿಷ್ಟತೆಯನ್ನು ಸಾಧಿಸಿರುವ ಲೋಕಯ್ಯ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಅನೂಷಾ, ಕೌಷಿಕ್ ಎಸ್., ಲಾವಣ್ಯ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾನೂನು ಪದವೀಧರರಿಗೆ ಶಿಷ್ಯ ವೇತನ,ಪ್ರವಾಸೋದ್ಯಮ ಇಲಾಖಾ ವತಿಯಿಂದ ಟ್ಯಾಕ್ಸಿ ಖರೀದಿಗೆ ನೆರವು,ಮೀನುಗಾರಿಕೆ ಇಲಾಖೆಯಿಂದ ನೆರವು ಹಾಗೂ ಬಲೆ ವಿತರಿಸಲಾಯಿತು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ರೆಡ್ಡಿ ನಾಯಕ್ ವಂದಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಅಗ್ನಿಶಾಮಕ ದಳದ ವತಿಯಿಂದ ಪ್ರಾತ್ಯಕ್ಷಿಕೆ ಏರ್ಪಡಿಸಲಾಯಿತು

ಅಂಬೇಡ್ಕರ್ ಜಯಂತಿ ದಿನ ಮಾಂಸ ಮಾರಾಟ ನಿಷೇಧ! ಅಂಬೇಡ್ಕರರಿಗೂ ಜನಿವಾರ

10/09/2010

ಪ್ರಕಟಿಸಿದ ದಿನಾಂಕ : 2009-04-20 @ gulfnewss

ಮೊನ್ನೆಯ ಏಪ್ರಿಲ್ ೧೪ರಂದು ಸರ್ಕಾರದ ಆದೇಶದ ಮೇರೆಗೆ ಸ್ಥಳೀಯ ಸಂಸ್ಥೆಗಳ ಆಯುಕ್ತರುಗಳು ಆದೇಶವನ್ನು ಹೊರಡಿಸಿ ಅಂಬೇಡ್ಕರ್ ಜಯಂತಿ ದಿನದಂದು ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ. ಇದುವರೆಗೂ ಗಾಂಧಿ ಜಯಂತಿ ದಿನ ಈ ಮಾಂಸ ಮಾರಾಟ ನಿಷೇಧಿಸಲಾಗುತ್ತಿತ್ತು. ಇದರ ಮೂಲ ಎಲ್ಲಿಯದು ಎಂದು ಗೊತ್ತಿಲ್ಲ.

ಬಹುಶಃ ಗಾಂಧಿಯವರು ಅಹಿಂಸೆಯ ಜೊತೆಗೆ ಸಾತ್ವಿಕ ಆಹಾರ ಸೇವಿಸಬೇಕು ಎಂಬುದನ್ನೂ ಪ್ರತಿಪಾದಿಸುತ್ತಿದ್ದುದರಿಂದ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಲು ಹೀಗೆ ಮಾಡಿರಬಹುದು ಅನಿಸುತ್ತಿದೆ. ಆದರೆ ಅಂಬೇಡ್ಕರ್ ಜಯಂತಿಯ ದಿನ ಮಾಂಸಾಹಾರ ನಿಷೇಧ ಯಾವಾಗಿನಿಂದ ಪ್ರಾರಂಭವಾಯಿತು ಎಂಬುದು ಗೊತ್ತಾಗುತ್ತಿಲ್ಲ. ಒಂದಂತೂ ಸ್ಪಷ್ಟ. ಅಂಬೇಡ್ಕರ್‌ರನ್ನು ರಾಷ್ಟ್ರನಾಯಕರ ಸಾಲಿನಲ್ಲಿ ಗೌರವಿಸಲು ಈ ಸರ್ಕಾರ ಪ್ರಾರಂಭಿಸಿದ್ದೇ ದಲಿತ ಚಳುವಳಿಯ ಉನ್ನತಿಯೊಂದಿಗೆ. ಹಾಗಾಗಿ ಮತ್ತು ಇದುವರೆಗೂ ನಾವು ಅಂಬೇಡ್ಕರ್ ಜಯಂತಿಯ ದಿನ ಮಾಂಸಾಹಾರ ನಿಷೇಧದ ಬಗ್ಗೆ ಕೇಳಿಯೇ ಇಲ್ಲ ಎಂದರೆ ಈ ಸಂಪ್ರದಾಯ ಇತ್ತೀಚೆಗೆ ಹೊಸದಾಗಿ ಶುರುವಾಗಿದ್ದೆಂಬುದಂತೂ ಸ್ಪಷ್ಟ. ಅದೂ ಅಲ್ಲದಿದ್ದರೆ, ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಶುರು ಮಾಡಿರುವುದಂತೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆಯೇ.

ಇಂತಹ ನಿಷೇಧದ ಆದೇಶವನ್ನು ಹೊರಡಿಸಿದ ಮಂಡ್ಯ ನಗರಸಭೆಯ ಆಯುಕ್ತರನ್ನು ಕೇಳಿದರೆ ಇದು ಸರ್ಕಾರದ ಆದೇಶ. ಹಿಂದಿನಿಂದಲೂ ಮಾಡುತ್ತಾ ಬಂದಿದ್ದೇವೆ ಎಂಬ ಉತ್ತರ ಬಂದಿತು. ಅಷ್ಟು ಮಾತ್ರವಲ್ಲದೆ ಅವರ ಪ್ರಕಾರ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರಿಂದ ಈ ರೀತಿಯ ಕ್ರಮ ಎಂಬ ಸ್ಪಷ್ಟೀಕರಣವನ್ನೂ ಸೇರಿಸಿದರು.

ನೆಹರೂ ಹುಟ್ಟಿದ ದಿನ, ಸ್ವಾತಂತ್ರ್ಯದ ದಿನಗಳಲ್ಲಂತೂ ಈ ಕ್ರಮ ಮಾಡುತ್ತಿಲ್ಲವಾದ್ದರಿಂದ ಅಂಬೇಡ್ಕರ್‌ರ ಬೌದ್ಧ ಧರ್ಮ ಸ್ವೀಕಾರದ ನೆಪ ಹಿಡಿದೇ ನಿಷೇಧಕ್ಕೆ ಮುಂದಾಗಿರಬೇಕು. ಬಹುಶಃ ಮಹಾವೀರ ಜಯಂತಿ, ಬಸವ ಜಯಂತಿ ಈ ರೀತಿ ನೂರಾರು ಮಹನೀಯರ ಹುಟ್ಟಿದ ದಿನದ ನೆಪ ಹಿಡಿದು ಮಾಂಸಾಹಾರ ಬಹುತೇಕ ನಿಷಿದ್ಧವೇ ಆಗಿಬಿಡ ಬಹುದಲ್ಲವೇ? ಅದರಲ್ಲೂ ಅಂಬೇಡ್ಕರ್ ಜಯಂತಿಯ ದಿನದಂದು ನಿಷೇಧ ಮಾಡಿರುವ ಅಂಶವನ್ನೇ ಪರಿಶೀಲಿಸೋಣ.

ಹಾಗೆ ನೋಡಿದರೆ ಭಾರತದ ದಲಿತ ಸಮುದಾಯಕ್ಕೆ ತಿನ್ನಲು ನಿಷಿದ್ಧವಾದ ಯಾವುದೇ ಪ್ರಾಣಿಯಿಲ್ಲ. ಒಂದೊಂದು ಪ್ರಾಣಿಗೆ ಒಂದೊಂದು ಕಾರಣವನ್ನು ಆರೋಪಿಸಿ ತಿನ್ನದಿರುವ ಇತರ ಜಾತಿ/ಧರ್ಮಗಳ ಹಿಪಾಕ್ರಸಿಯನ್ನು ದಲಿತ ಸಮುದಾಯ ಇಟ್ಟುಕೊಂಡಿಲ್ಲ ಎಂದಷ್ಟೇ ಇದನ್ನು ನೋಡಬಹುದು.

ಅಂಬೇಡ್ಕರ್ ಜಯಂತಿಯೆನ್ನುವುದು ಸಹಜವಾಗಿಯೇ ದಲಿತ ಸಮುದಾಯಕ್ಕೆ ಒಂದು ರೀತಿಯ ಹಬ್ಬದ, ಹೋರಾಟದ ಛಲವನ್ನು ಬಡಿದೆಬ್ಬಿಸುವ, ಆತ್ಮಾವಲೋಕನದ, ದನಿ ಕೊಟ್ಟು ಮಹಾನ್ ಚೇತನವನ್ನು ನೆನೆಯುವ ………….. ಹೀಗೆ ಹತ್ತು ಹಲವು ಕಾರಣಗಳಿಂದ ಮಹತ್ವದ ದಿನ. ಸಮಸಮಾಜದ ಕನಸು ಕಾಣುವ ಎಲ್ಲಾ ಜಾತಿ / ವರ್ಗಗಳ ಜನರಿಗೂ ಅಂಬೇಡ್ಕರ್‌ರು ಗೌರವಾರ್ಹರು. ಆಹಾರ ಪದ್ಧತಿಯಲ್ಲಿನ ಆಷಾಢಭೂತಿತನವನ್ನು ಮೀರಿದ ದಲಿತ ಸಮುದಾಯಕ್ಕೆ ಸೇರಿದ ಅಂಬೇಡ್ಕರ್‌ರ ಹುಟ್ಟಿದ ದಿನ ಮಾಂಸಾಹಾರ ನಿಷೇಧವೆಂಬ ಕ್ರಮ ಏಕೆ?

ಇದನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಾರಂಭಿಸಲಾಯಿತೋ ಇಲ್ಲವೋ ನೋಡಬೇಕು. ಆದರೆ ಈ ಕ್ರಮದ ಹಿಂದಿನ ಮನಸ್ಥಿತಿ ಮಾತ್ರ ಪುರೋಹಿತಶಾಹಿ ಮನಸ್ಸು ಎಂಬುದಂತೂ ಸತ್ಯ. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ್ದರಿಂದಲೇ ಇದನ್ನು ಮಾಡಲಾಗಿದೆ ಎಂದಾದರೆ, ಸ್ವತಃ ಬುದ್ಧ ಮಾಂಸಾಹಾರಿಯಾಗಿದ್ದ ಎಂಬುದನ್ನು ನೆನಪಿನಲ್ಲಿಡಬೇಕು. ಹಿಂಸೆಯನ್ನು, ಪ್ರಾಣಿವಧೆಯನ್ನು ಬಿಡಬೇಕೆಂದು ಬುದ್ಧ ಹೇಳಿದ್ದು ನಿಜ. ಆದರೆ ತನ್ನ ಕಟ್ಟಕಡೆಯ ದಿನದಂದೂ ಬುದ್ಧ ಮಾಂಸವನ್ನು ತಿಂದ ಎಂಬುದು ಬುದ್ಧನ ಚರಿತ್ರೆಯಲ್ಲಿ ದಾಖಲಾಗಿರುವ ಸಂಗತಿ. ಬುದ್ಧನ ಕುರಿತು ವಿಶೇಷ ಪ್ರೀತಿ ಮತ್ತು ಅಧ್ಯಯನ ಎರಡೂ ಇರುವ ಹಿರಿಯರಾದ ಸಿ.ಎನ್.ಶೆಟ್ಟಿ ಮತ್ತು ಅಧ್ಯಾಪಕ ವಡ್ಡಗೆರೆ ನಾಗರಾಜಯ್ಯನವರು ಇದರ ಕುರಿತ ಸ್ವಾರಸ್ಯಕರವಾದ ಸಂಗತಿಯನ್ನು ಹೇಳಿದರು.

೮೦ಕ್ಕೂ ಹೆಚ್ಚು ವಯಸ್ಸಿನ ಬುದ್ಧ ತನ್ನ ಶಿಷ್ಯರೊಂದಿಗೆ ಸುಜಾತ ಎಂಬುವವಳಿಂದ ಅಂಬಲಿಯನ್ನು ಸ್ವೀಕರಿಸುತ್ತಾರೆ. ಆ ನಂತರ ಬೇಧಿಯಿಂದ ಬಳಲುತ್ತಿರುವಾಗಲೇ ಚುಂದನೆಂಬ ಕೆಳಜಾತಿಯ ವ್ಯಕ್ತಿಯೊಬ್ಬ (?ಚಮ್ಮಾರ) ಅತ್ಯಂತ ಪ್ರೀತಿಯಿಂದ ಬುದ್ಧನನ್ನು ಊಟಕ್ಕೆ ಆಹ್ವಾನಿಸುತ್ತಾರೆ. ಅಲ್ಲಿ ಆತ ಬುದ್ಧನಿಗೆ ಸೂಕರ ಮಾಂಸ (ಇದಕ್ಕೆ ಹಂದಿ ಮಾಂಸ ಎಂತಲೂ, ಹಳಸಿದ ಮಾಂಸವೆಂತಲೂ ವ್ಯಾಖ್ಯಾನವಿದೆ) ವನ್ನು ಬಡಿಸುತ್ತಾನೆ. ಅದನ್ನು ತಿಂದು ಮುಂದೆ ಸಾಗುವ ಬುದ್ಧ ಅಂದೇ ಮಹಾಪರಿನಿರ್ವಾಣ ಗೈಯ್ಯುತ್ತಾರೆ. ಪ್ರಾಣಿವಧೆಯನ್ನು ಮಾಡಬಾರದೆಂದು ಹೇಳುವ ಬುದ್ಧ ಭಿಕ್ಷಾನ್ನವಾಗಿ ಬಂದ ಮಾಂಸಾಹಾರವೂ ಶ್ರೇಷ್ಠ ಎಂದು ಹೇಳಿದ್ದಾರೆ. ಇವೆರಡರ ನಡುವೆ ವೈರುಧ್ಯವಿದೆಯೆಂದು ಕಾಣುತ್ತದಾದರೂ, ಬೌದ್ಧರೇ ಪ್ರಧಾನವಾಗಿರುವ ದೇಶಗಳಲ್ಲಿ ಮಾಂಸಾಹಾರ ನಿಷೇಧವಾಗಿಲ್ಲ ಎಂಬುದಂತೂ ಸತ್ಯ. ಬೌದ್ಧಧರ್ಮವು ಜೈನಧರ್ಮ ದಷ್ಟು ಈ ವಿಚಾರದಲ್ಲಿ ಕಟ್ಟುನಿಟ್ಟಾಗಿಲ್ಲ.

ವಾಸ್ತವದಲ್ಲಿ ಬುದ್ಧ ಯಾವ ಕಾಲಘಟ್ಟದಲ್ಲಿ ಹಿಂಸೆಯನ್ನೂ, ಪ್ರಾಣಿವಧೆಯನ್ನೂ ವಿರೋಧಿಸಿದ ಎಂಬುದನ್ನು ನಾವು ಪರಿಶೀಲಿಸಬೇಕು. ಮೂಲತಃ ಪಶುಪಾಲನಾ ಬುಡಕಟ್ಟಾಗಿದ್ದ ಆರ್ಯರು, ಕೃಷಿಕ ಬುಡಕಟ್ಟಾಗಿದ್ದ ದ್ರಾವಿಡರ ಮೇಲೆ ಆಕ್ರಮಣ ಮಾಡಿದಾಗ ಕೆಲವು ಸಮಸ್ಯೆಗಳು ತಲೆದೋರಿದವು. ಕೃಷಿಗೆ ಅಗತ್ಯವಾಗಿದ್ದ ಪಶುಗಳು ಆರ್ಯರ ಆಹಾರವಾಗಿತ್ತು. ಬ್ರಾಹ್ಮಣ ವರ್ಣದವರೂ ಸೇರಿದಂತೆ ಅವರೆಲ್ಲರೂ ಪಶುಗಳನ್ನು ಸಾಕುತ್ತಿದ್ದದ್ದು, ಕೃಷಿಗೆ ಅಥವಾ ಹಾಲಿಗೆ ಅಲ್ಲ; ಬದಲಿಗೆ ತಿನ್ನಲು. ಈ ಕಾಲಘಟ್ಟದ ಕೃಷಿಕ ಸಮುದಾಯದ ಗಣಗಳ ನಾಯಕನ ಮಗನೇ ಗೌತಮ ಬುದ್ಧ. ನಂತರ ಆತ ಬುದ್ಧನಾದ ಮೇಲೆ ಆರ್ಯರ ಪಶುವಧೆಯಿಂದುಂಟಾಗುತ್ತಿದ್ದ ದುಷ್ಪರಿಣಾಮಗಳನ್ನು ನೋಡಿ ಪ್ರಾಣಿವಧೆಯನ್ನು ನಿಲ್ಲಿಸಬೇಕೆಂದು ಬೋಧಿಸಿದ್ದು ಎಂಬುದು ವಿದ್ವಾಂಸರ ಅಭಿಪ್ರಾಯ. ಆ ಕಾಲಘಟ್ಟದ ಬುಡಕಟ್ಟುಗಳ ಸಂಘರ್ಷದ ಭಾಗವಾಗಿ ಇದ್ದ ಕ್ರೂರ ಹಿಂಸೆ ಮತ್ತು ಬರ್ಬರತೆಗೆ ವಿರುದ್ಧವಾಗಿ ಅಹಿಂಸೆಯನ್ನೂ ಬೋಧಿಸಿರಬೇಕು.

ಹಾಗಿರುವಾಗ ಇಂದು ಬುದ್ಧನಿಗೆ ಸಸ್ಯಾಹಾರವನ್ನು ಆರೋಪಿಸಿ, ಬೌದ್ಧಧರ್ಮವನ್ನು ಸ್ವೀಕರಿಸಿದ ಅಂಬೇಡ್ಕರರ ಹುಟ್ಟಿದ ದಿನದಂದು ಮಾಂಸದ ಮಾರಾಟ ನಿಷೇಧವನ್ನು ಮಾಡುತ್ತಿರುವುದು ಎಷ್ಟು ಸರಿ? ಸಮಾಜದಲ್ಲಿ ಪ್ರಬಲವಾಗಿರುವ ಜಾತಿ/ಸಮುದಾಯ ಗಳು ತಮ್ಮ ಆಹಾರ ಪದ್ಧತಿಯನ್ನು ಇತರರ ಮೇಲೆ ಹೇರುವುದರ ಭಾಗವಾಗಿಯಷ್ಟೇ ಇದನ್ನು ನೋಡಬಹುದು. ಗಾಂಧಿ ಜಯಂತಿಯ ದಿನದಂದೂ ಸಹ ಮಾಂಸಾಹಾರ ನಿಷೇಧ ಮಾಡುವುದು ಸರಿಯಲ್ಲ. ಒಂದು ವೇಳೆ ಯಾವುದಾದರೂ ಒಂದು ಆಹಾರ ಪದ್ಧತಿ ಅಥವಾ ರೂಢಿಯು ಜನವಿರೋಧಿಯಾಗಿದೆ, ಅವೈಜ್ಞಾನಿಕವಾದುದ್ದಾಗಿದೆ ಎಂದಾದರೆ ಅದಕ್ಕೆ ಕಾನೂನು ರೂಪಿಸಿ ನಿಷೇಧಿಸಬೇಕು. ಅದು ಬಿಟ್ಟು ಸಾಂಕೇತಿಕ ವೆಂಬಂತೆ ಒಂದು ದಿನ ಮಾಡುವುದು ವೈಜ್ಞಾನಿಕವೂ ಅಲ್ಲ; ಜನಪರವೂ ಅಲ್ಲ. ಇನ್ನು ಮಾಂಸಾಹಾರವು ಅವೈಜ್ಞಾನಿಕ ಅಥವಾ ಜನವಿರೋಧಿ ಎಂದು ಹೇಳಲು ಯಾವ ಕಾರಣವೂ ಇಲ್ಲ. ಇಂದಿನ ಸಂದರ್ಭದಲ್ಲಂತೂ ಹಾಗೆ ಹೇಳುವುದು ಬಹುಸಂಖ್ಯಾತರ ಆಹಾರ ಪದ್ಧತಿಗೆ ಅವಮಾನ ಮಾಡುವುದಷ್ಟೇ ಆಗಿರುತ್ತದೆ.

ಹೀಗಾಗಿ ಒಳಗಿಂದೊಳಗೇ ನಡೆಯುವ ಇಂತಹ ವೈದಿಕಶಾಹಿ ಹುನ್ನಾರಗಳ ಬಗ್ಗೆ ನಾವು ಎಚ್ಚರವಾಗಿರಬೇಕು; ಅಂಬೇಡ್ಕರ್ ಜಯಂತಿಯ ದಿನ ಮಾಂಸ ಮಾರಾಟ ನಿಷೇಧವನ್ನು ವಾಪಸ್ ಪಡೆಯಲು ಒತ್ತಾಯಿಸಬೇಕು

ವಾಸು ಎಚ್.ವಿ.




ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಂಭ್ರಮ.

10/09/2010


ಜಿಲ್ಲಾಡಳಿತ, ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲೆಲ್ಲೂ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು. ಪುರಭವನ ಹಾಗೂ ಅಶೋಕಪುರಂ ಉದ್ಯಾನದ ಅಂಬೇಡ್ಕರ್ ಪ್ರತಿಮೆಗೆ ಜನತೆ ಸಾಲುಗಟ್ಟಿ ನಿಂತು ಮಾಲಾರ್ಪಣೆ ಮಾಡಿದರು. ಕೆಲವು ಬಡಾವಣೆಗಳಲ್ಲಿ ಹಬ್ಬದ ವಾತಾವರಣವಿದ್ದರೆ, ಇನ್ನು ಹಲವೆಡೆ ವಿಚಾರಸಂಕಿರಣಗಳು ನಡೆದವು.
ಜಿಲ್ಲಾಡಳಿತದ ಪರವಾಗಿ ಮೇಯರ್ ಪುರುಷೋತ್ತಮ್, ಜಿ.ಪಂ. ಅಧ್ಯಕ್ಷ ಧರ್ಮೇಂದ್ರ, ಸಂಸದರಾದ ಎಚ್.ವಿಶ್ವನಾಥ್, ಧ್ರುವನಾರಾಯಣ್, ಶಾಸಕರಾದ ವಿ.ಶ್ರೀನಿವಾಸಪ್ರಸಾದ್, ತನ್ವೀರ್ಸೇಠ್, ಸತ್ಯನಾರಾಯಣ್, ಸಂದೇಶ್ ನಾಗರಾಜ್, ಪ್ರಾದೇಶಿಕ ಆಯುಕ್ತೆ ಜಯಂತಿ, ಉಪ ಮೇಯರ್ ಶಾರದಮ್ಮ ಮತ್ತಿತರರು ಹಾಜರಿದ್ದು ನಮನ ಸಲ್ಲಿಸಿದರು.
ಮಿನಿ ದಸರಾ
ಅಶೋಕಪುರಂನಲ್ಲಿ ನಡೆದ ಜಯಂತಿ ಜಾಥಾ ಮಿನಿ ದಸರಾದಂತಿತ್ತು. ಜನಪದ ಕಲಾ ತಂಡಗಳ ಕಲಾ ಪ್ರದರ್ಷನದ ಮುಂದಾಳತ್ವದಲ್ಲಿ ಬುದ್ಧ-ಅಂಬೇಡ್ಕರ್ ಭಾವಚಿತ್ರ, ಪ್ರತಿಮೆಗಳ ಮೆರವಣಿಗೆಯಲ್ಲಿ ಸ್ಥಳೀಯರು ಭಾಗವಹಿಸಿದ್ದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿ ನಗರ ನಾಗರಿಕರ ಹಿತ ರಕ್ಷಣಾ ಸಮಿತಿ ವತಿಯಿಂದ ಗಾಂಧಿ ನಗರದಲ್ಲಿ ಸಂಜೆ ನಡೆದ ಮೆರವಣಿಗೆ ಅದ್ಧೂರಿಯಾಗಿತ್ತು. ಸಂಜೆ ಸುರಿದ ಮಳೆ ಕೂಡಾ ಸಡಗರಕ್ಕೆ ಯಾವುದೇ ಅಡಚಣೆ ಮಾಡಲಿಲ್ಲ. ಜಿಲ್ಲಾಧಿಕಾರಿ ಮಣಿವಣ್ಣನ್